ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಸ್ಥಳದಲ್ಲೇ ವಿವಿಧ ಸ್ಪರ್ಧೆಗಳು
ಪುತ್ತೂರು: ಪನಿಯಾಲ್ ಕೇರಳ ಮೂಲದ ಒಕ್ಕಲಿಗ ಯಾನೆ ವಕ್ಕಲಿಗರ ಸಮುದಾಯ ಸೇವಾ ಸಂಘದ 12ನೇ ವರ್ಷದ ವಾರ್ಷಿಕ ಮಹಾಸಭೆಯು ದರ್ಬೆ ಸಣ್ಣ ಕೈಗಾರಿಕಾ ಅಭಿವೃದ್ದಿ ಸಹಕಾರಿ ಸಂಘದ ಸಭಾ ಭವನದಲ್ಲಿ ಮೇ.25 ರಂದು ನಡೆಯಿತು. ವಿಶೇಷವಾಗಿ ಸಾಧಕರಿಗೆ, ಯುವ ಪ್ರತಿಭೆಗಳಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸ್ಥಳದಲ್ಲೇ ವಿವಿಧ ಸ್ಪರ್ಧೆಗಳು ನಡೆಯಿತು. ಸಂಘದ ಅಧ್ಯಕ್ಷ ರಾಧಾಕೃಷ್ಣ ವಕ್ಕಲಿಗ ಮತ್ತು ಅತಿಥಿಗಳು ಕಾರ್ಯಕ್ರಮ ಉದ್ಘಾಟಿಸಿದರು.
ಸಂಘದ ಮೂಲಕ ಬ್ಯಾಂಕ್ ಅಸ್ತಿತ್ವಕ್ಕೆ ಬರಬೇಕು
ಕಾಸರಗೋಡು ಪಂಜಿಕೊಳ ಪಾರ್ಥಸಾರಥಿ ದೇವಸ್ಥಾನದ ಅಧ್ಯಕ್ಷ ಸದಾನಂದ ನೆಕ್ಲಿ ಅವರು ಮಾತನಾಡಿ, ನಮ್ಮ ಹಿರಿಯರು ಕಷ್ಟಪಟ್ಟು ಕಟ್ಟಿದ ಸಂಘವೊಂದಿದ್ದರೆ ನಮ್ಮ ಸಮಾಜದ ಎಲ್ಲರಿಗೂ ಒಂದೇ ಒಂದು ದೇವಸ್ಥಾನವಾಗಿ ಪಾರ್ಥಸಾರಥಿ ಇದೆ. ದೇವರು ಎಲ್ಲಾ ಕಡೆ ಇದ್ದಾರೆ. ನಮ್ಮ ಸಮಾಜದ ಮೂಲಕ ಪೂಜೆ ಪಾರ್ಥಸಾರಥಿ ದೇವಸ್ಥಾನದಲ್ಲಿ ಆಗುತ್ತದೆ. ಈ ನಿಟ್ಟಿನಲ್ಲಿ ಸಮಾಜದ ಒಗ್ಗಟ್ಟಿಗಾಗಿ ಸಂಘಟನೆ ಮುಖ್ಯವಾಗಿ ಬೆಳೆಯಬೇಕು. ಅದಕ್ಕಾಗಿ ನಮ್ಮ ಸಂಘದ ಬ್ಯಾಂಕ್ ಅಸ್ತಿತ್ವಕ್ಕೆ ಬರಬೇಕು. ಇದಕ್ಕೆ ನಾವು ಕೂಡಾ ಸಹಕಾರ ನೀಡಬಹುದು. ನಮ್ಮ ಸಮಾಜದ ವ್ಯಕ್ತಿಗಳು ರಾಜಕೀಯವಾಗಿ ಮುಂದೆ ಬರಲು ಸಂಘದಲ್ಲಿ ರಾಜಕೀಯ ಶಿಕ್ಷಣವು ಇರಲಿ ಎಂದರು.
ಸಂಘದ ಮೂಲಕ ಭಜನಾ ಸಂಘ ಬೇಕು
ಉಡುಪಿ ನಿವೃತ್ತ ಎಸ್ ಐ ರಾಮಕೃಷ್ಣ ಅವರು ಮಾತನಾಡಿ, ಸಂಘಟನೆ ಎಂಬುದು ಮುಖ್ಯ ಅಸ್ತ್ರ. ಅದಕ್ಕಾಗಿ ನಾವು ತುಂಬಾ ಸಂಖ್ಯೆಯಲ್ಲಿ ಸೇರಬೇಕು. ಯುವ ವೇದಿಕೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದೆ. ಅದರಂತೆ ನಮ್ಮಲ್ಲಿನ ಸಂಪರ್ಕ, ಸಂಘಟನೆ ಬಲಗೊಳ್ಳಲು ಭಜನಾ ಸಂಘವು ಬೇಕು ಎಂದರು.
ದೈಹಿಕದ ಜೊತೆಗೆ ಮಾನಸಿಕ, ಆದ್ಯಾತ್ಮಿಕವಾಗಿ ತೊಡಗಿಸಿಕೊಳ್ಳಿ
ಉಡುಪಿಯ ಡಾ ಸುನಿಲ್ ಕುಮಾರ್ ಕನ್ನಡ್ಕ ಅವರು ಮಾತನಾಡಿ, ನಮ್ಮ ಜೀವನದಲ್ಲಿ ಆದಷ್ಟು ನಮ್ಮನ್ನು ನಾವು ಸಮಾಜದಲ್ಲಿ ತೊಡಗಿಸಿಕೊಳ್ಳಬೇಕು. ನಾವು ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಮತ್ತು ಇದಕ್ಕೆ ಸಂಬಂಧಿಸಿ ಆದ್ಯಾತ್ಮಿಕದಲ್ಲಿ ತೊಡಗಿಸಿಕೊಳ್ಳಬೇಕು. ಇದು ಸಂಘದ ಮೂಲಕ ಆಗಬೇಕು. ಅದಕ್ಕಾಗಿ ನಾವು ಸಮಾಜದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳಬೇಕೆಂದರು.
ಸಂಘದಲ್ಲಿ ಯುವ ವೇದಿಕೆ ಪಾತ್ರ ಮುಖ್ಯ:
ಸಭಾ ಅಧ್ಯಕ್ಷತೆ ವಹಿಸಿದ ಹರ್ಷಿತ್ ಬಿ.ಆರ್ ಅವರು ಮಾತನಾಡಿ, ನಮ್ಮ ಸಂಘ ಆಗಸದಷ್ಟು ಬೆಳೆಯಬೇಕು. ಹಾಗೇ ಬೆಳೆಯಬೇಕಾದರೆ ಕಡಲಿನ ಆಳಕ್ಕೆ ಸಂಘದ ಬೇರು ತಲುಪಬೇಕು. ಆಗ ಸಂಘ ಗಟ್ಟಿಯಾಗುತ್ತದೆ. ಈ ನಿಟ್ಟಿನಲ್ಲಿ ಯುವ ವೇದಿಕೆಯ ಪಾತ್ರ ಬಹಳ ಮುಖ್ಯ. ಸಂಘದ ಪ್ರತಿ ಕಾರ್ಯಕ್ರಮದಲ್ಲಿ ಯುವ ವೇದಿಕೆಯ ಎಲ್ಲರೂ ಭಾಗವಹಿಸಬೇಕೆಂದು ಕರೆ ನೀಡಿದರು.
ಬಲವಾದ ಕಾಲೂರುವ ಕೆಲಸ ಆಗಬೇಕಾಗಿದೆ
ಹಿರಿಯ ಸಾಹಿತಿ ಭಾಸ್ಕರ್ ಅವರು ಮಾತನಾಡಿ, ಸಂಘಟನೆಯಲ್ಲಿ ನಮ್ಮ ಸಮಾಜ ಕೊನೆಗೆ ಎಚ್ಚೆತ್ತುಕೊಂಡಿದೆ. ಇನ್ನು ಸಂಘಟನೆಯಿಂದ ಬಲವಾದ ಕಾಲೂರುವ ಕೆಲಸ ಆಗಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು. ನಮ್ಮ ಸಮಾಜದಲ್ಲಿ ಗುರಿಕಾರು ಇಲ್ಲದಿರುವುದು ಒಂದು ಲೋಪ ಎದ್ದು ಕಾಣುತ್ತಿದೆ. ನಾವು ಮಾಡಿದ್ದೆ ಸರಿ ಎನ್ನುವ ಹಾಗಿಲ್ಲ. ನಾವು ನಾಗರೀಕತೆಯೆಡೆಗೆ ಹೋಗಬೇಕು. ನಮ್ಮ ಸಮಾಜದ ವಿಚಾರಗಳುಲ್ಲ ಪುಸ್ತಕವನ್ನು ಓದಿ ವಿಚಾರ ಮನದಟ್ಟು ಮಾಡಿಕೊಳ್ಳಬೇಕೆಂದರು.
ಸನ್ಮಾನ:
ನಿವೃತ್ತ ಎಸ್ಪಿ ಭಾಸ್ಕರ್ ಒಕ್ಕಲಿಗ ಅವರನ್ನು ಇದೇ ಸಂದರ್ಭದಲ್ಲಿ ಸಂಘದಿಂದ ಸನ್ಮಾನಿಸಲಾಯಿತು. ಸನ್ಮಾನಿತ ಭಾಸ್ಕರ್ ಅವರು ಮಾತನಾಡಿ, ಸಂಘದ ಬೆಳವಣಿಗೆಗೆ ಪೂರಕವಾಗಿ ಎಲ್ಲಾ ಉತ್ತಮ ಕೆಲಸ ಕಾರ್ಯಗಳು ನಡೆಯಬೇಕೆಂದರು.
ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ:
ಬೆಸ್ಟ್ ಉಮೆನ್ ಅವಾರ್ಡ್ ಪಡೆದಿರುವ ಉಡುಪಿ ಎಲ್ಐಸಿಯ ಸಿಇಒ ಆಗಿರುವ ಶಶಿಕಲಾ, ಕ್ರೀಡಾಕೂಟದಲ್ಲಿ ವಿವಿಧ ಪ್ರಶಸ್ತಿಗಳನ್ನು ಪಡೆದ ಯುವ ಪ್ರತಿಭೆ ವರ್ಷಿತಾ ಎಮ್ ಅವರನ್ನು ವಿಶೇವಾಗಿ ಗೌರವಿಸಲಾಯಿತು. ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ನಿಶಾ ಟಿ ವಾರ್ಷಿಕ ವರದಿ ವಾಚಿಸಿದರು. ಭಾಸ್ಕರ ಬನ್ನೂರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಯುವ ವೇದಿಕೆ ಉಪಾಧ್ಯಕ್ಷೆ ಪ್ರಜ್ವಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ರಾಧಾಕೃಷ್ಣ ವಕ್ಕಲಿಗ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಮುಂದಿನ ಯೋಜನೆ ಕುರಿತು ಮಾತನಾಡಿದರು. ಶ್ರೀಲಕ್ಷ್ಮೀ, ಮೃನಾಲಿ, ಗೌತಮಿ, ಮೌನಿತ, ಪುನೀತಾ, ಶೋಭಾ ಅತಿಥಿಗಳನ್ನು ಪರಿಚಯಿಸಿದರು. ಸಂಘದ ಗೌರವಾಧ್ಯಕ್ಷ ಕೇಶವ ಸ್ವಾಗತಿಸಿದರು. ಜನಾರ್ದನ ವಂದಿಸಿದರು. ಶ್ರೀಲಕ್ಷ್ಮೀ, ಮೃನಾಲಿ ಪ್ರಾರ್ಥಿಸಿದರು. ಶೃತಿ, ಶಿಕ್ಷಕಿ ಪುನೀತಾ ಶಂಕರ್, ನಿಶಾ ಟಿ, ಪ್ರಜ್ವಲ, ಜನಾರ್ದನ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು. ಆಶಾ ಕಾರ್ಯಕರ್ತೆ ಸರಸ್ವತಿ ಅವರು ಅಧಿಕ ರಕ್ತದೊತ್ತಡ, ಮಧು ಮೇಹ ತಪಾಸಣೆ ಮಾಡಿದರು.
ಪದಾಧಿಕಾರಿಗಳು ಪುನರಾಯ್ಕೆ
ಸಂಘದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕುರಿತು ಸಭೆಯಲ್ಲಿ ಮಂಡಿಸಿದಾಗ ಈ ಹಿಂದಿನ ಪದಾಧಿಕಾರಿಗಳನ್ನೇ ಮುಂದುವರಿಸುವಂತೆ ಸಭೆಯಿಂದ ಕರತಾಳದ ಮೂಲಕ ಅನುಮೋದನೆ ನೀಡಿದರು. ಹಾಗಾಗಿ ಸಂಘದ ಅಧ್ಯಕ್ಷರಾಗಿ ರಾಧಾಕೃಷ್ಣ ಮಂಗಳೂರು, ಗೌರವಾಧ್ಯಕ್ಷರಾಗಿ ಕೇಶವ ಎಂ, ಉಪಾಧ್ಯಕ್ಷರಾಗಿ ಜನಾರ್ದನ ಸ್ಪಂಧನ ಉಡುಪಿ ಮತ್ತು ಶಂಕರ ಕೋಡಿಂಬಾಡಿ, ಕಾರ್ಯದರ್ಶಿ ನಿತ್ಯಾನಂದ ಇ, ಉಪಕಾರ್ಯದರ್ಶಿಯಾಗಿ ವಸಂತ ಹೊಸಮನೆ, ಕೋಶಾಧಿಕಾರಿಯಾಗಿ ಭಾಸ್ಕರ ಎ ಕೆಮ್ಮಾಯಿ, ಕಾನೂನು ಸಲಹೆಗಾರರಾಗಿ ವಿನಯ ಕುಮಾರ್ ಮಂಗಳೂರು ಪುನರಾಯ್ಕೆಗೊಂಡರು. ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಿತ್ಯಾನಂದ ನಿರ್ವಹಿಸಿದರು.