ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಕುಮಾರಮಂಗಲ ಹಿ.ಪ್ರಾ.ಶಾಲೆ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗಾಗಿ ನಡೆಯಲಿರುವ 3 ದಿವಸದ ಬೇಸಿಗೆ ಶಿಬಿರಕ್ಕೆ ಚಾಲನೆ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವು ಮೇ 26 ರಂದು ಕುಮಾರಮಂಗಲ ಶಾಲೆಯಲ್ಲಿ ಜರಗಿತು.
ಕಲಿಕೆಗೆ ಪೂರಕ- ಬಾಳಪ್ಪ ಪೂಜಾರಿ:
ಹಿರಿಯ ವಿದ್ಯಾರ್ಥಿ ಸಂಘದ ಗೌರವ ಸಲಹೆಗಾರ ಬಾಳಪ್ಪ ಪೂಜಾರಿರವರು ಬೇಸಿಗೆ ಶಿಬಿರ ಮತ್ತು ಹಿರಿಯ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗುವ ಇಂತಹ ಶಿಬಿರವನ್ನು ಹಮ್ಮಿಕೊಂಡಿರುವ ಹಿರಿಯ ವಿದ್ಯಾರ್ಥಿ ಸಂಘದ ಕಾರ‍್ಯ ಪ್ರಶಂಸನೀಯ ಎಂದರು.
ಸಂತಸದ ವಿಚಾರ- ಮಹೇಶ್ ಸವಣೂರು:
ಅಧ್ಯಕ್ಷತೆ ವಹಿಸಿದ್ದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕೆ.ಸವಣೂರುರವರು ಮಾತನಾಡಿ, ಶಿಬಿರದಲ್ಲಿ ಗ್ರಾಮೀಣ ಭಾಗದ 99 ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದ್ದು, ಊರವರು, ಎಸ್‌ಡಿಎಂಸಿ, ಹಿರಿಯ ವಿದ್ಯಾರ್ಥಿ ಸಂಘ ಎಲ್ಲರೂ ಒಂದಾಗಿ ಶಾಲೆಯ ಅಭಿವೃದ್ಧಿಗೆ ಶ್ರಮವಹಿಸುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.
ವಸತಿ ಶಾಲೆಯಾಗಿ ಪರಿವರ್ತನೆಯಾಗಬೇಕು- ಗಿರಿಶಂಕರ ಸುಲಾಯ:
ಮುಖ್ಯ ಅತಿಥಿಯಾದ ಸವಣೂರು ಗ್ರಾ.ಪಂ, ಸದಸ್ಯ ಗಿರಿಶಂಕರ ಸುಲಾಯ ದೇವಸ್ಯರವರು ಮಾತನಾಡಿ, ಕುಮಾರಮಂಗಲ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದು, ಈ ಶಾಲೆಯನ್ನು ವಸತಿ ಶಾಲೆಯಾಗಿ ಪರಿವರ್ತನೆ ಮಾಡಬೇಕೆಂದು ನಮ್ಮ ಬೇಡಿಕೆಯಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಸಂಬಂಧಪಟ್ಟವರಿಗೆ ಮನವಿಯನ್ನು ನೀಡಿದ್ದೇವೆ ಈ ಬಗ್ಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಶಾಲಾ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಕೃಷ್ಣಯ್ಯ ನೆಕ್ರಾಜೆ, ಸವಣೂರು ಗ್ರಾ.ಪಂ, ಅಧ್ಯಕ್ಷೆ ಸುಂದರಿ ಬಿ.ಎಸ್, ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಸದಸ್ಯೆ ಯಶೋಧ ನೂಜಾಜೆ, ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು, ಹಿರಿಯ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರಾಮಕೃಷ್ಣ ಕನ್ಯಾಮಂಗಲ, ಎಸ್‌ಡಿಎಂಸಿ ಅಧ್ಯಕ್ಷ ಸುಂದರ ಕನ್ಯಾಮಂಗಲ, ಉಪಾಧ್ಯಕ್ಷೆ ಹೇಮಲತಾ, ಸವಣೂರು ಹಾ.ಉ.ಸಹಕಾರ ಸಂಘದ ಉಪಾಧ್ಯಕ್ಷೆ ಆಶಾ ರೈ ಕಲಾಯಿರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಕವಿತಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿರಿಯ ವಿದ್ಯಾರ್ಥಿ ಸಂಘದ ಕೋಶಾಽಕಾರಿ ಪುಟ್ಟಣ್ಣ ಬಂಬಿಲ ವಂದಿಸಿದರು. . ಲಿಖಿತ್ ರೈ ಕಲಾಯಿ ಬುಡನಡ್ಕ ಕಾರ‍್ಯಕ್ರಮ ನಿರೂಪಿಸಿದರು. ಕಡಬ ತಾ.ಪಂ, ಮಾಜಿ ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಹಿರಿಯ ವಿದ್ಯಾರ್ಥಿ ಸಂಘದ ಜೊತೆ ಕಾರ‍್ಯದರ್ಶಿ ಉಮೇಶ್ ಬೇರಿಕೆ ಸವಣೂರು ಮತ್ತಿತರರು ಕಾರ‍್ಯಕ್ರಮದಲ್ಲಿ ಸಹಕರಿಸಿದರು.
ದಾಖಲೆ ಸಂಖ್ಯೆಯ ಶಿಬಿರಾರ್ಥಿಗಳು
ಗ್ರಾಮೀಣ ಭಾಗವಾದ ಕುಮಾರಮಂಗಲ ಶಾಲೆಯಲ್ಲಿ ಜರಗಿದ ಬೇಸಿಗೆ ಶಿಬಿರಕ್ಕೆ ಅಭೂತಪೂರ್ವ ಸ್ವಂಧನೆ ದೊರೆತಿದೆ. ಶಿಬಿರದಲ್ಲಿ 99 ಮಕ್ಕಳು ಭಾಗವಹಿಸುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದು, ಬೇಸಿಗೆ ರಜೆಯಲ್ಲಿ ಮಕ್ಕಳು ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.