ಕರೆಂಟ್ ಕಡಿತಗೊಂಡರೆ ಹಣವೂ ಕಡಿತ-ಕುಂಬ್ರದ ಎಟಿಎಂ ವಿರುದ್ಧ ಗ್ರಾಹಕರ ಆಕ್ರೋಶ

0

ಪುತ್ತೂರು: ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್‌ನಲ್ಲಿರುವ ಬ್ಯಾಂಕ್ ಆಫ್ ಬರೋಡ ಎಟಿಎಂ ಬಳಸುವ ಮುನ್ನ ಗ್ರಾಹಕರು ಎಚ್ಚರದಿಂದ ಇರಬೇಕಾಗಿದೆ. ಏಕೆಂದರೆ ನೀವು ಇಲ್ಲಿನ ಎಟಿಎಂಗೆ ಹಣ ಡ್ರಾ ಮಾಡಲು ಹೋದಾಗ ಅಪ್ಪಿತಪ್ಪಿ ಏನಾದರೂ ಕರೆಂಟ್ ಕಡಿತಗೊಂಡರೆ ನಿಮ್ಮ ಹಣವೂ ಕಡಿತಗೊಳ್ಳುವ ಸಾಧ್ಯತೆ ಇದೆ. ಏಕೆಂದರೆ ಈ ಎಟಿಎಂನಲ್ಲಿ ಇನ್ವರ್ಟರ್ ಅಥವಾ ಜನರೇಟರ್ ವ್ಯವಸ್ಥೆ ಇಲ್ಲದೇ ಇರುವುದೇ ಇದಕ್ಕೆ ಕಾರಣ.


ಎಟಿಎಂ ಮೆಷಿನ್‌ಗೆ ಕಾರ್ಡ್ ಹಾಕಿ, ಪಿನ್ ನಂಬರ್ ಮತ್ತು ಅಮೌಂಟ್ ಹಾಕಿ ಇನ್ನೇನು ಹಣ ಮೆಷಿನ್‌ನೊಳಗಿಂದ ಹಣ ಹೊರ ಬರುವಷ್ಟರಲ್ಲಿ ವಿದ್ಯುತ್ ಕಡಿತಗೊಂಡರೆ ಮೆಷಿನ್ ಸ್ಥಗಿತಗೊಳ್ಳುತ್ತದೆ. ಈ ವೇಳೆ ನಮ್ಮ ಅಕೌಂಟಿನಿಂದ ಹಣ ಕಡಿತಗೊಂಡ ಸಂದೇಶ ನಮ್ಮ ಮೊಬೈಲಿಗೆ ಬರುತ್ತದೆ, ಆದರೆ ಹಣ ನಮಗೆ ಸಿಗುವುದಿಲ್ಲ. ಇದರಿಂದಾಗಿ ಬಹಳಷ್ಟು ಗ್ರಾಹಕರು ಗಲಿಬಿಲಿಗೊಂಡು ಆತಂಕ್ಕಕ್ಕೀಡಾದ ಘಟನೆಗಳು ಕೂಡಾ ನಡೆದಿದೆ. ಮೆಷಿನ್ ಚಾಲೂ ಆದ ನಂತರ ಮತ್ತೆ ಈ ಹಣ ಬೇರೆ ಯಾರದ್ದಾದರೂ ಕೈಸೇರಬಹುದಾ ಎನ್ನುವ ಆತಂಕ ಕೂಡಾ ಗ್ರಾಹಕರನ್ನು ಕಾಡುತ್ತಿದೆ.


ಆದರೆ ಈ ಹಣ ನಿರ್ದಿಷ್ಟ ಸಮಯದ/ದಿನಗಳ ಬಳಿಕ ನಮ್ಮ ಅಕೌಂಟ್‌ಗೆ ವಾಪಸ್ ಜಮೆಗೊಳ್ಳುತ್ತದೆ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದರೂ ಕೂಡಾ ಇದು ಒಂದಷ್ಟು ಆತಂಕ ತರುತ್ತಿದ್ದು ಇದರ ವಿರುದ್ಧ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತುರ್ತು ಸಂದರ್ಭದಲ್ಲಿ ಗ್ರಾಹಕರು ಈ ಎಟಿಎಂನ್ನು ನಂಬಿ ಬಂದು ಹಣ ಡ್ರಾ ಮಾಡುವಾಗ ಈ ಸಮಸ್ಯೆ ಹಲವು ಬಾರಿ ತಲೆದೋರಿದ್ದು ಹಲವರು ತೊಂದರೆಗೆ ಸಿಲುಕಿದ ಉದಾಹರಣೆಗಳೂ ಇದೆ. ಇನ್ನು ಮಳೆಗಾಲ ಸಂದರ್ಭದಲ್ಲಿ ಆಗಾಗ ವಿದ್ಯುತ್ ಕಡಿತಗೊಳ್ಳುತ್ತಿರುವುದರಿಂದ ತುರ್ತಾಗಿ ಉತ್ತಮ ಇನ್ವರ್ಟರ್ ಅಥವಾ ಜನರೇಟರ್ ವ್ಯವಸ್ಥೆ ಮಾಡಬೇಕೆಂದು ಗ್ರಾಹಕರು ಆಗ್ರಹಿಸಿದ್ದಾರೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

ನನಗೆ ತುರ್ತಾಗಿ ಹಣದ ಅವಶ್ಯಕತೆ ಇದ್ದುದರಿಂದ ಕುಂಬ್ರದ ಬ್ಯಾಂಕ್ ಆಫ್ ಬರೋಡಾ ಎಟಿಎಂಗೆ ಹೋಗಿ ಹಣ ಡ್ರಾ ಮಾಡಲು ನೋಡಿದಾಗ ಪವರ್ ಕಡಿತಗೊಂಡು ಮೆಷಿನ್ ಆಫ್ ಆಯಿತು. ಈ ವೇಳೆ ನನ್ನ ಅಕೌಂಟಿನಿಂದ ಹಣ ಕಡಿತಗೊಂಡ ಸಂದೇಶ ಮೊಬೈಲಿಗೆ ಬಂತು. ಮೂರು ದಿನದ ಬಳಿಕ ಕಡಿತಗೊಂಡ ಹಣ ನನ್ನ ಅಕೌಂಟಿಗೆ ವಾಪಸ್ ಜಮೆ ಆಯಿತು. ಜನರು ತುರ್ತು ಸಂರ್ದಭಗಳಲ್ಲಿ ಈ ಎಟಿಎಂನಿಂದ ಹಣ ಡ್ರಾ ಮಾಡಲು ಮುಂದಾಗಿ ಈ ರೀತಿ ಆದರೆ ಅದಕ್ಕೆ ಯಾರು ಹೊಣೆ? ಬ್ಯಾಂಕ್‌ನವರು ಈ ಬಗ್ಗೆ ಯಾಕೆ ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ? ಕುಂಬ್ರಕ್ಕೆ ಉತ್ತಮ ಸೇವೆ ನೀಡುವ ಬ್ಯಾಂಕ್ ಹಾಗೂ ಎಟಿಎಂ ಬರಬೇಕಾದ ಅವಶ್ಯಕತೆಯಿದೆ.
-ಅಶೋಕ್ ಪೂಜಾರಿ ಬೊಳ್ಳಾಡಿ, ಉದ್ಯಮಿ

LEAVE A REPLY

Please enter your comment!
Please enter your name here