ಝೀರೋದಿಂದ 256 ಬೆಡ್ ನ ಮಕ್ಕಳ ಆಸ್ಪತ್ರೆ ಕಟ್ಟಿದ ಡಾ.ಧನಂಜಯ ಸರ್ಜಿ – ಕಡಿಮೆ ವೆಚ್ಚದ ವೈದ್ಯಕೀಯ ಚಿಕಿತ್ಸೆಗೆ ಒತ್ತು, 160 ಮಕ್ಕಳ ದತ್ತು – ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಶೋಗಾಥೆ

0

ಕೇವಲ ಹಣವೇ ಮುಖ್ಯವಾಗಿರದೇ ಕೈಗೆಟುಕುವ ದರದಲ್ಲಿ ಉತ್ಕೃಷ್ಟ ಸೇವೆ ಜನರಿಗೆ ಲಭ್ಯವಾಗುವ ಮೂಲಕ ಶಿವಮೊಗ್ಗ ಒಂದು ದೊಡ್ಡ ಹೆಲ್ತ್ ಹಬ್ ಆಗಬೇಕು. ಸರಕಾರ ಮಹಾನಗರ ಪಾಲಿಕೆ ಆಸ್ಪತ್ರೆಗಳನ್ನು ತೆರೆಯುವ ಮೂಲಕ ರೋಗಿಗಳಿಗೆ ಸಂಜೀವಿನಿ ಆಗಬೇಕು, ಪದವೀಧರರಿಗೆ ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗ ಸಿಗುವಂತೆ ಸರ್ಕಾರದ ಮೂಲಕ ಈಡೆರೀಸಬೇಕೆಂಬುದು ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಕ್ಕಳ ತಜ್ಞ ಡಾ.ಧನಂಜಯ ಸರ್ಜಿಯವರ ಕನಸು. ಮತದಾರ ಪ್ರಭು ಆಶೀರ್ವಾದಿಸಿದರೆ ತನ್ನ ಜೀವನದ ಹೆಚ್ಚಿನ ಸಮಯವನ್ನು ಸಮಾಜದ ಬಡವರಿಗಾಗಿ ಮೀಸಲಿಡಬೇಕೆಂಬ ಕನಸು ಹೊತ್ತುಕೊಂಡಿರುವ ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಬಗೆಗಿನ ಒಂದು ಪರಿಚಯ ಇಲ್ಲಿದೆ.

ಸಾಮಾನ್ಯ ರೈತ ಕುಟುಂಬದಲ್ಲಿ ಹುಟ್ಟಿದ ಡಾ.ಧನಂಜಯ ಸರ್ಜಿ ಸಣ್ಣ ಪ್ರಾಯದಲ್ಲೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಣ ಪಡೆದು ಬೆಳೆದು ಬಂದವರು. ಕಾಲೇಜು ದಿನಗಳಲ್ಲಿ ಅತ್ಯುತ್ತಮ ವಿದ್ಯಾರ್ಥಿಯಾಗಿದ್ದ ಸರ್ಜಿಯವರು ಇಂದು ಖ್ಯಾತ ಮಕ್ಕಳ ತಜ್ಞ. ಅವರ ಜೀವನ ಸಾಧನೆ ಅಪಾರವಾದದ್ದು. ಕಡಿಮೆ ವೆಚ್ಚದ ವೈದ್ಯಕೀಯ ಸೇವೆ ಜೊತೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡವರು. ಉತ್ಕೃಷ್ಟ ಗುಣಮಟ್ಟದ ಸೇವೆ, ಕೈಗೆಟುಕುವ ದರದಲ್ಲಿ ರೋಗಿಗಳಿಗೆ ಒಂದೇ ಸೂರಿನಡಿ ಸರ್ವ ರೀತಿಯ ಆರೋಗ್ಯ ಸೇವೆ ನೀಡುವ ಮೂಲಕ ಸರ್ಜಿ ಮಲೆನಾಡಿನ ಮನೆಮಾತಾಗಿದ್ದಾರೆ. ಖಾಸಗಿ ಆಸ್ಪತ್ರೆ ಗಳೆಂದರೆ ಬಿಲ್ ನೋಡುತ್ತಲೇ ರೋಗಿಯ ಎದೆ ಝಲ್ ಎನ್ನುತ್ತದೆ. ಆದರೆ, ಇದಕ್ಕೆ ತದ್ವಿರುದ್ಧ ಸರ್ಜಿ ಆಸ್ಪತ್ರೆ. 2014ರಲ್ಲಿ ಝೀರೋ ಬೆಡ್ ನಿಂದ ಆರಂಭಗೊಂಡ ಆಸ್ಪತ್ರೆ ಇಂದು 256 ಬೆಡ್ ಗೆ ತಲುಪಿದ್ದು ಪ್ರಸ್ತುತ ಆರೋಗ್ಯ ಕ್ಷೇತ್ರದ ‘ಹೀರೋ’ ಆಗಿ ಬೆಳೆದದ್ದು ಅಚ್ಚರಿಯ ಸಂಗತಿ.

ಸರಳ, ಸಜ್ಜನ, ಹಮ್ಮು ಬಿಮ್ಮು ಇಲ್ಲದ ಸಹೃದಯಿ ವ್ಯಕ್ತಿತ್ವದ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರೂ ಆದ ಡಾ.ಧನಂಜಯ ಸರ್ಜಿ ಮೂಲತಃ ದಾವಣಗೆರೆ ಜಿಲ್ಲೆ ಚೆನ್ನಗಿರಿ ತಾಲೂಕಿನ ಗೊತ್ತೇನಹಳ್ಳಿ ಗ್ರಾಮದವರು. ಸರ್ಜಿ ರುದ್ರಪ್ಪ, ತಾಯಿ ರೇಣುಕಾ ಅವರ ಪುತ್ರ. ಇವರ ಎಲ್ಲ ಸಾಧನೆಯ ಹಿಂದೆ ಪತ್ನಿ, ಆಸ್ಪತ್ರೆಯ ನಿರ್ದೇಶಕರೂ ಆದ ನಮಿತಾ ಸರ್ಜಿ ಅವರ ಶ್ರಮವೂ ಇದೆ. ದಾವಣಗೆರೆಯ ಜೆಜೆಎಂ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣದಲ್ಲಿ ಅತ್ಯುತ್ತಮ ವಿದ್ಯಾರ್ಥಿಯಾಗಿ ಹೊರಹೊಮ್ಮಿದ ಡಾ.ಧನಂಜಯ ಸರ್ಜಿ ಶಿಕ್ಷಣದ ಹಂತದಲ್ಲೇ ಜಿಲ್ಲೆಯ ಆರೋಗ್ಯ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಕನಸು ಕಂಡವರು. ಆ ಕನಸು ಈಗ ಸಾಕಾರಗೊಂಡಿದೆ. 2007ರ ಮಾರ್ಚ್ 18ರಂದು ಶಿವಮೊಗ್ಗದಲ್ಲಿ ‘ಸರ್ಜಿ ಚೈಲ್ಡ್ ಕೇರ್ ಸೆಂಟರ್’ ಮೂಲಕ ಸೇವೆ ಆರಂಭಗೊಂಡಿತ್ತು. ನಂತರ ಶಿವಮೊಗ್ಗದ ಖಾಸಗಿ ಆಸ್ಪತ್ರೆಗಳಲ್ಲಿ ತಿಂಗಳ ಸಂಬಳಕ್ಕೆ ಕೆಲಸ ಮಾಡಿದರು. 2014ರಂದು ಜೀರೊ ಹಾಸಿಗೆಯಿಂದ ಶುಭಾರಂಗೊಂಡ ಆಸ್ಪತ್ರೆ ಕೇವಲ 9 ವರ್ಷದಲ್ಲಿ 256 ಬೆಡ್ ವರೆಗೆ ತಲುಪಿದೆ.

ಜಿಲ್ಲಾಡಳಿತದಿಂದ ಪ್ರಶಂಸಾ ಪತ್ರ: ಎರಡು ವರ್ಷಗಳ ಹಿಂದೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮಕ್ಕಳ ಐಸಿಯು ವಿಭಾಗದಲ್ಲಿ ಬೆಂಕಿ ಕಾಣಿಸಿಕೊಂಡ ಸಂದರ್ಭ ನವಜಾತ 13 ಮಕ್ಕಳನ್ನೂ ಸರ್ಜಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಸರ್ಜಿ ಆಸ್ಪತ್ರೆಯಲ್ಲಿ ಈ ಶಿಶುಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡಿ ಕಾಪಾಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರಶಂಸಾ ಪತ್ರ ನೀಡುವ ಮೂಲಕ ಅವರ ಸೇವೆಯನ್ನು ಗುರುತಿಸಿ ಬೆನ್ನು ತಟ್ಟಿ ಪ್ರೋತ್ಸಾಹಿಸಿತ್ತು.

ಇಂದು ಒಂದೇ ಸೂರಿನಡಿ ಉತ್ಕೃಷ್ಟ ಹಾಗೂ ನಗುಮೊಗದ ವಿಶ್ವಾಸಾರ್ಹ ಸೇವೆ, ಎಲ್ಲಾ ರೀತಿಯ ಚಿಕಿತ್ಸಾ ಸೌಲಭ್ಯ, ಕೈಗೆಟುಕುವ ದರದಲ್ಲಿ ಸಿಗುತ್ತಿದ್ದು ರಾಜ್ಯದ ಧಾರವಾಡ, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ಶಿರಸಿ, ಚಿಕ್ಕಮಗಳೂರು, ಹಾಸನ, ಅರಸೀಕರ ಹಾಗೂ ತುಮಕೂರು, ಬೆಂಗಳೂರು ಜಿಲ್ಲೆಗಳಿಂದ ನಿತ್ಯವೂ ನೂರಾರು ರೋಗಿಗಳು ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ಒಟ್ಟು 75 ಐಸಿಯು ಬೆಡ್ ಗಳು, ಆಪರೇಷನ್ ಥಿಯೇಟರ್ ಗಳ ಸೌಲಭ್ಯವಿರುವ ಎರಡೂ ಸರ್ಜಿ ಆಸ್ಪತ್ರೆಗಳಲ್ಲಿ ವರ್ಷಕ್ಕೆ ಎರಡು ಲಕ್ಷ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಪ್ರತಿದಿನ ಸರಾಸರಿ 500ರಿಂದ 750 ರೋಗಿಗಳ ವೈದ್ಯಕೀಯ ತಪಾಸಣೆ ನಡೆಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾತ್ರವಲ್ಲದೇ ವರ್ಷದಲ್ಲಿ 1800ರಿಂದ 2000 ವರೆಗೆ ಮಹಿಳೆಯರು ಇಲ್ಲಿ ಹೆರಿಗೆಗಾಗಿ ಆಗಮಿಸುತ್ತಿದ್ದು, ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.

ಬಂಜೆತನ ನಿವಾರಣೆ ಹೆಜ್ಜೆ: ಐವಿಎಫ್ ಸೆಂಟರ್ (ಬಂಜೆತನ ನಿವಾರಣಾ ಕೇಂದ್ರ) ಸೇರಿದಂತೆ ಭ್ರೂಣ ಹಂತದಲ್ಲಿರುವ ಶಿಶುವಿನಿಂದ ತೊಡಗಿ ಹಿರಿಯ ನಾಗರಿಕರವರೆಗೂ ಸರ್ವ ರೀತಿಯ ಆರೋಗ್ಯ ಸೇವೆ ‘ಸರ್ಜಿ’ಆಸ್ಪತ್ರೆಯಲ್ಲಿ ಲಭ್ಯ. ಸರ್ಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಎಲ್ಲಾ ವಿಭಾಗದಲ್ಲಿ ಒಟ್ಟು 30 ಕನ್ನಲೈಂಟ್ ವೈದ್ಯರಿದ್ದು, ಸೂಕ್ತ ಚಿಕಿತ್ಸೆ ಲಭ್ಯವಿದೆ. 12 ಭಾಷೆಗಳಲ್ಲಿ ವೈದ್ಯರು ನೀಡುವ ವೈದ್ಯಕೀಯ ಸೂಚನೆಗಳನ್ನು ರೋಗಿಗಳಿಗೆ ಅನುಕೂಲವಾಗುವ ಭಾಷೆಯಲ್ಲಿ ವೈದ್ಯರು ಬರೆದುಕೊಡುವುದು ಇಲ್ಲಿನ ವಿಶೇಷತೆ. ಜಿಲ್ಲೆಯ ಆರೋಗ್ಯ ಕ್ಷೇತ್ರದ ಇತಿಹಾಸದಲ್ಲಿ ಕಡಿಮೆ ಅವಧಿಯಲ್ಲಿ ಅಭಿವೃದ್ಧಿಗೊಂಡ ಶ್ರೇಯಸ್ಸು ಸರ್ಜಿ ಆಸ್ಪತ್ರೆಗೆ ಸಲ್ಲುತ್ತದೆ.

160 ಮಕ್ಕಳ ದತ್ತು: ಸಾಮಾಜಿಕ ಕಳಕಳಿ ಹೊಂದಿರುವ ಡಾ.ಧನಂಜಯ ಸರ್ಜಿ ಅವರು 2016ರಲ್ಲಿ ಮಕ್ಕಳ ದಿನಾಚರಣೆ ಸಂದರ್ಭ 160 ವಿಶೇಷಚೇತನ ಹಾಗೂ ಅನಾಥ ಮಕ್ಕಳನ್ನು ಆರೋಗ್ಯಕ್ಕೆ ಸಂಬಂಧಿಸಿದಂತೆ ದತ್ತು ಪಡೆದಿದ್ದಾರೆ. ಇತ್ತೀಚೆಗೆ ‘ಸರ್ಜಿ ಫೌಂಡೇಷನ್’ ಎಂಬ ದತ್ತು ಸಂಸ್ಥೆಯನ್ನು ಆರಂಭಿಸಿದ್ದು, ಸಂಸ್ಥೆಯ ಮೂಲಕ ಈ ಎಲ್ಲಾ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ವಿಶೇಷ ಕಾಳಜಿ ವಹಿಸಿರುವುದು ಸರ್ಜಿ ಅವರ ಮಾನವೀಯ ಗುಣವನ್ನು ಎತ್ತಿತೋರಿಸುತ್ತದೆ. 2 ಸಾವಿರ ಮಕ್ಕಳಿಗೆ ಉಚಿತವಾಗಿ ಟೈಫಾಯಿಡ್ ವ್ಯಾಕ್ಸಿನೇಷನ್ ನೀಡಿರುವುದು ಸರ್ಜಿ ಸೇವೆಯ ಪಟ್ಟಿಯಲ್ಲಿದೆ.

ಆಟೊ ಚಾಲಕರಿಗೆ ಹೆಲ್ತ್ ಕಾರ್ಡ್: ಆಯುಸ್ಮಾನ್ ಭಾರತ್ ಯೋಜನೆ ಅಡಿ ಸಾವಿರಾರು ಮಕ್ಕಳಿಗೆ ಚಿಕಿತ್ಸಾ ಸೌಲಭ್ಯ ನೀಡುವುದರೊಂದಿಗೆ ಶಿವಮೊಗ್ಗ ಜಿಲ್ಲೆಯ 3000 ಅಟೋ ಚಾಲಕರಿಗೆ ಸರ್ಜಿ ಆಸ್ಪತ್ರೆಯಿಂದ ಹೆಲ್ತ್ ಕಾರ್ಡ್‌ಗಳನ್ನು ನೀಡಿ ಅವರ ಆರೋಗ್ಯದ ಕಾಳಜಿ ವಹಿಸಿದೆ. ಪ್ರತಿ ತಿಂಗಳು ಉಚಿತ ಆರೋಗ್ಯ ಅರಿವು ಶಿಬಿರ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ.

ಕೊರೊನಾ ಕೈ ಮೀರಿದಾಗ ಯುನಿಟಿ ಆಸ್ಪತ್ರೆ ಸಹಯೋಗದಲ್ಲಿ ಸಹಾಯವಾಣಿ ಮೂಲಕ ಸೇವೆ ಸಲ್ಲಿಸಿದ ಸರ್ಜಿ ಆಸ್ಪತ್ರೆ ಜನಮಾನಸದಲ್ಲಿ ನೆಲೆನಿಂತಿದೆ.


LEAVE A REPLY

Please enter your comment!
Please enter your name here