ಪುತ್ತೂರು:ವಿದ್ಯಾರ್ಥಿಗಳಲ್ಲಿ ಕೌಶಲ್ಯದ ಜೊತೆ ಒಂದಿಷ್ಟು ಸಂಸ್ಕಾರವೂ ಇರಬೇಕು.ಅದರೊಂದಿಗೆ ಸದ್ವಿನಯ ಇದ್ದರೆ ನಿಜವಾಗಲೂ ನಾವು ಜೀವನದಲ್ಲಿ ಗೆಲ್ಲುತ್ತೇವೆ. ಸಂಸ್ಕೃತಿ ಎಂಬುವುದು ಕಾಲಕ್ಕಿಂತ ಹಳೆಯದು, ಆದ್ದರಿಂದ ಸಂಸ್ಕೃತಿಯನ್ನು ಬಿಡದೆ, ಅದನ್ನು ಉಳಿಸಿಕೊಂಡು ಜೀವನದಲ್ಲಿ ನಾವು ಯಶಸ್ಸು ಗಳಿಸಬಹುದು. ಜಗತ್ತಿನ ಮುಂದೆ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದು ವಿದ್ಯಾರ್ಥಿಗಳ ಕರ್ತವ್ಯ ಎಂದು ಪುತ್ತೂರಿನ ಖ್ಯಾತ ಭರತನಾಟ್ಯ ಕಲಾವಿದ ವಿದ್ವಾನ್ ದೀಪಕ್ ಕುಮಾರ್ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ಕಲಾ ವಿಭಾಗ, ಮಾನವಿಕ ಸಂಘ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ನಡೆದ ಕೌಶಲ್ಯ ಆಧರಿತ ಕಲಾ ಸಾಮ್ರಾಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಜೀವನದಲ್ಲಿ ಬರುವ ಎಲ್ಲಾ ಸವಾಲುಗಳನ್ನು ಎದುರಿಸಿ ಹೇಗೆ ಬದುಕಬೇಕು ಎಂಬುದನ್ನು ನಮಗೆ ಕಲಾವಿಭಾಗ ಕಲಿಸಿಕೊಡುತ್ತದೆ. ವಿದ್ಯಾರ್ಥಿಗಳು ತರ್ಕಬದ್ದ ಚಿಂತನೆ ಮಾಡಬೇಕು. ಯಾವುದೇ ಪ್ರಚಾರದ ಹಿಂದೆ ಹೋಗದೆ ಯಾವುದೇ ಆಸೆ ಆಮಿಷಗಳಿಲ್ಲದೆ ಸಾಧನೆ ಮಾಡಿದವರನ್ನು ಗುರುತಿಸುವ ಕಾರ್ಯ ನಮ್ಮದಾಗಬೇಕು. ಸಮಾಜದ ಏಳಿಗೆಗೆ ಕಲಾವಿಭಾಗ ಬಹು ಮುಖ್ಯ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾಲೇಜಿನ ವಿಶೇಷ ಅಧಿಕಾರಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ನಾಯ್ಕ್ ಬಿ ಕಾರ್ಯಕ್ರಮದ ಕುರಿತು ಪ್ರಾಸ್ತವಿಕ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ, ವಿಶೇಷ ಸಾಧನೆ ಮಾಡಿದ ಭರತನಾಟ್ಯ ಕಲಾವಿದ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ದಂಪತಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನಲ್ಲಿ ಹಲವು ವರ್ಷಗಳ ಕಾಲ ನಿಷ್ಠೆಯಿಂದ ಸೇವೆ ಸಲ್ಲಿಸಿದ ಬಾಬಣ್ಣಗೌಡರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಪರೀಕ್ಷಾಂಗ ಕುಲ ಸಚಿವ ಡಾ. ಎಚ್. ಜಿ ಶ್ರೀಧರ್, ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್, ಕಲಾ ವಿಭಾಗದ ಡೀನ್ ಮತ್ತು ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸಿ ದುರ್ಗಾ ರತ್ನ , ಹಾಗೂ ಮಾನವಿಕ ಸಂಘದ ಸಂಯೋಜಕ ಮತ್ತು ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ವಿಷ್ಣುಕುಮಾರ್ ಎ ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕ ತೃತೀಯ ಕಲಾ ವಿಭಾಗದ ಅಂಕಿತ್ ರೈ ಸ್ವಾಗತಿಸಿ, ರಮಾ ಭಾಗಿರಥಿ ವಂದಿಸಿ, ಅನನ್ಯ ಕಾಟೂರ್ ಕಾರ್ಯಕ್ರಮವನ್ನು ನಿರ್ವಹಿಸಿದರು.
ಸಮಾರೋಪ ಕಾರ್ಯಕ್ರಮ
ಸಮಾರೋಪ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅತಿಥಿ, ಮಹಿಳಾ ಪ್ರಥಮ ದರ್ಜೆ ಕಾಲೇಜು, ಪುತ್ತೂರು ಇದರ ಸಹಾಯಕ ಪ್ರಾಧ್ಯಾಪಕಿ, ಸಾಧಕಿ ಪೂರ್ಣಿಮಾ ರವಿ, ಸತತ ಹುಡುಕಾಟ ಮತ್ತು ಪ್ರಯತ್ನದ ನಂತರವೇ ಯಶಸ್ಸು ನಮ್ಮದಾಗುವುದು. ಅದಕ್ಕೆಲ್ಲ ಬೇಕಾಗಿರುವುದು ಛಲ ಹಾಗೂ ಸಾಧಿಸುವ ಮನಸ್ಸು . ಜೀವನದಲ್ಲಿ ದೃಢ ನಿರ್ಧಾರ, ಶ್ರದ್ಧೆ, ಮತ್ತು ಶಿಸ್ತು ಇದ್ದಾಗ ನಾವು ಅಂದುಕೊಂಡ ಗುರಿ ತಲುಪಬಹುದು. ಆಸಕ್ತಿಯ ಕ್ಷೇತ್ರದಲ್ಲಿ ಎಡೆಬಿಡದೆ ಪ್ರಯತ್ನ ಮಾಡಿದಾಗ ಮಾತ್ರ ನಾವು ಉನ್ನತ ಸ್ಥಾನಕ್ಕೆ ಏರಲು ದಾರಿಯಾಗುತ್ತದೆ.ಬದುಕಿನಲ್ಲಿ ಹಣ ಮುಖ್ಯವಲ್ಲ, ನಾವು ಸಮಾಜಕ್ಕೆ ಕೊಡುಗೆಯನ್ನು ನೀಡಿದಾಗ ಮಾತ್ರ ಬದುಕು ಸಾರ್ಥಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗಾಗಿ ಅನೇಕ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು. ರಾಣಿ ಪದ್ಮಾವತ್ ತಂಡ ಚಾಂಪಿಯನ್ಶಿಪ್ ಪಡೆದುಕೊಂಡರೆ ಮಹಾರಾಣಾ ಪ್ರತಾಪ್ ತಂಡ ರನ್ನರ್ಸ್ ಗಳಾಗಿ ಹೊರಹೊಮ್ಮಿದರು.ಕಾರ್ಯಕ್ರಮವನ್ನು ತೃತೀಯ ಕಲಾವಿಭಾಗದ ವಿದ್ಯಾರ್ಥಿನಿಯರಾದ ನಿಶಾ ಶೆಟ್ಟಿ ಸ್ವಾಗತಿಸಿ, ದೀಕ್ಷಿತಾ ಗಿರೀಶ್ ವಂದಿಸಿ, ಸುಪ್ರಿಯ ಹೊಸಮನೆ ನಿರ್ವಹಿಸಿದರು,ಚೈತ್ರ ಭಟ್ ಸಹಕರಿಸಿದರು.