‘ಅರಿಯಡ್ಕ ಉತ್ಸವ’ಕ್ಕೆ ಚಾಲನೆ

0

ಮಂದಿರ, ಮಸೀದಿಗೆ ಕೊಡುಗೆಗಳ ಹಸ್ತಾಂತರ

ಪುತ್ತೂರು: ಅರಿಯಡ್ಕ ವಯಲ ಕಾಂಗ್ರೆಸ್ ವತಿಯಿಂದ ನ.30ರಂದು ಕೌಡಿಚ್ಚಾರ್ ಜಂಕ್ಷನ್‌ನಲ್ಲಿ ಅರಿಯಡ್ಕ ಉತ್ಸವ ನಡೆಯಲಿದ್ದು ಆ ಪ್ರಯುಕ್ತ ಕೌಡಿಚ್ಚಾರು ಭಜನಾ ಮಂದಿರ ಮತ್ತು ಅರಿಯಡ್ಕ ಮಸೀದಿಗೆ ಕೊಡುಗೆಗಳನ್ನು ಕೊಡುವ ಮೂಲಕ ಉತ್ಸವಕ್ಕೆ ನ.27ರಂದು ಚಾಲನೆ ನೀಡಲಾಯಿತು.


ಕೌಡಿಚ್ಚಾರ್ ಶ್ರೀಕೃಷ್ಣ ಭಜನಾ ಮಂದಿರಕ್ಕೆ ಟೇಬಲ್ ಫ್ಯಾನ್‌ನ್ನು ಕೊಡುಗೆಯಾಗಿ ನೀಡಿ ಉತ್ಸವದ ಯಶಸ್ಸಿಗೆ ಪ್ರಾರ್ಥಿಸಲಾಯಿತು. ಭಜನಾ ಮಂದಿರದ ಅಧ್ಯಕ್ಷ ರಾಮ್‌ದಾಸ್ ರೈಯವರು ಕೊಡುಗೆಯನ್ನು ಸ್ವೀಕರಿಸಿ ಮಾತನಾಡಿ, ಅರಿಯಡ್ಕ ಉತ್ಸವ ಪ್ರಯುಕ್ತ ಊರಿನ ಧಾರ್ಮಿಕ ಕೇಂದ್ರಗಳಿಗೆ ಕೊಡುಗೆ ಕೊಡುತ್ತಿರುವುದು ಉತ್ತಮ ಕಾರ್ಯವಾಗಿದೆ, ಭಜನಾ ಮಂದಿರ ರಸ್ತೆ ಅಭಿವೃದ್ಧಿಗೂ ಶಾಸಕ ಅಶೋಕ್ ರೈಯವರು 5 ಲಕ್ಷ ರೂ ಅನುದಾನ ಕೊಟ್ಟಿದ್ದು ಅವರಿಗೆ ಇನ್ನಷ್ಟು ಕೆಲಸ ಮಾಡಲು ದೇವರು ಶಕ್ತಿ ನೀಡಲಿ ಎಂದು ಅವರು ಪ್ರಾರ್ಥಿಸಿದರು.


ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಶಾಸಕ ಅಶೋಕ್ ರೈಯವರು ಗ್ರಾಮೀಣ ಭಾಗಗಳ ಅಭಿವೃದ್ಧಿಗೂ ವಿಶೇಷ ಒತ್ತು ಕೊಡುತ್ತಿದ್ದು ಭಜನಾ ಮಂದಿರ, ದೇವಸ್ಥಾನ, ಮಸೀದಿ, ಚರ್ಚ್‌ಗಳಿಗೂ ಅನುದಾನ ಕೊಡುತ್ತಿದ್ದಾರೆ, ಅರಿಯಡ್ಕ ಗ್ರಾಮಕ್ಕೆ ಕೋಟ್ಯಾಂತರ ಅನುದಾನ ನೀಡಿದ್ದು ಅದನ್ನು ಸಂಭ್ರಮಿಸುವ ಸಲುವಾಗಿ ಅರಿಯಡ್ಕ ಉತ್ಸವ ಹೆಸರಿನಲ್ಲಿ ನ.30ರಂದು ಕಾರ್ಯಕ್ರಮ ನಡೆಯಲಿದೆ, ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಾದರೆ ನಮ್ಮ ಊರು ಹೆಚ್ಚಿನ ಅಭಿವೃದ್ಧಿ ಸಾಧಿಸುತ್ತದೆ ಎಂದು ಹೇಳಿದರು.


ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಮಾತನಾಡಿ, ನ.30ರಂದು ನಡೆಯುವ ಅರಿಯಡ್ಕ ಉತ್ಸವದ ಹಿನ್ನೆಲೆಯಲ್ಲಿ ಭಜನಾ ಮಂದಿರ ಹಾಗೂ ಮಸೀದಿಗೆ ಕೊಡುಗೆ ನೀಡಲು ನಿರ್ಧರಿಸಿದ್ದು ಅದನ್ನು ಹಸ್ತಾಂತರಿಸಿದ್ದೇವೆ, ಧಾರ್ಮಿಕ ಕೇಂದ್ರಗಳನ್ನು ಗೌರವಿಸುವುದರಿಂದ ಊರಿಗೆ ಒಳಿತಾಗುತ್ತದೆ ಮತ್ತು ನಮ್ಮ ಕಾರ್ಯಕ್ರಮದ ಯಶಸ್ಸಿಗೂ ಕಾರಣವಾಗುತ್ತದೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಪ್ರಮುಖರಾದ ಶೇಷಪ್ಪ ನಾಯ್ಕ ಹೊಸಗದ್ದೆ, ಕೊರಗಪ್ಪ ಗೌಡ ಕೌಡಿಚ್ಚಾರು, ಕರುಣಾಕರ ಗೌಡ, ಸಂತೋಷ್ ಕುಲಾಲ್ ಕೌಡಿಚ್ಚಾರು, ಚಂದ್ರಶೇಖರ ಮಣಿಯಾಣಿ ಕುರಿಂಜ, ಸತೀಶ್ ಶೇಕಮಲೆ, ರಫೀಕ್ ದರ್ಖಾಸ್, ಬಶೀರ್ ಕೌಡಿಚ್ಚಾರು, ರಿಯಾಜ್ ಶೇಕಮಲೆ ಉಪಸ್ಥಿತರಿದ್ದರು.

ಅರಿಯಡ್ಕ ಮಸೀದಿಗೆ ದಾರಿದೀಪ ಕೊಡುಗೆ:
ಅರಿಯಡ್ಕ ಉತ್ಸವ ಪ್ರಯುಕ್ತ ಅರಿಯಡ್ಕ ಜುಮಾ ಮಸೀದಿಗೆ ಸೋಲಾರ್ ದಾರಿದೀಪವನ್ನು ಕೊಡುಗೆಯಾಗಿ ನೀಡಲಾಯಿತು. ಅರಿಯಡ್ಕ ಖತೀಬ್ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರು ಮಾತನಾಡಿ ಗ್ರಾಮದ ಅಭಿವೃದ್ಧಿ, ಅನುದಾನಗಳ ವಿಚಾರದಲ್ಲಿ ಹಮ್ಮಿಕೊಂಡಿರುವ ಅರಿಯಡ್ಕ ಉತ್ಸವದ ಹಿನ್ನೆಲೆಯಲ್ಲಿ ನಮ್ಮ ಮಸೀದಿಗೆ ದಾರಿದೀಪದ ಮುಖಾಂತರ ಬೆಳಕನ್ನು ಕೊಡುವ ಕಾರ್ಯವನ್ನು ಮಾಡಿರುವುದು ಸಂತೋಷವಾಗಿದೆ. ಜಾತಿ,ಧರ್ಮ,ಬೇಧವಿಲ್ಲದೇ ಎಲ್ಲರೂ ಸೇರಿಕೊಂಡು ಕೊಟ್ಟಿರುವ ಕೊಡುಗೆಯ ಫಲವಾಗಿ ಎಲ್ಲರ ಮನಸ್ಸು ಬೆಳಗಲಿ ಎಂದು ಶುಭ ಹಾರೈಸಿದ ಅವರು ಶಾಸಕರಿಗೆ ಇನ್ನಷ್ಟು ಜನಪರವಾದ ಕೆಲಸಗಳನ್ನು ಮಾಡಲು ದೇವರು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು.


ಸ್ವಾಗತಿಸಿದ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಮಾತನಾಡಿ ನಾವು ಅರಿಯಡ್ಕ ಉತ್ಸವ ಪ್ರಯುಕ್ತ ಭಜನಾ ಮಂದಿರಕ್ಕೆ ಮತ್ತು ಮಸೀದಿಗೆ ಕೊಡುಗೆಗಳನ್ನು ಹಸ್ತಾಂತರಿಸಿದ್ದು ಕಾರ್ಯಕ್ರಮದ ಯಶಸ್ಸಿಗೆ ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅರಿಯಡ್ಕ ಜುಮಾ ಮಸೀದಿಯ ಪ್ರದಾನ ಕಾರ್ಯದರ್ಶಿ ಪಿ.ಎಂ ಅಬ್ಬಾಸ್, ಯೂಸುಫ್ ಹಾಜಿ, ಸಾರ್ಥಕ್ ರೈ ಅರಿಯಡ್ಕ, ಅಬೂಬಕ್ಕರ್ ಮುಸ್ಲಿಯಾರ್, ಎ.ಆರ್ ಇಬ್ರಾಹಿಂ, ಕರೀಂ ಬಾಹಸನಿ, ರಫೀಕ್ ದರ್ಖಾಸ್, ಬಶೀರ್ ಕೌಡಿಚ್ಚಾರ್, ರಿಯಾಜ್ ಶೇಕಮಲೆ, ರಫೀಕ್ ಜಾರತ್ತಾರು, ಸತೀಶ್ ಎಸ್, ಚಂದ್ರಶೇಖರ ಮಣಿಯಾಣಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here