ಪುತ್ತೂರು: ಪುತ್ತೂರಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ 39 ವರ್ಷಗಳಿಂದ ದೈಹಿಕ ಶಿಕ್ಷಣ ಶಿಕ್ಷಕಿಯಾಗಿರುವ ಸುನೀತಾ ಎಂ.ಮೇ.31ರಂದು ಸೇವಾ ನಿವೃತ್ತಿ ಹೊಂದಲಿದ್ದಾರೆ.
ಮೂಲತಃ ಬಂಟ್ವಾಳ ತಾಲೂಕಿನ ಕಾವಳಕಟ್ಟೆ ಪಿಜತ್ರೋಡಿಯವರಾಗಿರುವ ಸುನೀತಾರವರು ಮಾಯಿಲಪ್ಪ ಪೂಜಾರಿ ಮತ್ತು ರಾಧಮ್ಮ ದಂಪತಿ ಪುತ್ರಿ.ಚೆನ್ನೈತ್ತೋಡಿ ಮೂರ್ಜೆ ಶಾಲಾ ಸಿ.ಆರ್.ಪಿ.ಶ್ರೀ ನಿತ್ಯಾನಂದ ಅವರ ಪತ್ನಿ. ತನ್ನ ಪ್ರಾಥಮಿಕ,ಪ್ರೌಢ,ಪ.ಪೂ.ಶಿಕ್ಷಣವನ್ನು ಮೂರ್ಜೆ, ಪುಂಜಾಲಕಟ್ಟೆ,ಇಲ್ಲಿ ಪೂರ್ಣ ಗೊಳಿಸಿ ಮುಂದೆ ವೈ.ಎಂ.ಸಿ.ಎ, ಕಾಲೇಜು ಬೆಂಗಳೂರು ಇಲ್ಲಿ ಸಿಪಿಎಡ್ ಕ್ರೀಡಾ ಶಿಕ್ಷಣ ತರಬೇತಿ ಪಡೆದು 1958 ಸೆ.23ರಂದು ಅಂದಿನ ಶ್ರೀ ರಾಮಕೃಷ್ಣ ಹೆಮ್ಮಕ್ಕಳ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿಯಾಗಿ ಕರ್ತವ್ಯಕ್ಕೆ ಸೇರಿದರು.ತಮ್ಮ ವಿದ್ಯಾರ್ಥಿಗಳನ್ನು ಸ್ಕೌಟ್ಸ್,ಗೈಡ್ಸ್, ಗಳಲ್ಲಿ ತರಬೇತು ಗೊಳಿಸಿ ದೇಶ ಸೇವಾ ಮನೋಭಾವ ಮೂಡಿಸುವುದರೊಂದಿಗೆ ಕರಾಟೆ,ಬಾಲ್ ಬ್ಯಾಡ್ಮಿಂಟನ್, ವಾಲಿಬಾಲ್,ಹರ್ಡಲ್ಸ್,ಹೈಜಂಪ್ ಕ್ರೀಡೆಗಳಲ್ಲಿ ವಲಯ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಸಾಧನೆಮಾಡುವಂತೆ ಪ್ರೋತ್ಸಾಹಿಸಿರುತ್ತಾರೆ. ಸುನೀತಾರ ಸೇವಾವಧಿಯಲ್ಲಿ 2023-24ನೇ ಸಾಲಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟವು ತನ್ನ ನೆಚ್ಚಿನ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಯಶಸ್ವಿಯಾಗಿ ನಡೆಯುವಲ್ಲಿ ಶಾಲಾ ಆಡಳಿತ ಮಂಡಳಿ, ಮುಖ್ಯ ಗುರು,ಅಧ್ಯಾಪಕ ವೃಂದದವರೊಂದಿಗೆ ಸಹಕಾರ ನೀಡಿರುವರು.
ವಲಯ, ರಾಜ್ಯ ಮಟ್ಟದ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತು ಸಂಪನ್ಮೂಲರಾಗಿರುವ ಸುನೀತಾ, 2016ರಲ್ಲಿ ಜಪಾನ್ ನಲ್ಲಿ ನಡೆದ ವಿಶ್ವ ಜಾಂಬೂರಿಯಲ್ಲಿ ಪಾಲ್ಗೊಳ್ಳುವ ಮೂಲಕ ಸಂಸ್ಥೆಯ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಕೀರ್ತಿಗೆ ಭಾಜನರಾದರು. ಸ್ಕೌಟ್ಸ್ ಮತ್ತು ಗೈಡ್ಸ್ ಅಂತಾರಾಷ್ಟ್ರೀಯ ಸಾಂಸ್ಕೃತಿಕ ರಾಯಭಾರಿ ಕಾರ್ಯಕ್ರಮದಲ್ಲಿ ಕಂಟಿಜೆಂಟ್ ಲೀಡರ್ ಆಗಿ 2023ರಲ್ಲಿ ಸೌತ್ ಕೊರಿಯಾದಲ್ಲಿ ನಡೆದ 25ನೇ ವಿಶ್ವ ಜಾಂಬೂರಿಯಲ್ಲಿ ಭಾಗವಹಿಸಿದ ಹಿರಿಮೆಗೂ ಪಾತ್ರರಾಗಿದ್ದಾರೆ.
2017-18ನೇ ಸಾಲಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯಿಂದ ಅತ್ಯುತ್ತಮ ಗೈಡ್ಸ್ ಶಿಕ್ಷಕಿ ಎಂಬ ಹಿರಿಮೆಗೆ ಪಾತ್ರರಾಗಿರುವ ಎಂ ಸುನೀತಾ ತನ್ನ ಅತ್ಯುತ್ತಮ ಸಾಧನೆಗಳಿಗಾಗಿ "ಮೆಡಲ್ ಆಫ್ ಮೆರಿಟ್ ಪ್ರಶಸ್ತಿ" "ಬಾರ್ ಟು ಮೆಡಲ್ ಆಫ್ ಮೆರಿಟ್" ಪ್ರಶಸ್ತಿ ಪಡೆದಿರುತ್ತಾರೆ.
ಮೇ 31 : ವಿದಾಯ ಸಮಾರಂಭ
ದೈಹಿಕ ಶಿಕ್ಷಣ ಶಿಕ್ಷಕಿ ಸುನೀತಾರವರ ವಿದಾಯ ಸಮಾರಂಭವು ಮೇ ೩೧ ರಂದು ಪುತ್ತೂರು ಸುಂದರರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಬೆಳಿಗ್ಗೆ ೧೧ ಕ್ಕೆ ನಡೆಯಲಿದೆ. ಅದೇ ದಿನ ಬೆಳಿಗ್ಗೆ ೯.೩೦ ರಿಂದ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಈ ವರ್ಷದ ಶೈಕ್ಷಣಿಕ ಪ್ರಾರಂಭೋತ್ಸವ ಹಾಗೂ ಎಸ್‌ಎಸ್‌ಎಲ್‌ಸಿ ಸಾಧಕರಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಜರಗಲಿದೆ ಸಂಸ್ಥೆಯ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಹಾಗೂ ಮುಖ್ಯ ಶಿಕ್ಷಕಿ ಜಯಲಕ್ಷ್ಮಿರವರು ತಿಳಿಸಿದ್ದಾರೆ.