ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ʼವಿವೇಕ ಸಂಕಲ್ಪ-2024ʼ

0

ಉತ್ತಮ ಪೋಷಕತ್ವವು ಅತ್ಯಂತ ಶ್ರೇಷ್ಠವಾದ ದೇಶಸೇವೆ : ಡಾ. ವಿರೂಪಾಕ್ಷ ದೇವರಮನೆ

  • ಪುತ್ತೂರು: ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ʼವಿವೇಕ ಸಂಕಲ್ಪ-2024ʼ ಪೋಷಕರ ಸಮಾವೇಶ ಹಾಗೂ ಕಾಲೇಜು ಪ್ರಾರಂಭೋತ್ಸವ,ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಗಾರ ಮೇ.30ರಂದು ನಡೆಯಿತು.

ಖ‍್ಯಾತ ಮನೋವೈದ್ಯ ಹಾಗೂ ಲೇಖಕ ಡಾ.ವಿರೂಪಾಕ್ಷ ದೇವರಮನೆ ಮಾತನಾಡಿ “ಇಂದಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಸವಾಲುಗಳಿವೆ. ಪರಿಸರದ ವಿವಿಧ ಆಕರ್ಷಣೆಗಳ ಮಧ್ಯದಲ್ಲಿ ವಿದ್ಯಾರ್ಥಿಗಳು ಬದುಕಬೇಕಾಗಿದೆ. ಪೋಷಕರು ವಿದ್ಯಾರ್ಥಿಗಳ ಅಂತರಂಗವನ್ನು ಅರಿತುಕೊಳ್ಳುತ್ತಾ, ಅವರು ಉತ್ತಮ ಜೀವನ ರೂಪಿಸಿಕೊಳ್ಳುವಲ್ಲಿ ಸಹಕಾರವನ್ನು ನೀಡಬೇಕಾಗಿದೆ. ಯಾವ ಮಗುವಿಗೆ ತಂದೆ, ತಾಯಿಯ ಪ್ರೀತಿ, ಮಮತೆ, ವಿಶ್ವಾಸ ದೊರಕುವುದೋ, ಆ ಮಗು ಯಾವುದೇ ದುಷ್ಚಟಗಳಿಗೆ ಬಲಿಯಾಗುವುದಿಲ್ಲ. ಆದುದರಿಂದ ಉತ್ತಮ ಪೋಷಕತ್ವವು ಅತ್ಯಂತ ಶ್ರೇಷ್ಠವಾದ ದೇಶಸೇವೆ ಎಂದರು.

 ಹದಿಹರೆಯದ ವಯಸ್ಸಿನ ಮಕ್ಕಳಲ್ಲಿ ಸಾಕಷ್ಟು ಶಾರೀರಿಕ ಹಾಗೂ ಮಾನಸಿಕ ಬದಲಾವಣೆಗಳು ಆಗುತ್ತಿರುತ್ತವೆ. ಈ ಹಂತದಲ್ಲಿ ಪೋಷಕರು ಮಕ್ಕಳ ಮಾನಸಿಕ ಬದಲಾವಣೆಗಳನ್ನು ಅರ್ಥೈಸಿಕೊಂಡು ಅವರ ಭಾವನೆಗಳಿಗೆ ಸ್ಪಂದಿಸಬೇಕಾಗುತ್ತದೆ. ಪೋಷಕರು ತಮ್ಮ ಕೆಲಸದ ಒತ್ತಡಗಳನ್ನು ಬದಿಗಿರಿಸಿ ಅವರ ಜತೆ ನಿರಂತರ ಸಂಪರ್ಕ, ಸಂವಹನವನ್ನು ಮಾಡಬೇಕು. ಮಕ್ಕಳು ಮುಕ್ತವಾಗಿ ತಮ್ಮ ಭಾವನೆಗಳನ್ನು ಪೋಷಕರಲ್ಲಿ ಹಂಚಿಕೊಳ್ಳಬೇಕು. ಇಂತಹ ಪರಿಸರವನ್ನು ಪೋಷಕರು ಮಾತ್ರ ನಿರ್ಮಿಸಲು ಸಾಧ್ಯ. ಮಕ್ಕಳನ್ನು ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗಿರಿಸದೆ, ಸಮಾಜದಲ್ಲಿ ನೆನಪಿಡುವಂತಹ ಕಾರ್ಯಗಳನ್ನು ಮಾಡಿಸುವಲ್ಲಿ ಪೋಷಕರ ಬೆಂಬಲ ಅತೀ ಅಗತ್ಯವಾಗಿರುತ್ತದೆ ಎಂದು ಕಿವಿಮಾತನ್ನು ಹೇಳಿದರು. ವಿಶೇಷ ಉಪನ್ಯಾಸದ ಬಳಿಕ ಪೋಷಕರೊಂದಿಗೆ ಸಂವಾದವನ್ನು ನಡೆಸಿಕೊಟ್ಟರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ರವೀಂದ್ರ ಮಾತನಾಡಿ ಪ್ರತಿ ವಿದ್ಯಾರ್ಥಿಯು ವಿಭಿನ್ನ ರೀತಿಯಲ್ಲಿ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕೆಂಬ ಪೋಷಕರ ಕನಸಿಗೆ ವಿದ್ಯಾಸಂಸ್ಥೆ, ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಬೆಂಬಲ ಕೊಡುವಲ್ಲಿ, ಉತ್ತಮ ಸಹಕಾರದ ಭರವಸೆಯನ್ನಿತ್ತರು. ಭಾರತೀಯ ಆಚಾರ-ವಿಚಾರ, ಸಂಸ್ಕೃತಿಯ ಮೇಲೆ ತಲೆಯೆತ್ತಿದ ಸಂಸ್ಥೆಗೆ ಸುಮಾರು ಏಳಕ್ಕಿಂತಲೂ ಹೆಚ್ಚಿನ ರಾಜ್ಯಗಳಿಂದ ಇಪ್ಪತ್ತೇಳು ಜಿಲ್ಲೆಗಳಿಂದ ವಿದ್ಯಾರ್ಥಿಗಳು ಸೇರ್ಪಡೆಗೊಂಡಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ.  ವಿದ್ಯಾರ್ಥಿಗಳು ವಯಸ್ಸಿನ ಆಕರ್ಷಣೆಯ ದೌರ್ಬಲ್ಯದ ಇಳಿಜಾರಿಗೆ ಕಾಲಿಡದೆ, ಉತ್ತಮ ಬದುಕನ್ನು ರೂಪಿಸಿಕೊಳ್ಳುವ ಬಗೆಗೆ ಗಮನಹರಿಸಬೇಕು ಎಂದರು.

ಕಾಲೇಜಿನ ಪ್ರಾಂಶುಪಾಲ ಮಹೇಶ್‌ ನಿಟಿಲಾಪುರ ಅವರು ವಿದ್ಯಾರ್ಥಿಗಳಿಗೆ ಕಾಲೇಜು ವ್ಯವಸ್ಥೆಗಳ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಕಾಲೇಜು ವಿದ್ಯಾರ್ಥಿಗಳು, ಸಂಸ್ಥೆಯ ಧ್ಯೇಯ ಮತ‍್ತು ಶಿಕ್ಷಣಾವಕಾಶಗಳನ್ನು ಪರಿಚಯಿಸುವ ವಿವೇಕಾಂತರಂಗ-ಯಕ್ಷ-ಗಾನ ತರಂಗ ಎಂಬ ಸಂದರ್ಭೋಚಿತ ಸಾಂಸ್ಕೃತಿಕ ತುಣುಕನ್ನು ಪ್ರದರ್ಶಿಸಿದರು.

 ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ವೈದೇಹಿ ಸಭಾಂಗಣದಲ್ಲಿ ಹಾಗೂ ವಾಣಿಜ್ಯ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ನೇತಾಜಿ ಸಭಾಭವನದಲ್ಲಿ ಮುಂದಿನ ಶೈಕ್ಷಣಿಕ ಚಟುವಟಿಕೆಗಳ ಕುರಿತು ವಿವರವಾದ ಸೂಚನೆಗಳನ್ನು ನೀಡಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿ ಸದಸ್ಯರಾದ ವತ್ಸಲಾ ರಾಜ್ಞಿ, ಡಾ. ಕೆ.ಎನ್.‌ ಸುಬ್ರಹ್ಮಣ್ಯ, ವಸತಿ ನಿಲಯದ ಆಡಳಿತ ಮಂಡಳಿ ಅದ್ಯಕ್ಷ ರಮೇಶ್‌ ಪ್ರಭು, ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್‌ ರಾವ್‌ ಮತ್ತಿತರರು ಉಪಸ್ಥಿತರಿದ್ದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ದೇವಿಚರಣ್‌ ರೈ ಸ್ವಾಗತಿಸಿದರು. ಉಪನ್ಯಾಸಕಿಯರಾದ ಪುಷ್ಪಲತಾ ಹಾಗೂ ಸವಿತಾ ಕುಮಾರಿ ನಿರೂಪಿಸಿ, ವಂದಿಸಿದರು.

LEAVE A REPLY

Please enter your comment!
Please enter your name here