ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಉಪ್ಪಿನಂಗಡಿ ಭಾಗದಲ್ಲಿ ನಡೆಯುತ್ತಿದ್ದರೆ, ಮಳೆ ಬಂದ ನಂತರ ದಿನಕ್ಕೊಂದು ಸಮಸ್ಯೆ ಇಲ್ಲಿ ತಲೆಯೆತ್ತುತ್ತಿದೆ. ಇಲ್ಲಿನ ಕೂಟೇಲು ಸೇತುವೆಯ ಬಳಿ ರಸ್ತೆಯಲ್ಲೇ ದೊಡ್ಡ ಹಳ್ಳ ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ.
ಚತುಷ್ಪಥ ಕಾಮಗಾರಿಯ ಸಂದರ್ಭ ಕೂಟೇಲುವಿನಲ್ಲಿರುವ ಕಿರು ಹೊಳೆಗೆ ಹೊಸ ಸೇತುವೆಯ ನಿರ್ಮಾಣವಾಗಿದ್ದು, ಈ ಹಿಂದಿನ ಸೇತುವೆಯನ್ನು ಒಡೆದು ಅಲ್ಲಿ ಮತ್ತೊಂದು ಸೇತುವೆಯನ್ನು ನಿರ್ಮಿಸುವ ಕಾಮಗಾರಿ ನಡೆಯುತ್ತಿದೆ. ಇದಕ್ಕಾಗಿ ಈ ಹಿಂದಿನ ರಸ್ತೆಯನ್ನು ಬಂದ್ ಮಾಡಿ ಹೊಸ ಸೇತುವೆಗೆ ಹಳೆ ಸೇತುವೆಯ ಹತ್ತಿರವೇ ಕ್ರಾಸ್ ಆಗಿ ರಸ್ತೆ ಸಂಪರ್ಕ ಮಾಡಲಾಗಿದೆ. ಆದರೆ ಮಳೆಗಾದಲ್ಲಿ ಈ ರಸ್ತೆಗೆ ಹಾಕಲಾಗಿದ್ದ ಜಲ್ಲಿ ಸಂಪೂರ್ಣ ಎದ್ದು ಹೋಗಿದ್ದು, ರಸ್ತೆಯ ಮಧ್ಯದಲ್ಲಿಯೇ ದೊಡ್ಡ ಹಳ್ಳದಂತಹ ನಿರ್ಮಾಣವಾಗಿದೆ. ಈ ರಸ್ತೆಯ ಎರಡೂ ಬದಿಗಳು ಎತ್ತರದಲ್ಲಿದ್ದು, ಈಗಿನ ಹೊಸ ರಸ್ತೆಯು ಗುಂಡಿಯಲ್ಲಿದೆ. ಇಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಕೂಡಾ ಇಲ್ಲ. ಆದ್ದರಿಂದ ಮಳೆಯ ಸಂದರ್ಭ ಎತ್ತರ ಪ್ರದೇಶದಲ್ಲಿನ ನೀರು ಸೀದಾ ರಸ್ತೆಗೆ ಹರಿದು ಬಂದು ರಸ್ತೆಯಲ್ಲಿ ಉಂಟಾಗಿರುವ ಬೃಹತ್ ಗುಂಡಿಯಲ್ಲಿ ಶೇಖರಣೆಗೊಳ್ಳುತ್ತದೆ. ಇದರಿಂದ ಮಳೆ ನೀರು ನಿಂತ ಸಂದರ್ಭ ಈ ಗುಂಡಿಯ ಆಳ- ಅಗಲು ಭಾಸವಾಗದೇ ವಾಹನಗಳ ಅಪಘಾತಕ್ಕೂ ಇದು ಕಾರಣವಾಗುತ್ತದೆ. ನೀರು ಆವಿಯಾದ ಬಳಿಕವೂ ಈ ಗುಂಡಿಯನ್ನು ದಾಟಿಕೊಂಡೇ ವಾಹನಗಳು ಸಾಗಬೇಕಾಗಿದೆ. ಇನ್ನು ಸೇತುವೆಯ ಮೇಲೆಯೂ ರಸ್ತೆಗೆ ಹಾಕಲಾಗಿದ್ದ ಡಾಮರು ಕಿತ್ತು ಹೋಗಿದ್ದು, ಅಲ್ಲಲ್ಲಿ ಗುಂಡಿಯುಂಟಾಗಿದೆ. ಅಲ್ಲದೇ ಇಲ್ಲಿ ರಸ್ತೆಯ ಉದ್ದಕ್ಕೂ ಸಣ್ಣ ಜಲ್ಲಿಕಲ್ಲುಗಳು ಹರಡಿದ್ದು, ಇನ್ನೊಂದು ಕಡೆಯಿಂದ ರಸ್ತೆ ಮಳೆಯ ಸಂದರ್ಭ ಸಂಪೂರ್ಣ ಕೆಸರಿನಿಂದ ಕೂಡಿರುತ್ತದೆ. ಇದು ದ್ವಿಚಕ್ರ ವಾಹನ ಸವಾರರಿಗೆ ಕಂಟಕವೆನಿಸಿದೆ.
ಪಥ ಬದಲಾಯಿಸುವ ವಾಹನಗಳು:
ಈ ರಸ್ತೆಯ ಅವ್ಯವಸ್ಥೆಯಿಂದ ಇಲ್ಲಿ ಸಾಗಲಾಗದೇ ಉಪ್ಪಿನಂಗಡಿಯಿಂದ ನೆಲ್ಯಾಡಿಯ ಕಡೆ ಪ್ರಯಾಣಿಸುವ ವಾಹನಗಳು ಸಮೀಪವೇ ಇರುವ ವಾಣಿಜ್ಯ ಸಂಕೀರ್ಣದ ಬಳಿಯಿಂದಲೇ ಸಾಗುತ್ತವೆ. ಇಲ್ಲಿ ಹೊಟೇಲ್, ಲಾಡ್ಜ್, ಅಂಗಡಿಗಳಿದ್ದು, ಅವುಗಳ ಮುಂದೆ ವಾಹನಗಳ ಪಾರ್ಕಿಂಗ್‌ಗಳನ್ನು ಮಾಡುತ್ತಿರುವಾಗ ಹಾಗೂ ಜನರು ಈ ಪ್ರದೇಶದಲ್ಲಿ ಆ ಕಡೆ, ಈ ಕಡೆ ಸಾಗುತ್ತಿರುವ ಪಥ ಬದಲಾಯಿಸಿ ಸಾಗುವ ವಾಹನಗಳಿಂದ ಅಪಾಯವುಂಟಾಗುವ ಸಂಭವವೂ ಇದೆ.
ಸ್ಪಂದಿಸಿದ ಕೆಎನ್‌ಆರ್ ಪಿಆರ್‌ಒ:
ಇಲ್ಲಿನ ಸಮಸ್ಯೆಯ ಬಗ್ಗೆ ವಾರದ ಹಿಂದೆ ಚತುಷ್ಪಥ ಹೆದ್ದಾರಿ ಗುತ್ತಿಗೆದಾರ ಸಂಸ್ಥೆಯಾದ ಕೆಎನ್‌ಆರ್‌ನ ಸಾರ್ವಜನಿಕ ಸಂಪರ್ಕಾಧಿಕಾರಿ ನಂದಕುಮಾರ್ ಅವರ ಗಮನಕ್ಕೆ ತರಲಾಗಿತ್ತು. ತಕ್ಷಣವೇ ಸ್ಪಂದಿಸಿದ ಅವರು ಸ್ಥಳ ಪರಿಶೀಲನೆ ನಡೆಸಿದ್ದರಲ್ಲದೆ, ಅವರ ಸೂಚನೆಯಂತೆ ಕಳೆದ ಭಾನುವಾರ ಇಲ್ಲಿನ ಹೊಂಡ- ಗುಂಡಿಗಳನ್ನು ಮುಚ್ಚುವ ಕಾರ್ಯ ನಡೆದಿತ್ತು. ಆದರೆ ವಾರದೊಳಗೆ ಗುಂಡಿಗೆ ಹಾಕಲಾಗಿದ್ದ ಜಲ್ಲಿ ಮಿಶ್ರಣ ಎದ್ದು ಬಂದಿದ್ದು, ಮತ್ತೆ ಈಗ ಮೊದಲಿನ ರೀತಿಯಂತೆ ಹೊಂಡಗಳು ನಿರ್ಮಾಣವಾಗಿ ಮಳೆ ನೀರು ತುಂಬಿ ಹಳ್ಳಗಳಂತೆ ಭಾಸವಾಗುತ್ತಿದೆ. ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿರುವ ನಂದಕುಮಾರ್ ಅವರು, ಇದು ನಮ್ಮ ತಪ್ಪಲ್ಲ. ಇಲ್ಲಿ ರಸ್ತೆಗೆ ನೀರು ಬರದಂತೆ ಚರಂಡಿ ನಿರ್ಮಾಣಕ್ಕೆ ಕೆಲವರು ತಡೆ ನಿಲ್ಲುತ್ತಿದ್ದಾರೆ. ಆದ್ದರಿಂದ ಇಲ್ಲಿ ರಸ್ತೆಗೆ ನೀರು ಬಂದು ಈ ಸ್ಥಿತಿಯುಂಟಾಗುವಂತಾಗಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ಸಂಬಂಧಿತ ಇಲಾಖೆಯ ಅಧಿಕಾರಿಗಳು ಮಧ್ಯಪ್ರವೇಶಿಸಿ ನಿಯಮಬದ್ಧವಾಗಿ ಇಲ್ಲಿ ಕಾಮಗಾರಿ ನಡೆಸಿ ರಸ್ತೆ ಪ್ರಯಾಣಿಕರನ್ನು ಸಂಕಷ್ಟದಿಂದ ಪಾರು ಮಾಡಬೇಕಿದೆ.