ಕೆಸರುಗದ್ದೆಯಾಗಿದ್ದ ರಸ್ತೆ ಸಮಸ್ಯೆಗೆ ಮುಕ್ತಿ-ದಿನದೊಳಗೆ ಸ್ಪಂದಿಸಿದ ಕಾಮಗಾರಿ ನಿರ್ವಹಣೆಗಾರರು

0

ಉಪ್ಪಿನಂಗಡಿ: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಂಪೂರ್ಣ ಕೆಸರುಗದ್ದೆಯಾಗಿ, ನಡೆದಾಡಲೂ ಕಷ್ಟಕರವಾಗಿದ್ದ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಸಂದರ್ಭ 34 ನೆಕ್ಕಿಲಾಡಿಯಲ್ಲಿ ನಿರ್ಮಿಸಲಾದ ಸರ್ವೀಸ್ ರಸ್ತೆಯ ಬಗ್ಗೆ ‘ಸುದ್ದಿ ಬಿಡುಗಡೆ’ಯಲ್ಲಿ ವರದಿ ಬಂದ ದಿನವೇ ರಸ್ತೆಯ ಸಮಸ್ಯೆಯನ್ನು ಪರಿಹರಿಸುವ ಕಾಮಗಾರಿ ನಡೆಸಲಾಗಿದೆ.


ಉಪ್ಪಿನಂಗಡಿಯಿಂದ ಮಂಗಳೂರು ಕಡೆಗೆ ಹೋಗುವ ಹೆದ್ದಾರಿ ಬದಿಯಲ್ಲಿ 34-ನೆಕ್ಕಿಲಾಡಿ ಪೇಟೆಯಲ್ಲಿ ರಾಘವೇಂದ್ರ ಮಠ ಸಮೀಪದಿಂದ ಕುಡಿಪ್ಪಾಡಿ ತನಕ ಸುಮಾರು 1 ಕಿ.ಮೀ. ತನಕ ಮಣ್ಣು ಹಾಸಲಾಗಿ ಸರ್ವೀಸ್ ರಸ್ತೆಯನ್ನು ನಿರ್ಮಿಸಲಾಗಿತ್ತು. ಆದರೆ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿರಲಿಲ್ಲ. ಒಂದಿಷ್ಟು ಜಾಗದಲ್ಲಿ ಚರಂಡಿ ಇದ್ದರೂ ಅದು ರಸ್ತೆಯಿಂದ ಎತ್ತರದಲ್ಲಿತ್ತು. ಮತ್ತೊಂದಿಷ್ಟು ಕಡೆಯಲ್ಲಿ ಚರಂಡಿ ನಿರ್ಮಿಸಿದ್ದರೂ ಅದನ್ನು ಅಪೂರ್ಣ ಸ್ಥಿತಿಯಲ್ಲಿ ಬಿಡಲಾಗಿತ್ತು. ಹೀಗಾಗಿ ಮಳೆ ನೀರು ಹರಿದು ಹೋಗುವುದಕ್ಕೆ ಇಲ್ಲಿ ವ್ಯವಸ್ಥೆಯೇ ಇಲ್ಲದಂತಾಗಿದ್ದು, ಮಳೆಯ ನೀರು ರಸ್ತೆಯಲ್ಲೇ ನಿಂತು ರಸ್ತೆ ಸಂಪೂರ್ಣವಾಗಿ ಕೆಸರು ಗದ್ದೆಯಾಗಿತ್ತು. ಈ ಸರ್ವೀಸ್ ರಸ್ತೆ ಇರುವ 1 ಕಿ.ಮೀ. ವ್ಯಾಪ್ತಿಯಲ್ಲಿ 1 ವಸತಿ ಸಮುಚ್ಚಯ ಸೇರಿದಂತೆ ಸುಮಾರು 40ಕ್ಕೂ ಅಧಿಕ ಮನೆಗಳಿತ್ತು. ಗ್ಯಾರೇಜು, ಗ್ರಾನೈಟ್, ಹಾರ್ಡ್‌ವೇರ್, ಸಿಮೆಂಟು, ಕಬ್ಬಿಣ ಮಾರಾಟ ಸೇರಿದಂತೆ 10ಕ್ಕೂ ಅಧಿಕ ಉದ್ಯಮ ಸಂಸ್ಥೆಗಳು ಇಲ್ಲಿ ಕಾರ್ಯಾಚರಿಸುತ್ತಿತ್ತು. ಮಳೆ ಬಂದಾಗಿನಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ಸಾಧ್ಯವಾಗುತ್ತಿರಲಿಲ್ಲ. ಕನಿಷ್ಟ ಸೈಕಲ್ ಕೂಡಾ ತೆಗೆದುಕೊಂಡು ಹೋಗಲು ಆಗುತ್ತಿರಲಿಲ್ಲ. ಮನೆಯವರು, ಮಕ್ಕಳು ಎಲ್ಲೂ ಹೋಗಲಾರದೆ ಒಂದು ರೀತಿಯಲ್ಲಿ ಧಿಗ್ಭಂದನದಲ್ಲಿದ್ದರು. ಉದ್ಯಮಿಗಳು ವಾಹನ ಬರಲು ಸಾಧ್ಯವಿಲ್ಲದೆ, ವ್ಯಾಪಾರ ಇಲ್ಲದೆ ಕೈಚೆಲ್ಲಿ ಕುಳಿತ್ತಿದ್ದರು. ಇಲ್ಲಿನ ರಸ್ತೆಯ ಅವ್ಯವಸ್ಥೆ ಹಾಗೂ ಜನರ ಸಮಸ್ಯೆ ಬಗ್ಗೆ ಮೇ .30ರಂದು ಸಚಿತ್ರ ವರದಿ ಪ್ರಕಟವಾಗಿತ್ತು. ತಕ್ಷಣವೇ ಎಚ್ಚೆತ್ತ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸುವವರು ರಸ್ತೆಯ ಕೆಸರನ್ನು ತೆಗೆದು, ಜಲ್ಲಿ ಹುಡಿ ಹಾಗೂ ಹೆದ್ದಾರಿ ನಿರ್ಮಾಣ ಸಂದರ್ಭ ರಸ್ತೆಯಿಂದ ಅಗೆದಿರುವ ಡಾಂಬರನ್ನು ಈ ರಸ್ತೆಗೆ ಹರಡಿ, ತಮ್ಮಲ್ಲಿರುವ ಯಂತ್ರೋಪಕರಣಗಳ ಮೂಲಕ ರಸ್ತೆಯನ್ನು ಸೆಟ್ ಮಾಡಿ ನೀಡಿದ್ದಾರೆ.

ಕೆಲವು ದಿನಗಳಿಂದ ಸಾರ್ವಜನಿಕರಿಗೆ ಈ ರಸ್ತೆಯಲ್ಲಿ ನಡೆದಾಡಲೂ ಕಷ್ಟವಿದ್ದರೂ, ಇದು ತಿಳಿದೂ ಕಾಮಗಾರಿ ನಿರ್ವಹಿಸುವ ಸಂಸ್ಥೆಯವರೂ ಈ ಬಗ್ಗೆ ಸ್ಪಂದಿಸಿರಲಿಲ್ಲ. ಆದರೆ ಇಲ್ಲಿನ ಸಮಸ್ಯೆಗಳ ಬಗೆಗಿನ ಪತ್ರಿಕಾ ವರದಿಯು ಪುತ್ತೂರು ಉಪವಿಭಾಗಾಧಿಕಾರಿಯವರ ಗಮನಕ್ಕೆ ಬಂದಿದ್ದು, ತಕ್ಷಣವೇ ಅವರು ಕಾಮಗಾರಿ ನಿರ್ವಹಣೆ ಮಾಡುವವರಿಗೆ ಈ ಬಗ್ಗೆ ಸೂಚಿಸಿದ್ದು, ಆದ್ದರಿಂದ ವರದಿ ಪ್ರಕಟವಾದ ದಿನದೊಳಗೆ ಇಲ್ಲಿನ ಸಮಸ್ಯೆಗೆ ಕಾಮಗಾರಿ ನಿರ್ವಹಿಸುವವರಿಂದ ಸ್ಪಂದನೆ ಸಿಗುವಂತಾಗಿದೆ.

LEAVE A REPLY

Please enter your comment!
Please enter your name here