*ಶ್ರಮ ಪಟ್ಟರೆ ತಕ್ಕ ಪ್ರತಿಫಲ ದೊರಕುತ್ತದೆ ಎನ್ನುವುದಕ್ಕೆ ನಮ್ಮ ಎಸ್. ಎಲ್. ಸಿ. ಫಲಿತಾಂಶವೇ ನಿದರ್ಶನ: ಪ್ರಹ್ಲಾದ್ ಶೆಟ್ಟಿ ಜೆ.
*ಉತ್ತಮ ಅಂಕಗಳ ಜೊತೆ ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ವಿಜಯಲಕ್ಷ್ಮೀ ವಿ. ಶೆಟ್ಟಿ
ವಿಟ್ಲ : ಶ್ರಮ ಪಟ್ಟರೆ ತಕ್ಕ ಪ್ರತಿಫಲ ದೊರಕುತ್ತದೆ ಎಂಬುವುದಕ್ಕೆ ನಮ್ಮ ಶಾಲೆಯ ಈ ಬಾರಿಯ ಎಸ್. ಎಸ್. ಎಲ್. ಸಿ. ಫಲಿತಾಂಶವೇ ನಿದರ್ಶನ ಎಂದು ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷರಾದ ಪ್ರಹ್ಲಾದ್ ಶೆಟ್ಟಿ ಜೆ.ರವರು ಹೇಳಿದರು.ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಮ್ಮ ಶಾಲೆಯ ಎಸ್. ಎಸ್. ಎಲ್. ಸಿ. ವಿದ್ಯಾರ್ಥಿಗಳಿಗಾಗಿ ನಡೆಸಿದ ಒಂದು ತಿಂಗಳ ನೈಟ್ ಕ್ಯಾಂಪ್ ಯಶಸ್ವಿಗೊಂಡಿದೆ. ವಿದ್ಯಾರ್ಥಿಗಳ ಶ್ರಮದ ಪ್ರತಿಫಲವಾಗಿ ಶೇಕಡಾ 100 ಫಲಿತಾಂಶ ದೊರಕಿದೆ. ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ಬದುಕಿನಲ್ಲೂ ಶ್ರಮಪಟ್ಟು, ಉತ್ತಮ ಅಂಕ ಪಡೆದು, ಹೆತ್ತವರಿಗೆ ಕೀರ್ತಿ ತರುವಲ್ಲಿ ಪ್ರಯತ್ನಿಸಿ. ಮುಂದಿನ ಜೀವನವು ಉಜ್ವಲವಾಗಲಿ ಎಂದರು.
ಶಾಲಾ ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ. ಶೆಟ್ಟಿ ಮಾತನಾಡಿ ಶಾಲೆಯಲ್ಲಿ ಡಿಜಿಟಲ್ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳಿಗೆ ಅವಶ್ಯಕತೆ ಇರುವ ಎಲ್ಲಾ ಸೌಕರ್ಯಗಳನ್ನು ನೀಡಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿ ಉತ್ತಮ ಅಂಕ ಗಳಿಸಿದ್ದಾರೆ.
ಉತ್ತಮ ಅಂಕಗಳ ಜೊತೆ ಉತ್ತಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ,ಗುರಿಯೆಡೆಗೆ ಸಾಗಿದಲ್ಲಿ ಉತ್ತಮ ಭವಿಷ್ಯ ನಿಮ್ಮದಾಗುತ್ತದೆ ಎಂದರು.
ಪೋಷಕರಾದ ಮಾಲತಿ ಮಾತನಾಡಿ, ಶಿಕ್ಷಕರ ಕಠಿಣ ಪರಿಶ್ರಮ ಹಾಗೂ ಶಾಲೆಯಲ್ಲಿ ನಡೆಸಿದ ನೈಟ್ ಕ್ಯಾಂಪ್ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಪಡೆಯುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು.
ಶಿಕ್ಷಕಿ ಶಿಕ್ಷಾ ಶೆಟ್ಟಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ವಿದ್ಯಾರ್ಥಿಗಳಾದ ವೃದ್ಧಿ ಎ. ಕೊಂಡೆ, ಮಾನ್ಯ ಆರ್. ಶೆಟ್ಟಿ, ಆದರ್ಶನಿ ಶೆಟ್ಟಿ ಮತ್ತು ಧೀರಜ್ ಪರೀಕ್ಷೆಗೆ ತಯಾರಿ ನಡೆಸಿದ್ದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಬಾಲವಿಕಾಸ ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ ಉಪಸ್ಥಿತರಿದ್ದರು. ಶಾಲಾ ಆಡಳಿತಾಧಿಕಾರಿ ರವೀಂದ್ರ ದರ್ಬೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು.ಶಿಕ್ಷಕಿ ಸುಧಾ ಎನ್ ರಾವ್ ವಂದಿಸಿದರು.ಶಿಕ್ಷಕಿ ರಶ್ಮಿ ಫೆರ್ನಾಂಡಿಸ್ ಕಾರ್ಯಕ್ರಮ ನಿರೂಪಿಸಿದರು.