ಕಾಣಿಯೂರು: ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಇಲ್ಲಿ ಹೊಸದಾಗಿ ದಾಖಲಾತಿಗೊಂಡ ವಿದ್ಯಾರ್ಥಿಗಳನ್ನು ಆರತಿ ಬೆಳಗಿ, ಬ್ಯಾಂಡ್ ವಾದ್ಯದ ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು. ರಂಗ ಕಲಾವಿದರಾದ ಮೌನೇಶ್ ವಿಶ್ವಕರ್ಮ ಹಾಗೂ ರಾಕೇಶ್ ಆಚಾರ್ಯ ಬನಾರಿ ಇವರ ಸಾರಥ್ಯದಲ್ಲಿ ಸಂಭ್ರಮ ಕಲಿಕೆಯ ದಿನವನ್ನಾಗಿ ಪ್ರಾರಂಭೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಎರಡು ದಿನಗಳಿಂದ ನಡೆಯುತ್ತಿರುವ ಶಿಬಿರದ ಸದುಪಯೋಗವನ್ನು ಪಡೆದುಕೊಂಡ ಕುದ್ಮಾರು ಶಾಲೆಯ ವಿದ್ಯಾರ್ಥಿಗಳು ಶಾಲಾ ಪ್ರಾರಂಭದ ದಿನವೇ ನಾಟಕ ಕಟ್ಟುವ ಮೂಲಕ ತಮ್ಮ ಸೂಕ್ತ ಪ್ರತಿಭೆಯನ್ನು ಹೊರಹಾಕಿ ಪ್ರತಿಭೆಯ ಪ್ರದರ್ಶನ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಸತೀಶ್ ಕುಮಾರ್ ಕೆಡೆಂಜಿ ಹಾಗೂ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಶಾಂತಿಮೊಗರು ಇಲ್ಲಿಯ ಅನುವಂಶಿಯ ಆಡಳಿತ ಮುಕ್ತೇಸರರಾದ ಪ್ರವೀಣ್ ಕುಮಾರ್ ಕೆಡೆಂಜಿಗುತ್ತು ಇವರಿಂದ ಕೊಡುಗೆಯಾಗಿ ವಿದ್ಯಾರ್ಥಿಗಳಿಗೆ ಕಲಿಕಾಕಿಟ್ ಅನ್ನು ವಿತರಿಸಲಾಯಿತು. ಹೊಸತನದ ಹೆಜ್ಜೆಯಾಗಿ, ಅಳಿವಿನಂಚಿನೆಡೆಗೆ ಸಾಗುತ್ತಿರುವ ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ವಿದ್ಯಾರ್ಥಿಗಳಿಗೆ ಗಿಡವೊಂದನ್ನು ಕೊಡುಗೆಯಾಗಿ ನೀಡಿ ಮುಂದೆ ಶಾಲೆಯಲ್ಲಿ ಆ ವಿದ್ಯಾರ್ಥಿಗಳು ಆಗಿಡವನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ದತ್ತು ನೀಡುವುದರ ಮೂಲಕ ವಿಭಿನ್ನ ಶೈಲಿಯ ಪ್ರಾರಂಭೋತ್ಸವವನ್ನು ಆಚರಿಸಲಾಯಿತು.
ಸರಕಾರದಿಂದ ಕೊಡಲ್ಪಡುವ ಉಚಿತ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಶಾಲಾ ಎಸ್ ಡಿಎಂಸಿ ಅಧ್ಯಕ್ಷ ನವ್ಯ ಅನ್ಯಾಡಿ, ಉಪಾಧ್ಯಕ್ಷ ಸೀತಾರಾಮ ಗೌಡ ಕುವೆತೋಡಿ, ಎಸ್ ಡಿಎಂಸಿಯ ಸದಸ್ಯರು, ಪೋಷಕ ವೃಂದದವರು, ಶಾಲಾ ಮುಖ್ಯ ಗುರು ಕುಶಾಲಪ್ಪ ಬಿ ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.