ಜೂ. 2 : ನುಳಿಯಾಲು ಸಂಜೀವ ರೈ ಮತ್ತು ಸುಗುಣ ಎಸ್‌. ರೈ ವೈವಾಹಿಕ ಸುವರ್ಣ ಸಂಭ್ರಮ

0

ಬೆಟ್ಟಂಪಾಡಿ: ಇಲ್ಲಿನ ನವೋದಯ ಪ್ರೌಢಶಾಲೆಯ ನಿವೃತ್ತ ಶಾರೀರಿಕ ಶಿಕ್ಷಣ ಶಿಕ್ಷಕ, ಡಾ| ಶ್ರೀಕಂಠ ಶಾಸ್ತ್ರಿ ಸ್ಮಾರಕ ಚಿನ್ನದ ಪದಕ ವಿಜೇತ, ಹಿರಿಯ ಯಕ್ಷಗಾನ ಕಲಾವಿದ ನುಳಿಯಾಲು ಸಂಜೀವ ರೈ ಮತ್ತು ಶ್ರೀಮತಿ ಸುಗುಣ ಎಸ್‌. ರೈ ಬಾಲ್ಯೊಟ್ಟುಗುತ್ತು ಕೆಲ್ಲಾಡಿ ದಂಪತಿಯ ವೈವಾಹಿಕ ಜೀವನವು ಜೂ.2 ಕ್ಕೆ 50 ವರ್ಷಗಳನ್ನು ಪೂರೈಸಿ ಸುವರ್ಣ ಸಂಭ್ರಮದಲ್ಲಿದೆ.

ನುಳಿಯಾಲು ಸಂಜೀವ ರೈಯವರು ನಿಡ್ಪಳ್ಳಿ ಗ್ರಾಮದ ನುಳಿಯಾಲು ಪ್ರತಿಷ್ಠಿತ ಬಂಟ ಮನೆತನದ ದಿ. ಸುಬ್ಬಯ್ಯ ರೈ ಮತ್ತು ಬಾಜುವಳ್ಳಿ ಮಮ್ಮಕ್ಕೆ ದಂಪತಿಯ ಪುತ್ರನಾಗಿ ಜನಿಸಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಿಕ್ಷಣವನ್ನು ನಿಡ್ಪಳ್ಳಿ ಮತ್ತು ಪಾಣಾಜೆಯಲ್ಲಿ ಪಡೆದಿರುತ್ತಾರೆ. ಸುಳ್ಯದ ಬೋರ್ಡ್ ಹೈಸ್ಕೂಲಿನಲ್ಲಿ ಪ್ರೌಢ ಶಿಕ್ಷಣವನ್ನು 1959 ರಲ್ಲಿ ಪೂರ್ಣಗೊಳಿಸಿ, 1959-1961 ರ ಅವಧಿಯಲ್ಲಿ ಉಜಿರೆಯಲ್ಲಿ ಶಿಕ್ಷಕ ತರಬೇತಿಯನ್ನು ಪೂರ್ಣಗೊಳಿಸಿ, ಅದೇ ವರ್ಷ ದೂಮಡ್ಕ ಪ್ರಾಥಮಿಕ ಶಾಲೆಗೆ ಶಿಕ್ಷಕರಾಗಿ ಸೇರಿ ವೃತ್ತಿ ಜೀವನ ಪ್ರಾರಂಭಿಸುತ್ತಾರೆ. 1965-1966 ರಲ್ಲಿ ಬೆಂಗಳೂರಿನ ವೈ.ಎಂ.ಸಿ.ಎ ಕಾಲೇಜಿನಲ್ಲಿ ದೈಹಿಕ ಶಿಕ್ಷಕ ತರಬೇತಿ ಪಡೆದು 1966 ರಲ್ಲಿ ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಗೆ ದೈಹಿಕ ಶಿಕ್ಷಣ ಶಿಕ್ಷಕರಾಗಿ ಸೇವೆಗೆ ಸೇರಿ ಶಿಕ್ಷಕರಾದ ಬಳಿಕ ತಮ್ಮ ಅಧ್ಯಯನ ಮುಂದುವರಿದು ಬಿ.ಎ., ಬಿ.ಇಡಿ., ಬಿ.ಪಿ.ಇಡಿ. ಪದವಿಗಳನ್ನು ಪಡೆದಿರುತ್ತಾರೆ. 1982 ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಎಂ.ಎ ಪದವಿಯನ್ನು ಪ್ರೋ| ಡಾ| ಶ್ರೀಕಂಠ ಶಾಸ್ತ್ರಿ ಸ್ಮಾರಕ ಚಿನ್ನದ  ಪದಕದೊಂದಿಗೆ ಪಡೆಯುತ್ತಾರೆ. ನವೋದಯ ವಿದ್ಯಾಸಂಸ್ಥೆಯಲ್ಲಿ 33 ವರ್ಷಗಳ ಕಾಲ ಸೇವೆಗೈದು 1999 ರಿಂದ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ.

ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಕ್ರೀಡಾಕ್ಷೇತ್ರದಲ್ಲಿ ತರಬೇತಿಗೊಳಿಸಿ ತಾಲೂಕು ಮಟ್ಟ, ಜಿಲ್ಲಾ ಮಟ್ಟ, ರಾಜ್ಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ ಹಿರಿಮೆ ಇವರದ್ದಾಗಿತ್ತು. ಶಿಕ್ಷಕನಾದವನು ಕಲಾವಿದನೂ ಆಗಿದ್ದಲ್ಲಿ ಆತನ ವ್ಯಕ್ತಿತ್ವಕ್ಕೆ ಮೆರುಗು ಹೆಚ್ಚು ಎಂಬಂತೆ ಬಾಲ್ಯದಲ್ಲಿಯೇ ಯಕ್ಷಗಾನಾಭಿರುಚಿ ಇವರ ರಕ್ತದಲ್ಲಿಯೇ ಹರಿದುಬಂತು.  ಡಾ| ಡಿ ಸದಾಶಿವ ಭಟ್ಟರ ಮಾರ್ಗದರ್ಶನದಲ್ಲಿ ಉತ್ತಮ ಕಲಾವಿದರಾಗಿ ರೂಪುಗೊಂಡು ವಾದ-ವಿವಾದ, ತರ್ಕ-ವಿತರ್ಕಗಳ ಮೂಲಕ ತಾಳಮದ್ದಳೆ ಕೂಟಗಳಲ್ಲಿ ಜಿಲ್ಲೆಯ ಪ್ರಸಿಧ್ಧ ಕಲಾವಿದರೊಂದಿಗೆ ಸಂವಾದಿಸುವ ವಾಕ್ ಪ್ರೌಢಿಮೆಯನ್ನು ಹೊಂದಿರುತ್ತಾರೆ. 84ರ ಹರೆಯದಲ್ಲೂ ಯಕ್ಷಗಾನ ರಂಗಸ್ಥಳ ಪ್ರವೇಶಿಸಿದರೆ ಇವರು ಚಿರಯೌವನ ಕಲಾವಿದ. ದೈವದತ್ತವಾಗಿ ಬಂದ ಅಪೂರ್ವವಾದ ಕಂಚಿನ ಕಂಠಸಿರಿಯಿಂದ ಪ್ರೇಕ್ಷಕ ವೃಂದವನ್ನು ತಮ್ಮೆಡೆಗೆ ಸೆಳೆಯುವ ಶಕ್ತಿ ಇವರದ್ದಾಗಿದೆ.  ಪೌರಾಣಿಕ ಖಳ ಪಾತ್ರಗಳಾದ ಕಂಸ, ಜರಾಸಂಧ, ಭಸ್ಮಾಸುರ, ರಾವಣ ಮುಂತಾದ ಪಾತ್ರಗಳನ್ನು ರಂಗಸ್ಥಳದಲ್ಲಿ ಜೀವಂತವಾಗಿ ಸಾಕ್ಷಾತ್ಕರಿಸುವ ಓರ್ವ ಅಪರೂಪದ ಕಲಾವಿದರಾಗಿದ್ದಾರೆ.

ಬಾಜುವಳ್ಳಿ ಅಮ್ಮಣ್ಣ ರೈ ಮತ್ತು ಬಾಲ್ಯೊಟ್ಟುಗುತ್ತು ಕೆಲ್ಲಾಡಿ ಕಮಲ ರೈ ದಂಪತಿಯ ಪ್ರಥಮ ಪುತ್ರಿ  ಸುಗುಣ ಎಸ್‌. ರೈಯವರನ್ನು 1974 ರಲ್ಲಿ ವಿವಾಹವಾಗಿ ಓರ್ವ ಪುತ್ರ ಮತ್ತು ಈರ್ವರು ಪುತ್ರಿಯರನ್ನು ಪಡೆದ ಸುಖೀ ಸಂಸಾರ ಇವರದ್ದಾಗಿದೆ. ಪುತ್ರ ಪ್ರಶಾಂತ್‌ ರೈಯವರು ಪ್ರಸ್ತುತ ಮಂಗಳೂರಿನ ಬೆಸೆಂಟ್‌ ವಿದ್ಯಾಸಂಸ್ಥೆಯಲ್ಲಿ ಪದವೀಧರ ಶಿಕ್ಷಕರಾಗಿದ್ದಾರೆ. ಪುತ್ರಿ ರೇಷ್ಮಾ, ಅಳಿಯ ಸಿವಿಲ್ ಇಂಜಿನಿಯರ್ ಪ್ರದೀಪ್‌ ಕುಮಾರ್‌ ಶೆಟ್ಟಿ ಅಮೈ, ಇನ್ನೋರ್ವ ಪುತ್ರಿ ರಶ್ಮಿ, ಅಳಿಯ ಡಾ. ಗಂಗಾಧರ ಶೆಟ್ಟಿ ಕಾಟುಕುಕ್ಕೆ ಮತ್ತು‌ ಮೊಮ್ಮಕ್ಕಳೊಂದಿಗೆ ಸುಖೀ ಸಂಸಾರ ಹೊಂದಿದ್ದಾರೆ.

LEAVE A REPLY

Please enter your comment!
Please enter your name here