ಪುತ್ತೂರು: ಪುತ್ತೂರು ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ವತಿಯಿಂದ ನಿವೃತ್ತಿಗೊಂಡ ಮೆಸ್ಕಾಂ ಇಲಾಖೆಯ (ಮಂಗಳೂರು ವಿದ್ಯುತ್ ಸರಬರಾಜು ಕಂಪನಿ) ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥಯ್ಯರವರಿಗೆ ನಿವೃತ್ತಿ ಗೌರವ ವಿದಾಯ ಕಾರ್ಯಕ್ರಮ ಜೂ.1ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮೆಸ್ಕಾಂನ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ರಾಮಚಂದ್ರ, ಗುತ್ತಿಗೆದಾರ ಸದಸ್ಯರು, ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಆರಂಭದಲ್ಲಿ, ಮಂಜುನಾಥಯ್ಯ ಅವರ ಸೇವೆಯು ಮೆಸ್ಕಾಂ ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಎಂತಹ ಮಹತ್ವದ ಪಾತ್ರ ವಹಿಸಿತು ಎಂಬುದರ ಬಗ್ಗೆ ಗುತ್ತಿಗೆದಾರರ ಸಂಘದ ಪುತ್ತೂರು ಉಪ ಸಮಿತಿಯ ಸ್ಥಾಪಕಾಧ್ಯಕ್ಷ ಬಾಲಕೃಷ್ಣ ಕೊಳಾತ್ತಾಯ, ಸದಸ್ಯರಾದ ಸುಬ್ರಾಯ ಗೌಡ, ಜೇಮ್ಸ್ ಮಾಡ್ತಾ, ಹರಿಪ್ರಸಾದ್, ಅಧ್ಯಕ್ಷರಾದ ಸೂರ್ಯನಾಥ ಆಳ್ವ ಇವರುಗಳು ಈ ಕಾರ್ಯಕ್ರಮದಲ್ಲಿ ಸನ್ಮಾನಿತರ ಬಗ್ಗೆ ಶುಭ ಹಾರೈಸಿದರು .
ಸನ್ಮಾನಿತರ ಪರಿಚಯ ಪತ್ರವನ್ನು ಕೃಷ್ಣ ಪ್ರಶಾಂತ್ ರವರು ವಾಚಿಸಿದರು. ನಿವೃತ್ತಿ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸೂರ್ಯನಾಥ ಆಳ್ವರವರು ನಿವೃತ್ತರಾದ ಮಂಜುನಾಥಯ್ಯ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿದರು.
ಗೌರವ ವಿದಾಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುನಾಥಯ್ಯ ಅವರು, ಮೆಸ್ಕಾಂದಲ್ಲಿ ನಾನು ಕಳೆದ 30 ವರ್ಷಗಳು ಅತ್ಯಂತ ಸ್ಮರಣೀಯವಾದವು. ನನ್ನ ಸಹದ್ಯೋಗಿಗಳ ಬೆಂಬಲವಿಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ಎಲ್ಲಾ ಗುತ್ತಿಗೆದಾರರಿಗೂ, ಸಿಬ್ಬಂದಿ ವರ್ಗಕ್ಕೂ ಧನ್ಯವಾದಗಳು ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಜಗದೀಶ್ ಭಂಡಾರಿ ವಂದಿಸಿದರು. ಬಳಿಕ ಉಪಸ್ಥಿತರಿದ್ದ ಎಲ್ಲರೂ ಭೋಜನದೊಂದಿಗೆ ತಮ್ಮ ನೆನಪುಗಳನ್ನು ಹಂಚಿಕೊಂಡರು.