ಉಪ್ಪಿನಂಗಡಿ: ಯಾವುದೇ ಶುಭಕಾರ್ಯವು ಭಗವಂತನ ಕೃಪೆಗೆ ಒಳಗಾಗಬೇಕಾದರೆ ಸಮಾಜಕ್ಕೆ ಒಂದು ಬಿಂದು ಸಂಪತ್ತನ್ನು ನೀಡಬೇಕೆನ್ನುವುದು ಶಾಸ್ತ್ರ ವಿಧಿತ ನಡೆ. ಅಂತೆಯೇ ನಿವೃತ್ತ ಸೇನಾಧಿಕಾರಿಯೋರ್ವರು ತನ್ನ ಮನೆಯ ಗೃಹ ಪ್ರವೇಶೋತ್ಸದಲ್ಲಿ ಬಡ ಕುಟುಂಬದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಧನ ಸಹಾಯವನ್ನಿತ್ತು ಹರಸುವ ಮೂಲಕ ಸಮಾಜಕ್ಕೆ ಮಾದರಿ ಎನಿಸಿದ್ದಾರೆ.
ಅವರೇ ಭಾರತೀಯ ಗಡಿ ರಕ್ಷಣಾ ಪಡೆಯ ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಆಗಿರುವ ಚಂದಪ್ಪ ಮೂಲ್ಯ. ನಿವೃತ್ತಿಯ ಬಳಿಕ ಉಪ್ಪಿನಂಗಡಿಯಲ್ಲಿ ಅಮೂಲ್ಯ ಗ್ಯಾಸ್ ಏಜೆನ್ಸಿ ನಡೆಸಿ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಇವರು ಉಪ್ಪಿನಂಗಡಿಯ ತನ್ನ ನಿವಾಸದ ಮನೆಯಲ್ಲಿ ವಿಸ್ತೃತ ನಿವಾಸವನ್ನು ನಿರ್ಮಿಸಿದ್ದರು. ಅದರ ಗೃಹಪ್ರವೇಶವು ಆದಿತ್ಯವಾರದಂದು ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಸುಮಾರು 20 ಕ್ಕೂ ಹೆಚ್ಚಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನಗದು ರೂಪದಲ್ಲಿ ಸಹಾಯಧನವನ್ನಿತ್ತರು. ಜೊತೆಗೆ ಭಗವದ್ಗೀತ ಪುಸ್ತಕವನ್ನು ನೀಡಿ ವಿದ್ಯಾರ್ಥಿಗಳ ಬಾಳು ಬೆಳಗಲೆಂದು ಶುಭ ಹಾರೈಸಿದರು. ಇವರ ಸಾಮಾಜಿಕ ಕಾರ್ಯಗಳು ಇಷ್ಟಕ್ಕೆ ಸೀಮಿತವಾಗಿಲ್ಲ. ಮೊದಲಿನಿಂದಲೂ ಇಂತಹ ಸಮಾಜಮುಖಿ ಕೆಲಸಗಳನ್ನು ನಿರಂತವಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬಿಜೆಪಿ ಮುಂದಾಳು ಅರುಣ್ ಕುಮಾರ್ ಪುತ್ತಿಲರವರು, ತನ್ನ ಮನೆಯ ಗೃಹ ಪ್ರವೇಶದ ಶುಭ ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ಬಾಳು ಬೆಳಗಿಸುವ ಸಲುವಾಗಿ ಸಾಮಾಜಿಕ ಕಾಳಜಿಯನ್ನು ತೋರಿದ ಚಂದಪ್ಪ ಮೂಲ್ಯರವರ ನಡೆ ಸಮಾಜಕ್ಕೆ ಮಾದರಿಯಾಗಿದೆ. ಸಮಾಜದಿಂದ ಪಡೆದ ಸಂಪತ್ತನ್ನು ಸಮಾಜಕ್ಕೆ ಸಮರ್ಪಿಸುವ ಮೂಲಕ ಅಂದು ಯೋಧರಾಗಿ ದೇಶ ಸೇವೆ ಸಲ್ಲಿಸಿದವರು ಇಂದು ಉದ್ಯಮಿಯಾಗಿ ತಾಯಿ ಭಾರತಿಯ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ತಹಶೀಲ್ದಾರ್ ಬಿ.ಎಸ್. ಕುಲಾಲ್, ಪ್ರಮುಖರಾದ ಗಣೇಶ್ ಕುಲಾಲ್, ಸುಧಾಕರ ಶೆಟ್ಟಿ, ರಾಮಚಂದ್ರ ಮಣಿಯಾಣಿ, ವಿದ್ಯಾಧರ ಜೈನ್, ಹರಿರಾಮಚಂದ್ರ, ಕಸ್ತೂರಿ ಪಂಜ, ಎನ್. ಗೋಪಾಲ ಹೆಗ್ಡೆ, ಪ್ರಶಾಂತ್ ಶಿವಾಜಿನಗರ, ಗುಣಕರ ಅಗ್ನಾಡಿ, ಪುರುಷೋತ್ತಮ ಕಲ್ಬಾವಿ, ಸೋಮಯ್ಯ ಕುಲಾಲ್ ಅನಿಲೆಡೆ, ಅನುರಾಧಾ ಆರ್. ಶೆಟ್ಟಿ, ಉಮೇಶ್ ಶೆಣೈ, ಕೆ. ಜಗದೀಶ್ ಶೆಟ್ಟಿ, ಸ್ವರ್ಣೇಶ್ ಗಾಣಿಗ, ವಿಜಯ ಕುಮಾರ್ ಕಲ್ಲಳಿಕೆ, ಕಂಗ್ವೆ ವಿಶ್ವನಾಥ ಶೆಟ್ಟಿ, ಜಯಂತ ಪೊರೋಳಿ, ಪ್ರಶಾಂತ್ ಪೆರಿಯಡ್ಕ, ಚಂದ್ರಶೇಖರ ಮೊದಲಾದವರು ಉಪಸ್ಥಿತರಿದ್ದರು.