ನೆಲ್ಯಾಡಿ: ಬಿಲ್ಲವ ಗ್ರಾಮ ಸಮಿತಿ, ಬಿಲ್ಲವ ಮಹಿಳಾ ಸಮಿತಿ ವಾರ್ಷಿಕ ಮಹಾಸಭೆ- ಉಚಿತ ಪುಸ್ತಕ ವಿತರಣೆ, ಪ್ರತಿಭಾ ಪುರಸ್ಕಾರ

0

ನೆಲ್ಯಾಡಿ: ಬಿಲ್ಲವ ಗ್ರಾಮ ಸಮಿತಿ ನೆಲ್ಯಾಡಿ ಹಾಗೂ ಬಿಲ್ಲವ ಮಹಿಳಾ ವೇದಿಕೆ ನೆಲ್ಯಾಡಿ ಇದರ ವಾರ್ಷಿಕ ಮಹಾಸಭೆ, ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜೂ.2ರಂದು ನೆಲ್ಯಾಡಿ ಹೊಸಮಜಲು ಹೋಟೆಲ್ ಬಿರ್ವ ಇದರ ಸಭಾಂಗಣದಲ್ಲಿ ನಡೆಯಿತು.

ಆರಂಭದಲ್ಲಿ ನೋಣಯ್ಯ ಪೂಜಾರಿ ಅಂಬರ್ಜೆ ಮತ್ತು ಬಳಗದವರಿಂದ ಭಜನೆ, ಗುರುಪೂಜೆ ನಡೆಯಿತು. ಬಳಿಕ ನಡೆದ ಸಮಾರಂಭವನ್ನು ಪುತ್ತೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್‌ ಕುಮಾರ್ ಕೆಡೆಂಜಿ ಅವರು ಉದ್ಘಾಟಿಸಿ ಮಾತನಾಡಿ, ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಿಷ್ಠರಾಗಿ ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶದಂತೆ ಕೆಲಸ ನಿರ್ವಹಿಸಬೇಕು. ಇದರ ಜೊತೆಗೆ ಸಂಘಟನೆಯನ್ನೂ ಮುಖ್ಯ ವಾಹಿನಿಗೆ ತರಬೇಕೆಂದು ಹೇಳಿದರು. ನೆಲ್ಯಾಡಿ ಬಿಲ್ಲವ ಗ್ರಾಮ ಸಮಿತಿ ಅಧ್ಯಕ್ಷ ಮೋಹನ್ ಕುಮಾರ್ ದೋಂತಿಲ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತಾಲೂಕು ಬಿಲ್ಲವ ಸಂಘದ ಉಪಾಧ್ಯಕ್ಷೆ ವಿಮಲಾ ಸುರೇಶ್, ಬಂಟ್ವಾಳ ಪಿಆರ್‌ಇಡಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರನಾಥ ಸಾಲ್ಯಾನ್, ಪುತ್ತೂರು ಬಿಲ್ಲವ ಸಂಘದ ವಲಯ ಸಂಚಾಲಕರಾದ ಡಾ.ಸದಾನಂದ ಕುಂದರ್, ಉಷಾ ಅಂಚನ್, ನೆಲ್ಯಾಡಿ ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ದೀಕ್ಷಾ ಸಾಲ್ಯಾನ್, ನೆಲ್ಯಾಡಿ ಬಿಲ್ಲವ ಗ್ರಾಮ ಸಮಿತಿ ಕಾರ್ಯದರ್ಶಿ ಜನಾರ್ದನ ಬಾಣಜಾಲು, ಕೋಶಾಧಿಕಾರಿ ಲೋಕೇಶ್ ಬಾಣಜಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯದರ್ಶಿ ಜನಾರ್ದನ ಬಾಣಜಾಲು ವರದಿ ವಾಚಿಸಿದರು. ಅಧ್ಯಕ್ಷ ಮೋಹನ್‌ಕುಮಾರ್ ದೋಂತಿಲ ಸ್ವಾಗತಿಸಿ, ನಿರೂಪಿಸಿದರು. ಕೋಶಾಧಿಕಾರಿ ಲೋಕೇಶ್ ಬಾಣಜಾಲು ವಂದಿಸಿದರು. ಸುಂದರ ಬಿ., ಮಹೇಶ್ ಬಿ., ತುಳಸಿಧರನ್, ಶಿವರಾಜ್ ಸುಬ್ರಹ್ಮಣ್ಯ, ಪದ್ಮಾವತಿ, ಲೀಲಾವತಿ, ಉಷಾವಿಜಯ್, ಅನಿತಾಸುರೇಶ್, ಲಿತಿನ್ ಕುಮಾರ್, ಶ್ರೀಧರ, ಚಂದ್ರಶೇಖರ್ ಬಿ., ಅಣ್ಣಿ ಪೂಜಾರಿ, ಕೌಶಿಕ್, ತ್ರಿಷಾನ್, ರಕ್ಷಾಣ್, ಸುನೀಶ್, ವೀರಪ್ಪ ವಿವಿಧ ಜವಾಬ್ದಾರಿ ನಿರ್ವಹಿಸಿದರು.

ಸನ್ಮಾನ/ಪ್ರತಿಭಾ ಪುರಸ್ಕಾರ:
ನೆಲ್ಯಾಡಿ ಬಿಲ್ಲವ ಗ್ರಾಮ ಸಮಿತಿಯ ಕೋಶಾಧಿಕಾರಿಯೂ ಆಗಿರುವ ಕೌಕ್ರಾಡಿ ಗ್ರಾ.ಪಂ.ಅಧ್ಯಕ್ಷ ಲೋಕೇಶ್ ಬಾಣಜಾಲು ಹಾಗೂ ಪಿಆರ್‌ಇಡಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಾರನಾಥ ಸಾಲ್ಯಾನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. 2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.80ಕ್ಕಿಂತ ಹೆಚ್ಚು ಹಾಗೂ ಪಿಯುಸಿಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಪಡೆದ ನೆಲ್ಯಾಡಿ ಗ್ರಾಮದ ಬಿಲ್ಲವ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಬಿಲ್ಲವ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.

LEAVE A REPLY

Please enter your comment!
Please enter your name here