ಪುತ್ತೂರು: ಅಂಗಡಿಯವರು ಕಸ ಗುಡಿಸಿದ್ದಕ್ಕೆ ಹಣ ಕೊಡುತ್ತಾರೆ ಈ ಆಸೆಗಾಗಿ ಇಲ್ಲೊಬ್ಬ ನಾಯಿಯ ಹಿಕ್ಕೆಯನ್ನು ತಂದು ಅಂಗಡಿ ಮುಂದೆ ಹಾಕಿ ತಾನೇ ಗುಡಿಸಲು ಬಂದ ಘಟನೆಯೊಂದು ಕುಂಬ್ರದಲ್ಲಿ ನಡೆದಿದೆ. ಈ ಘಟನೆ ಅಂಗಡಿಯ ಸಿಸಿ ಕ್ಯಾಮಾರದಲ್ಲಿ ದಾಖಲಾಗಿದೆ. ಕುಂಬ್ರದ ಪ್ರೇಮಚಂದ್ರ ಕಾಂಪ್ಲೆಕ್ಸ್ನಲ್ಲಿರುವ ರಾಜೇಶ್ ಪಲ್ಲತ್ತಾರು ಮಾಲಕತ್ವದ ಪಲ್ಲತ್ತಾರು ಪೂಜಾ ಸಾಮಾಗ್ರಿಗಳ ಮಳಿಗೆಯ ಅಂಗಳವನ್ನು ಪ್ರತಿದಿನ ಒಂದಿಬ್ಬರು ಗುಡಿಸುತ್ತಿದ್ದರು. ಕಸ ಮಾತ್ರ ಇದ್ದರೆ ಅದನ್ನು ಗುಡಿಸಿದವರಿಗೆ ಮಾಲಕರು 30 ರೂಪಾಯಿ ಕೊಡುತ್ತಿದ್ದರು. ಒಂದು ವೇಳೆ ನಾಯಿ ಹಿಕ್ಕೆ ಇತ್ಯಾದಿ ತ್ಯಾಜ್ಯ ಇದ್ದರೆ ಅದನ್ನು ತೆಗೆದರೆ 50 ರೂಪಾಯಿ ಕೊಡುತ್ತಿದ್ದರು. ಇದನ್ನೇ ಬಂಡವಾಳವಾಗಿಸಿಕೊಂಡು ಅಲ್ಲೇ ಪಕ್ಕದಲ್ಲಿದ್ದ ನಾಯಿ ಹಿಕ್ಕೆಯನ್ನು ತಂದು ಅಂಗಡಿಯ ಮುಂದೆ ಹಾಕಿ ತಗಲಾಕೊಂಡ ಪ್ರಸಂಗ ನಡೆದಿದೆ. ಅಂಗಡಿ ಮಾಲಕರು ಅಂಗಡಿ ತೆರೆಯಲು ಬಂದಾಗ ಅಂಗಡಿ ಎದುರಲ್ಲಿ ನಾಯಿ ಹಿಕ್ಕೆ ಇರುವುದು ಕಂಡು ಬಂದಿದ್ದು ಈ ಬಗ್ಗೆ ಸಂಶಯಗೊಂಡ ಅವರು ಸಿಸಿ ಕ್ಯಾಮರ ಪರಿಶೀಲಿಸಿದ್ದಾರೆ ಆಗ ಒಬ್ಬ ನಾಯಿ ಹಿಕ್ಕೆಯನ್ನು ತಂದು ಸುರಿಯುತ್ತಿರುವುದು ಸಿಸಿ ಕ್ಯಾಮಾರದಲ್ಲಿ ದಾಖಲಾಗಿದೆ. ಹಣದ ಆಸೆಗಾಗಿ ಈ ರೀತಿ ಮಾಡಲಾಗಿದೆ ಎಂದು ಅಂಗಡಿ ಮಾಲಕ ರಾಜೇಶ್ ಪಲ್ಲತ್ತಾರು ತಿಳಿಸಿದ್ದಾರೆ.