ಪುತ್ತೂರು: ಜಾಗತಿಕ ತಾಪಮಾನ ಹೆಚ್ಚಳ ಹಾಗೂ ಪರಿಸರ ಅಸಮತೋಲನದ ಸಮಸ್ಯೆಯಿಂದ ಹೊರಬರಲು ಇರುವ ಏಕೈಕ ಮಾರ್ಗ ಗಿಡಮರಗಳನ್ನು ಬೆಳೆಸುವುದು. ಪ್ರತಿಯೊಬ್ಬ ವಿದ್ಯಾರ್ಥಿಯು ಪ್ರತಿ ವರ್ಷ ತನ್ನ ಹುಟ್ಟು ಹಬ್ಬದ ದಿನದಂದು ಗಿಡವನ್ನು ನೆಡುವುದರ ಮೂಲಕ ಪರಿಸರ ಸಂರಕ್ಷಣೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕೆಂದು ಶಿಕ್ಷಕಿ ನೇತ್ರಾವತಿ ಹೇಳಿದರು. ಇವರು ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಬೊಳಿಕಳ ಇಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆಪರಿಸರದ ಮಹತ್ವ, ಪರಿಸರ ಮಾಲಿನ್ಯಕ್ಕೆ ಕಾರಣಗಳು ಹಾಗೂ ಪರಿಸರ ಸಂರಕ್ಷಣೆಯಲ್ಲಿ ನಮ್ಮೆಲ್ಲರ ಪಾತ್ರ, ಪ್ರತಿ ಮನೆಯಲ್ಲಿ ಸಣ್ಣ ಕೈತೋಟ ರಚನೆ ಇತ್ಯಾದಿ ವಿಚಾರಗಳ ಬಗ್ಗೆ ಮಹತ್ವಪೂರ್ಣವಾದ ಮಾಹಿತಿಯನ್ನು ನೀಡಿದರು .
ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಹಾಯಕಿ ವಿದ್ಯಾ ಇವರು ಡೆಂಗ್ಯೂ ಜ್ವರ , ಸ್ವಚ್ಛತೆ ಹಾಗೂ ಮಕ್ಕಳ ಸುರಕ್ಷತೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.
ತದನಂತರ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಔಷಧೀಯ ಗಿಡಗಳು, ತರಕಾರಿ ಗಿಡಗಳು, ಅಲಂಕಾರಿಕ ಗಿಡಗಳು ಹಾಗೂ ಹೂವಿನ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನದ ಆಚರಣೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡರು. ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆ ಹಾಗೂ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.