ಪುತ್ತೂರು:ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಬೈಲಿಫ್ ಓರ್ವರು ನ್ಯಾಯಾಲಯದ ಆದೇಶ ಕಾರ್ಯಗತಗೊಳಿಸಲು ಹೋಗಿದ್ದ ವೇಳೆ ಅಡ್ಡಿ ಆತಂಕ ವ್ಯಕ್ತಪಡಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಮೂವರು ಆರೋಪಿಗಳಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರುಗೊಳಿಸಿದೆ.
ಪುತ್ತೂರು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ಬೈಲಿಫ್ ಆಗಿರುವ ಪಾಂಡುರಂಗ ಎಂಬವರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದರು.‘ತಾನು ಹೆಚ್ಚುವರಿ ಸಿವಿಲ್ ನ್ಯಾಯಾಲಯ ಪುತ್ತೂರು ಇಲ್ಲಿನ ಡೆಲಿವರಿ ಆದೇಶ ಕಾರ್ಯಕ್ಕೆ ಸ್ಥಿರಾಸ್ತಿಯಲ್ಲಿ ಶಾಂತಿ ಕಾಪಾಡಲು ಪುತ್ತೂರು ನಗರ ಠಾಣೆಯ ಎರಡು ಮಹಿಳಾ,ಎರಡು ಪುರುಷ ಸಿಬ್ಬಂದಿ ಹಾಗೂ ಓರ್ವ ಎಎಸ್ಐ, ಭೂಮಾಪನ ಅಧಿಕಾರಿ ಮತ್ತು ಅವರ ಸಹಾಯಕರು ಹಾಗೂ ಕೋರ್ಟ್ ಕಮಿಷನರ್ ಕೃಪಾಶಂಕರ ಮತ್ತು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಮೋದ್ ಮತ್ತು ಅವರ ಸಹಾಯಕರು,ಡೆಲಿವರಿ ಆದೇಶದ ಡಿಎಚ್ಆರ್ ಸೀತಾರಾಮ ಕೇವಳ ಮತ್ತು ಅವರ ಕಡೆಯ ಜನರೊಂದಿಗೆ 12.1.2024ರಂದು ಬನ್ನೂರು ಗ್ರಾಮದ ಬನ್ನೂರು ಕರ್ಮಲ ಎಂಬಲ್ಲಿ ಹೋಗಿ ಸಿರಾಸ್ತಿಯ ಜೆಡಿಅರ್ 1 ಚಂದ್ರಶೇಖರ ಆಚಾರ್ಯ, ಜೆಡಿಆರ್2 ಶ್ರೀಮತಿ ನಿರ್ಮಲರವರನ್ನು ವಿಚಾರಿಸಿದಾಗ ಅವರು ಮನೆಯಲ್ಲಿ ಹಾಜರಿಲ್ಲದೆ, ಅವರ ಮನೆಗೆ ಬೀಗ ಹಾಕಿರದೇ ಆಸುಪಾಸಿನ ಜನರಲ್ಲಿ ವಿಚಾರಿಸಿದಾಗ ಅವರ ದೂರವಾಣಿಗೆ ಕರೆ ಮಾಡಿ ವಿಚಾರಿಸಿದಾಗ ಬರುವುದಾಗಿ ತಿಳಿಸಿದ್ದರು.ಅವರು ಸಿರಾಸ್ತಿಗೆ ಬಂದ ನಂತರ ನ್ಯಾಯದ ಡೆಲಿವರಿ ಆದೇಶದ ವಿವರವನ್ನು ಓದಿ ಹೇಳಿ ತಿಳಿಯಪಡಿಸಿದ ನಂತರ ಸ್ಥಿರಾಸ್ತಿಯಲ್ಲಿ ಜೇಡಿಆರ್ 1 ಚಂದ್ರಶೇಖರ್ ಆಚಾರ್ಯರವರ ಮಗ ಲಕ್ಷ್ಮೀಪ್ರಸಾದ್ ಮತ್ತು ಚಂದ್ರಶೇಖರ ಆಚಾರ್ಯ ಹಾಗೂ ಶ್ರೀಮತಿ ನಿರ್ಮಲ ಅವರು ನ್ಯಾಯಾಲಯದ ಡೆಲಿವರಿ ಆದೇಶದ ಕಾರ್ಯವನ್ನು ಕಾರ್ಯಗತಗೊಳಿಸಲು ಅಡ್ಡಿ ಆತಂಕ ವ್ಯಕ್ತಪಡಿಸಿ ನ್ಯಾಯಾಲಯದ ಆದೇಶದ ಬಗ್ಗೆ ತುಚ್ಚವಾಗಿ ಮಾತನಾಡಿ ಅವಾಚ್ಯ ಶಬ್ದಗಳಿಂದ ಬೈದು ತನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿರುತ್ತಾರೆ’ ಎಂದು ಆರೋಪಿಸಿ ಪಾಂಡುರಂಗರವರು ಪುತ್ತೂರು ನಗರ ಪೋಲಿಸರಿಗೆ ದೂರು ನೀಡಿದ್ದರು.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಇದೀಗ ಆರೋಪಿಗಳಿಗೆ ಜಿಲ್ಲಾ ಸೆಷನ್ಸ್ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.ಆರೋಪಿಗಳ ಪರವಾಗಿ ನ್ಯಾಯವಾದಿ ರಮ್ಲತ್ ಎಂ ಶಾಂತಿನಗರ ವಾದಿಸಿದ್ದರು.