ಪುತ್ತೂರು: ಕುಂಬ್ರ-ಬೆಳ್ಳಾರೆ ರಾಜ್ಯ ಹೆದ್ದಾರಿಯಲ್ಲಿ ತಿಂಗಳಾಡಿಯಿಂದ ಐನೂರು ಮೀಟರ್ ದೂರದಲ್ಲಿ ಕಜೆ ಸಮೀಪ ಅಪಾಯಕಾರಿ ಮರವೊಂದಿದ್ದು ಬೀಳುವ ಹಂತದಲ್ಲಿದೆ. ಹಲವು ವರ್ಷಗಳ ಹಳೆಯದಾದ ಹಾಲೆ ಮರ ಇದಾಗಿದ್ದು ಈಗಾಗಲೇ ಮರದ ಕೊಂಬೆಗಳು ತುಂಡಾಗಿ ಬೀಳುತ್ತಿವೆ. ರಸ್ತೆಯ ಬದಿಯಲ್ಲೇ ಮರ ಇರುವುದರಿಂದ ಮರದ ಕೊಂಬೆಗಳು ರಸ್ತೆಯ ಇನ್ನೊಂದು ಬದಿಗೆ ಚಾಚಿ ಕೊಂಡಿವೆ. ಹಾಲೆ ಮರದ ತೊಗಟೆ ಔಷಧೀಯ ಗುಣ ಹೊಂದಿರುವುದರಿಂದ ಮರದ ಬುಡದಿಂದ ಜನರು ತೊಗಟೆಯನ್ನು ತೆಗೆದು ಮರ ಟೊಳ್ಳಾಗಿದ್ದು ಬೀಳುವ ಅಪಾಯದಲ್ಲಿದೆ. ಮರದ ಹತ್ತಿರದಲ್ಲೇ ವಿದ್ಯುತ್ ಲೈನ್ ಕೂಡ ಹಾದು ಹೋಗಿರುವುದರಿಂದ ಮರ ಎಲ್ಲಾದರೂ ಮುರಿದು ಬಿದ್ದರೆ ಅಪಾಯ ಸಂಭವಿಸುವ ಸಾಧ್ಯತೆ ಇದೆ. ತುಂಬಾ ಹಳೇಯ ಮರ ಇದಾಗಿರುವುದರಿಂದ ಈ ಮರವನ್ನು ತೆರವುಗೊಳಿಸುವುದೇ ಸೂಕ್ತ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಹಾಗೇ ಮೆಸ್ಕಾಂ ಇಲಾಖೆಯವರು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.