ಪುತ್ತೂರು: ಜೂ.11ರಂದು ಹೃದಯಾಘಾತದಿಂದ ಮೃತಪಟ್ಟ ಉದ್ಯಮಿ, ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಪುರುಷರಕಟ್ಟೆ ಅವರ ಮೃತದೇಹದ ಅಂತಿಮ ಯಾತ್ರೆ ಪುತ್ತೂರು ಸರಕಾರಿ ಆಸ್ಪತ್ರೆ ಬಳಿಯಿಂದ ಪುರುಷರಕಟ್ಟೆಯ ಪ್ರಕಾಶ್ ಅವರ ಮನೆ ವರೆಗೆ ನಡೆಯಿತು. ಆಂಬ್ಯುಲೆನ್ಸ್‌ನಲ್ಲಿ ಮೂಲಕ ಮೃತದೇಹವನ್ನು ಕೊಂಡೊಯ್ಯಲಾಯಿತು.
ಶಾಸಕ ಅಶೋಕ್ ಕುಮಾರ್ ರೈ ಮೆರವಣಿಗೆಯ ನೇತೃತ್ವ ವಹಿಸಿದ್ದರು.
ಪುತ್ತೂರು ಗಾಂಧಿ ಕಟ್ಟೆ ಬಳಿ, ಎಪಿಎಂಸಿ ಕಾಂಗ್ರೆಸ್ ಕಚೇರಿ ಬಳಿ, ದರ್ಬೆಯಲ್ಲಿ ಮುಕ್ವೆಯಲ್ಲಿ ಹಾಗೂ ಪುರುಷರಕಟ್ಟೆ ಜಂಕ್ಷನ್‌ನಲ್ಲಿ ಸೇರಿದ್ದ ಜನರಿಗೆ ಮೃತದೇಹವನ್ನು ನೋಡಲು ಅವಕಾಶ ಮಾಡಿಕೊಡಲಾಯಿತು. ಪುತ್ತೂರಿನಿಂದ ಹೊರಟ ಪ್ರಕಾಶ್ ಅವರ ಅಂತಿಮ ಯಾತ್ರೆಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು. ಮೃತದೇಹ ಪುರುಷರಕಟ್ಟೆಯ ಮನೆಗೆ ತಲುಪುತ್ತಿದ್ದಂತೆ ಮನೆ ಬಳಿ ನೂರಾರು ಮಂದಿ ಸೇರಿದ್ದರು.
ಶಾಸಕ ಅಶೋಕ್ ಕುಮಾರ್ ರೈ ಅವರು ಮುಂಚೂಣಿಯಲ್ಲಿ ನಿಂತು ಎಲ್ಲ ಕಾರ್ಯಗಳನ್ನು ನಿಭಾಯಿಸುತ್ತಿದ್ದರು. ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಾರಾಂ ಕೆ.ಬಿ, ಕೆಪಿಸಿಸಿ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ ಸಹಿತ ಸಾವಿರಾರು ಮಂದಿ ಆಗಮಿಸಿ ಅಂತಿಮ ದರ್ಶನ ಪಡೆದರು. ಪ್ರಕಾಶ್ ಅವರ ಆಪ್ತರು, ಸ್ನೇಹಿತರು ಕಣ್ಣೀರು ಸುರಿಸುತ್ತಿದ್ದರು. ಮೃತ ಪ್ರಕಾಶ್ ಅವರ ಪುತ್ರಿಯ ರೋದನಕ್ಕೆ ಸೇರಿದ್ದವರೆಲ್ಲ ಕಣ್ಣೀರು ಸುರಿಸಿದ ದೃಶ್ಯ ಕಂಡು ಬಂತು. ಒಬ್ಬ ಸಜ್ಜನ ಸಮಾಜ ಸೇವಕ, ಊರಿನ ಮುಖಂಡನನ್ನು ಕಳೆದುಕೊಂಡೆವು ಎಂದು ಸೇರಿದ್ದವರು ಮಾತನಾಡುತ್ತಿದ್ದರು.