ಕೆಸರುಮಯಗೊಂಡ ದೇರ್ಲ ಪರಿಶಿಷ್ಠ ಜಾತಿ ಕಾಲನಿ ಸಂಪರ್ಕ ರಸ್ತೆ – ಸಂಕಷ್ಟದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು…! ವಾಹನ ಸವಾರರು…

0

@ ಸಿಶೇ ಕಜೆಮಾರ್

ಪುತ್ತೂರು: ಮಳೆಗಾಲ ಬಿಡಿ ಬೇಸಿಗೆ ಕಾಲದಲ್ಲೂ ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟದ ಕೆಲಸ ಏಕೆಂದರೆ ಅಷ್ಟೊಂದು ಹೊಂಡಗುಂಡಿಗಳು ಈ ರಸ್ತೆಯಲ್ಲಿವೆ! ಮಳೆ ಬಂತೆಂದರೆ ಸಾಕು ಗುಂಡಿಗಳಲ್ಲಿ ನೀರು ತುಂಬಿಕೊಂಡು ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ನಡೆದುಕೊಂಡು ಹೋಗಲು ಕೂಡ ಕಷ್ಟಸಾಧ್ಯವಾಗಿದೆ. ಪ್ರತಿ ನಿತ್ಯ ಸಂಚರಿಸುವ ಶಾಲಾ ಮಕ್ಕಳ ಪರಿಸ್ಥಿತಿಯನ್ನು ನೋಡಿದಾಗ ಅಯ್ಯೋ ಪಾಪ ಅನ್ನಿಸುತ್ತಿದೆ. ಇಷ್ಟೊಂದು ಖರಾಬು ಆಗಿರುವ ರಸ್ತೆ ಯಾವುದು ಅಂತೀರಾ..? ಕೆಯ್ಯೂರು ಗ್ರಾಪಂ ವ್ಯಾಪ್ತಿಯ ಇಳಂತಾಜೆ ದೇರ್ಲ ಅರಿಯಡ್ಕ ಶೇಖಮಲೆ ಜಿಲ್ಲಾ ಪಂಚಾಯತ್ ರಸ್ತೆಯಲ್ಲಿ ದೇರ್ಲ ಪರಿಶಿಷ್ಠ ಜಾತಿ ಕಾಲನಿ ಸಂಪರ್ಕಿಸುವ ರಸ್ತೆಯಾಗಿದೆ.


ಪರಿಶಿಷ್ಠ ಜಾತಿ ಕಾಲನಿ ಸಂಪರ್ಕ ರಸ್ತೆ
ದೇರ್ಲ ಪರಿಶಿಷ್ಠ ಜಾತಿ ಕಾಲನಿ ಸಂಪರ್ಕಿಸುವ ರಸ್ತೆ ಇದಾಗಿದೆ. ಸುಮಾರು 200 ಕ್ಕೂ ಅಧಿಕ ಮನೆಗಳಿವೆ. ಅಂಗನವಾಡಿ ಕೇಂದ್ರ ಕೂಡ ಇದೆ. ಪ್ರತಿ ನಿತ್ಯ ಹಲವು ವಿದ್ಯಾರ್ಥಿಗಳು ಈ ರಸ್ತೆಯಲ್ಲಿ ಓಡಾಡುತ್ತಾರೆ. ಶಾಲಾ ಕಾಲೇಜು ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವ ಶಾಲಾ ಬಸ್ಸು, ಸರಕಾರಿ ಬಸ್ಸು ಕೂಡ ಈ ರಸ್ತೆಯಲ್ಲಿ ಸಂಚರಿಸುತ್ತದೆ.

ಹೊಂಡ ಗುಂಡಿಗಳಿಂದ ತುಂಬಿಕೊಂಡ ರಸ್ತೆ
ದೇರ್ಲದಿಂದ ಸುಮಾರು ಅರ್ಧ ಕಿ.ಮೀ ವ್ಯಾಪ್ತಿಯ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಹಲವು ವರ್ಷಗಳ ಹಿಂದೆ ಸಡಕ್ ಯೋಜನೆಯಲ್ಲಿ ಈ ರಸ್ತೆಗೆ ಡಾಂಬರ್ ಆಗಿದೆ. ಇಳಂತಾಜೆಯಿಂದ ದೇರ್ಲ ಅಂಗನವಾಡಿ ಕೇಂದ್ರದ ತನಕ ಸುಮಾರು ಅರ್ಧ ಕಿ.ಮೀ ರಸ್ತೆಯಲ್ಲಿ ಬರೇ ಹೊಂಡಗುಂಡಿಗಳೇ ತುಂಬಿಕೊಂಡಿದೆ. ಬೇಸಿಗೆಕಾಲದಲ್ಲಿ ಈ ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಲಾಗಿತ್ತು. ಇದೀಗ ಮಳೆಗಾಲದಲ್ಲಿ ಮಳೆ ನೀರು ತುಂಬಿಕೊಂಡು ಸಂಪೂರ್ಣ ಕೆಸರುಮಯವಾಗಿದೆ. ಜೋರು ಮಳೆ ಬರುವ ಸಂದರ್ಭದಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡು ನಡೆದುಕೊಂಡು ಹೋಗಲು ಕೂಡ ಕಷ್ಟಸಾಧ್ಯವಾಗಿದೆ.

ಸಂಕಷ್ಟದಲ್ಲಿ ಶಾಲಾ, ಕಾಲೇಜು ವಿದ್ಯಾರ್ಥಿಗಳು..!
ರಸ್ತೆಯಲ್ಲಿ ಕೆಸರುಮಣ್ಣು ತುಂಬಿಕೊಂಡಿರುವುದರಿಂದ ನಡೆದುಕೊಂಡು ಹೋಗಲು ಕೂಡ ಕಷ್ಟಸಾಧ್ಯವಾಗಿದೆ. ದ್ವಿಚಕ್ರ ವಾಹನಗಳು ಸೇರಿದಂತೆ ಘನ ವಾಹನ ಸಂಚಾರಕ್ಕೂ ತೊಂದರೆಯಾಗಿದೆ. ಮುಖ್ಯವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಆದ್ದರಿಂದ ಸಂದಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಗುಂಡಿ ಮುಚ್ಚುವ ಕೆಲಸ ಶೀಘ್ರವೇ ಆಗಬೇಕಾಗಿದೆ.
ಮುಖ್ಯವಾಗಿ ಈ ಅರ್ಧ ಕಿ.ಮೀ ರಸ್ತೆಯಲ್ಲಿರುವ ಹೊಂಡಗುಂಡಿಗಳನ್ನು ಶೀಘ್ರವೇ ಮುಚ್ಚಬೇಕಾಗಿದೆ. ವಾಹನ ಓಡಾಡಕ್ಕೆ ತೀವ್ರ ತೊಂದರೆಯಾಗುತ್ತಿದ್ದು ಶಾಲಾ ಬಸ್ಸುಗಳ ಓಡಾಡಕ್ಕೂ ಸಮಸ್ಯೆಯಾಗುತ್ತಿದೆ. ಆದ್ದರಿಂದ ಶಾಸಕರು ಈ ಬಗ್ಗೆ ಗಮನ ಹರಿಸಿ ಶೀಘ್ರವೇ ರಸ್ತೆಯಲ್ಲಿ ಹೊಂಡಗುಂಡಿಗಳನ್ನು ಮುಚ್ಚಿಸುವ ಕೆಲಸ ಮಾಡಬೇಕಾಗಿದೆ ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.

‘ದೇರ್ಲ ಪರಿಶಿಷ್ಟ ಜಾತಿ ಕಾಲನಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸುಮಾರು 500 ಮೀಟರ್ ದೂರದವರೆಗೆ ರಸ್ತೆಯು ಸಂಪೂರ್ಣ ಹಾಳಾಗಿದ್ದು, ಹೊಂಡಗುಂಡಿಗಳಿಂದ ತುಂಬಿಕೊಂಡು ಕೆಸರುಮಯವಾಗಿದೆ. ಇದರಿಂದ ಶಾಲಾ,ಕಾಲೇಜು ವಿದ್ಯಾರ್ಥಿಗಳಿಗೆ ಸೇರಿದಂತೆ ಗ್ರಾಮಸ್ಥರಿಗೆ ಬಹಳಷ್ಟು ತೊಂದರೆಯಾಗಿದೆ. ಈ ಬಗ್ಗೆ ಗ್ರಾಮಸ್ಥರ ಮನವಿಯಂತೆ ಶಾಸಕರಿಗೆ ಮನವಿ ಸಲ್ಲಿಸುವ ಮೂಲಕ ವಿಷಯ ತಿಳಿಸುವ ಕೆಲಸ ಮಾಡುತ್ತೇವೆ.’
ಬಟ್ಯಪ್ಪ ರೈ ದೇರ್ಲ, ಸದಸ್ಯರು ಕೆಯ್ಯೂರು ಗ್ರಾಪಂ

LEAVE A REPLY

Please enter your comment!
Please enter your name here