ಎರಡು ಅಂಗಡಿಗಳು ಸಂಪೂರ್ಣ ಭಸ್ಮ: ಐದು ಅಂಗಡಿಗಳಿಗೆ ಹಾನಿ
ಉಪ್ಪಿನಂಗಡಿ: ಇಲ್ಲಿನ ಪೃಥ್ವಿ ಮಾಲ್‌ನಲ್ಲಿ ಕಳೆದ ರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಎರಡು ಅಂಗಡಿಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದ್ದು, ಅದರ ಅಕ್ಕಪಕ್ಕದಲ್ಲೇ ಇದ್ದ ಇನ್ನಿತರ ಐದು ಅಂಗಡಿಗಳಿಗೂ ಹಾನಿಯಾಗಿದೆ. ಇದರಿಂದಾಗಿ ಎಲ್ಲಾ ಅಂಗಡಿಗಳವರಿಗೆ ಸುಮಾರು 50 ಲಕ್ಷ ರೂಪಾಯಿಗೂ ಅಧಿಕ ಹಾನಿಯಾಗಿದೆ.
ಎ.ಎಸ್. ತಾಹಿರಾ ಅವರ ಮಾಲಕತ್ವದ ಸಫಾ ಗಿಫ್ಟ್ ಆಂಡ್ ಟಾಯ್ಸ್ ಸೆಂಟರ್‌ನಲ್ಲಿ ಮೊದಲು ಬೆಂಕಿ ಕಾಣಿಸಿಕೊಂಡಿದ್ದು, ಅದರಲ್ಲಿದ್ದ ವಸ್ತುಗಳೆಲ್ಲಾ ಸಂಪೂರ್ಣ ಸುಟ್ಟು ಕರಕಲಾಗಿವೆ. ಇನ್ನು ಬಿಚ್ಚದ ಪಾರ್ಸೆಲ್ ಕಟ್ಟೊಂದರಲ್ಲಿ ಎರಡು ಲಕ್ಷ ರೂ. ಮೊತ್ತದ ಬ್ಯಾಗ್‌ಗಳಿದ್ದು, ಅವುಗಳು ಬೆಂಕಿಗೆ ಆಹುತಿಯಾಗಿವೆ. ಅವಲ್ಲದೇ, ಈ ಸೆಂಟರ್‌ನಲ್ಲಿದ್ದ ಬ್ಯಾಗ್, ಗಿಫ್ಟ್ ಐಟಂಗಳು, ಆಟಿಕೆ ಸಾಮಗ್ರಿ, ಕಪಾಟುಗಳು ಸೇರಿದಂತೆ ಎಲ್ಲಾ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಇವರಿಗೆ ಸುಮಾರು 27 ಲಕ್ಷಕ್ಕೂ ಅಧಿಕ ನಷ್ಟವುಂಟಾಗಿದೆ.
ಇದರ ಪಕ್ಕದಲ್ಲೇ ಇದ್ದ ಅಬ್ದುಲ್ ಶುಕೂರ್ ಅವರ ‘ಎಸ್ 2’ ಮೊಬೈಲ್ ಅಂಗಡಿಯೂ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅಂಗಡಿಯಲ್ಲಿದ್ದ ಹೊಸ ಮೊಬೈಲ್ ಫೋನ್‌ಗಳು, ಮೊಬೈಲ್ ಕವರ್‌ಗಳು, ಮೊಬೈಲ್ ರಿಪೇರಿ ಮಾಡುವ ಸಾಧನಗಳಲ್ಲದೇ, ಐಫೋನ್ ಸಹಿತ ರಿಪೇರಿಗೆಂದು ಬಂದಿದ್ದ ಇತರೆ ಕಂಪೆನಿಗಳ ಮೊಬೈಲ್ ಫೋನ್‌ಗಳು ಸಂಪೂರ್ಣ ಸುಟ್ಟು ಹೋಗಿವೆ. ಇದರ ಪಕ್ಕದಲ್ಲೇ ಇದ್ದ ಸಿಟಿ ಟಾಪ್ ಟೆನ್ ಸೆಲೆಕ್ಷನ್‌ನ ಎದುರು ಅಳವಡಿಸಲಾದ ಗಾಜಿನ ಫಾರ್ಟೇಶನ್‌ಗಳು ಒಡೆದು ಹೋಗಿದ್ದು, ಹೊರಗಿನ ಸೀಲಿಂಗ್ ಸಂಪೂರ್ಣ ಸುಟ್ಟು ಹೋಗಿವೆ. ಯುವಕರ ತಂಡ ಸಕಾಲಕ್ಕೆ ಇದರೊಳಗಿದ್ದ ಬಟ್ಟೆಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದೆ.
ಸಫಾ ಗಿಫ್ಟ್ ಆಂಡ್ ಟಾಯ್ಸ್ ಸೆಂಟರ್‌ನ ಇನ್ನೊಂದು ಬದಿಗೆ ತಾಗಿಕೊಂಡಿರುವ ಅಯ್ಯಂಗಾರ್ ಬೇಕರಿ, ಶೂ ಬಜಾರ್, ಬ್ರಿಡಲ್ ಗಿಫ್ಟ್ ಆಂಡ್ ಫ್ಯಾನ್ಸಿಗೂ ಬೆಂಕಿಯಿಂದಾಗಿ ಹಾನಿಯಾಗಿದ್ದು, ಇವರ ಬೋರ್ಡ್, ಹೊರ ಆವರಣದ ಸೀಲಿಂಗ್ ಸುಟ್ಟು ಹೋಗಿವೆ. ಐಯ್ಯಂಗಾರ್ ಬೇಕರಿಯೊಳಗೆ ಹೊಗೆ ಆವರಿಸಿಕೊಂಡು ಅದರೊಳಗೆ ಇದ್ದ ಬೇಕರಿ ತಿನಿಸುಗಳು ಹಾನಿಯಾಗಿದ್ದು, ಇದರ ಮಾಲಕ ರವಿ ನೀಡಿರುವ ದೂರಿನಲ್ಲಿ 10 ಲಕ್ಷ ನಷ್ಟವಾಗಿರುವುದಾಗಿ, ಹಾಗೂ ಸಿಟಿ ಫ್ಯಾನ್ಸಿ ಅಂಗಡಿಯ ಒಳಗೂ ಹೊಗೆ ಆವರಿಸಿಕೊಂಡಿದ್ದು, ಇಲ್ಲಿಯೂ ವಸ್ತುಗಳು ಹಾನಿ ಉಂಟಾಗಿದ್ದು, ಸುಮಾರು 5 ಲಕ್ಷ ನಷ್ಟ ಉಂಟಾಗಿರುವುದಾಗಿ ಇದರ ಮಾಲಕ ಇಬ್ರಾಹಿಂರವರು ಗ್ರಾಮಕರಣಿಕರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ರಾಶಿ ರಾಶಿಯಾಗಿ ಬಿದ್ದಿರುವ ಸುಟ್ಟು ಕರಕಲಾದ ವಸ್ತುಗಳು, ಹಾನಿಗೀಡಾದ ಅಂಗಡಿಯ ಶಟರ್‌ಗಳು, ಸಂಪೂರ್ಣ ಕಪ್ಪಾಗಿ ಹೋಗಿರುವ ಅಂಗಡಿಗಳ ಗೋಡೆಗಳು, ಬೋರ್ಡ್‌ಗಳು, ಸೀಲಿಂಗ್‌ಗಳು ಬೆಂಕಿಯ ಕರಾಳತೆಗೆ ಇಂದು ಸಾಕ್ಷಿಯೊದಗಿಸುತ್ತಿತ್ತಲ್ಲದೆ, ಇಲ್ಲಿನ ದೃಶ್ಯ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು.
ಯುವಕರ ಅವಿರತ ಶ್ರಮ:
ಶುಕ್ರವಾರ ರಾತ್ರಿ ಸುಮಾರು 9.30ರ ಹೊತ್ತಿಗೆ ಬಂದ್ ಆಗಿದ್ದ ಅಂಗಡಿಯೊಳಗಿನಿಂದ ಹೊಗೆ ಬರುವುದನ್ನು ಗಮನಿಸಿದ ಸ್ಥಳೀಯರು ಅಂಗಡಿ ಮುಂಭಾಗಕ್ಕೆ ಹೋಗಿ ನಿಂತು ನೋಡಿದಾಗ ಒಳಗಡೆ ಬೆಂಕಿ ಉರಿಯುವುದನ್ನು ಗಮನಿಸಿದ್ದು, ತಕ್ಷಣವೇ ಜಾತಿ- ಧರ್ಮದ ಬೇಧವಿಲ್ಲದೆ ಯುವಕರು ಜಮಾಯಿಸಿ ನೀರು ಹಾಕತೊಡಗಿದರು. ಸ್ಥಳೀಯ ಪಂಚಾಯತ್ ಸದಸ್ಯ ತೌಷೀಫ್ ಯು .ಟಿ., ಸನ್ಮಾನ್ ಅಮ್ಮಿ, ಫಾರೂಕ್ ಕೆಂಪಿ, ಸಚಿನ್ ಎ. ಎಸ್, ಫಯಾಜ್ ಯು ಟಿ., ನಾಗೇಶ್ ಪ್ರಭು, ಅಸ್ವಫ್ ಕೆಂಪಿ, ಶೇಖರ್ ನೆಕ್ಕಿಲಾಡಿ, ಹಸೈನಾರ್, ಪೂವಪ್ಪಗೌಡ, ಸಾದಿಕ್ , ಇಸ್ಮಾಯಿಲ್ ತಂಙಳ್, ಅಚಲ್ ಉಬರಡ್ಕ, ಮೊಯಿನ್ ನಟ್ಟಿಬೈಲ್, ಹರೀಶ್ ಭಂಡಾರಿ, ಇಬ್ರಾಹಿಂ ಆಚಿ, ರವಿ ಅಯ್ಯಂಗಾರ್ , ಶಬೀರ್ ಕೆಂಪಿ ನೇತೃತ್ವದ ಉಬಾರ್ ಡೋನರ್ಸ್ ತಂಡದ ಯುವಕರು ಬೆಂಕಿಯ ಕೆನ್ನಾಲೆಯ ನಡುವೆ ಅಗ್ನಿ ಶಮನಕ್ಕೆ ಶ್ರಮಿಸಿದರಲ್ಲದೆ, ಅಗ್ನಿ ಶಾಮಕ ದಳ ಆಗಮಿಸುವ ವರೆಗೆ ಬೆಂಕಿ ಹೆಚ್ಚಿನ ಅಂಗಡಿಗಳಿಗೆ ವ್ಯಾಪಿಸದಂತೆ ಪ್ರಯತ್ನಿಸಿ ಶ್ಲಾಘನೆಗೆ ಒಳಗಾದರು. ಅಲ್ಲದೇ, ಗ್ರಾ.ಪಂ.ನಿಂದ ಫೈಯರ್ ಗ್ಯಾಸ್‌ಗಳನ್ನು ತಂದು ಸಿಡಿಸಿದರು. ಇಷ್ಟೆಲ್ಲಾ ಆಗುವಾಗ ಹೊರಗಡೆ ಜೋರು ಮಳೆಯಾಗುತ್ತಿದ್ದರೂ, ಬೆಂಕಿಯ ಕೆನ್ನಾಲಿಗೆ ಹೆಚ್ಚಾಗುತ್ತಿತ್ತೇ ವಿನಹ ಕಡಿಮೆಯಾಗುತ್ತಿರಲಿಲ್ಲ. ಅಂಗಡಿಯೊಳಗಿದ್ದ ಸೆಂಟ್ ಸೇರಿದಂತೆ ಫರ್ಫ್ಯೂಮ್ ಬಾಟಲ್‌ಗಳು ಸಿಡಿದು ಇನ್ನಷ್ಟು ಬೆಂಕಿಯ ಜ್ವಾಲೆ ವ್ಯಾಪಿಸಲು ಕಾರಣವಾಯಿತು. ಬಳಿಕ ಪುತ್ತೂರಿನ ಅಗ್ನಿಶಾಮಕ ದಳದವರು ಆಗಮಿಸಿ ಕಾರ್ಯಾಚರಣೆ ನಡೆಸಿದರೂ, ಬೆಂಕಿ ಸಂಪೂರ್ಣ ಹತೋಟಿಗೆ ಬಂದಿರಲಿಲ್ಲ. ಮತ್ತೆ ಬಳಿಕ ಬೆಳ್ತಂಗಡಿಯಿಂದ ಅಗ್ನಿಶಾಮಕ ದಳದವರು ಆಗಮಿಸಿದ್ದು, ಎಲ್ಲರ ಜಂಟಿ ಕಾರ್ಯಾಚರಣೆಯ ಬಳಿಕ ರಾತ್ರಿ ಸುಮಾರು 11 ಗಂಟೆಯಷ್ಟು ಹೊತ್ತಾಗುವಾಗ ಬೆಂಕಿಯನ್ನು ಸಂಪೂರ್ಣ ಹತೋಟಿಗೆ ತರಲಾಯಿತು.
ಅಗ್ನಿಶಾಮಕ ಠಾಣೆ ಕೊಡಿ
ವಾಣಿಜ್ಯ ನಗರಿಯಾಗಿ ಬೆಳೆಯುತ್ತಿರುವ ಉಪ್ಪಿನಂಗಡಿಗೆ ಅಗ್ನಿ ಶಾಮಕ ಠಾಣೆಯೊಂದನ್ನು ನೀಡಬೇಕೆನ್ನುವುದು ಈ ಭಾಗದವರ ಬೇಡಿಕೆ ಹಲವು ವರ್ಷಗಳದ್ದು. ಈ ಭಾಗದಲ್ಲಿ ಬೆಂಕಿ ಅನಾಹುತ ಸಂಭವಿಸಿದರೆ ಪುತ್ತೂರಿನಿಂದ ಇಲ್ಲಿಗೆ ಅಗ್ನಿಶಾಮಕ ದಳದ ವಾಹನ ಆಗಮಿಸಬೇಕು. ಅದು ಆಗಮಿಸುವಷ್ಟು ಹೊತ್ತಿಗೆ ಭಾಗಶಃ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾಗುತ್ತದೆ. ವರ್ಷದ ಹಿಂದೆ ಉಪ್ಪಿನಂಗಡಿಯಲ್ಲಿರುವ ‘ವಿವಾ’ ಬಟ್ಟೆ ಮಳಿಗೆಗೆ ಬೆಂಕಿ ಬಿದ್ದು, ಸಂಪೂರ್ಣ ಮಳಿಗೆಯೇ ಬೆಂಕಿಗೆ ಆಹುತಿಯಾಗಿತ್ತು. ಈ ಪೃಥ್ವಿ ಕಾಂಪ್ಲೆಕ್ಸ್‌ನಲ್ಲಿಯೂ ಈ ಹಿಂದೆ ಎರಡು ಬಾರಿ ಬೆಂಕಿ ಅನಾಹುತವುಂಟಾಗಿತ್ತು. ಆದರೆ ಅದೃಷ್ಟವಶಾತ್ ಹೆಚ್ಚಿನ ಹಾನಿ ಸಂಭವಿಸರಿರಲಿಲ್ಲ. ಆದ್ದರಿಂದ ಈ ಭಾಗದಲ್ಲಿ ಬೆಂಕಿ ಅನಾಹುತಗಳು ನಡೆದಾಗ ತಕ್ಷಣದ ಕಾರ್ಯಾಚರಣೆಗೆ ಅನುಕೂಲವಾಗಲು ಉಪ್ಪಿನಂಗಡಿಗೆ ಪ್ರತ್ಯೇಕ ಅಗ್ನಿಶಾಮಕ ಠಾಣೆಯನ್ನು ನೀಡಬೇಕೆನ್ನುವ ಆಗ್ರಹ ಸಾರ್ವಜನಿಕರ ವಲಯದಿಂದ ವ್ಯಕ್ತವಾಗುತ್ತಿದೆ.