ಮಂಗಳೂರು/ಮುಂಬೈ: ಏಷ್ಯಾದ ಷೇರುಪೇಟೆಯಲ್ಲಿನ ಸಕಾರಾತ್ಮಕ ವಹಿವಾಟಿನಿಂದಾಗಿ ದೇಶದ ಷೇರುಪೇಟೆಗಳಲ್ಲಿ ನಾಲ್ಕನೇ ದಿನವಾದ ಗುರುವಾರವೂ ಗೂಳಿ ಓಟ ಮುಂದುವರಿದಿದೆ.
ಬೆಳಗಿನ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 339 ಅಂಶ ಏರಿಕೆ ಕಂಡು 79,013 ಅಂಶಗಳಲ್ಲಿ ವಹಿವಾಟು ನಡೆಸುತ್ತಿದ್ದು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 97.6 ಅಂಶ ಏರಿಕೆ ಕಂಡು 23,966 ಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ. ಸಂಜೆಯ ವೇಳೆಗೆ 80 ಸಾವಿರ ದಾಟುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಸೆನ್ಸೆಕ್ಸ್ ಗುಚ್ಛದಲ್ಲಿನ ಭಾರ್ತಿ ಏರ್ಟೆಲ್, ಅಲ್ಟ್ರಾಟೆಕ್ ಸಿಮೆಂಟ್, ಸನ್ ಫಾರ್ಮಾ, ಅದಾನಿ ಪೋರ್ಟ್ಸ್, ಎಕ್ಸಿಸ್ ಬ್ಯಾಂಕ್, ಎನ್ಟಿಪಿಸಿ ಹಾಗೂ ಬಜಾಜ್ ಫೈನಾನ್ಸ್ ಷೇರುಗಳ ಮೌಲ್ಯದಲ್ಲಿ ಏರಿಕೆಯಾಗಿದೆ. ಮಹೀಂದ್ರ ಆ್ಯಂಡ್ ಮಹೀಂದ್ರ, ಟಾಟಾ ಸ್ಟೀಲ್, ಟೆಕ್ ಮಹೀಂದ್ರ ಹಾಗೂ ಜೆಎಸ್ಡಬ್ಲ್ಯು ಸ್ಟೀಲ್ ಷೇರಿನ ಮೌಲ್ಯ ಕುಸಿದಿದೆ. ಭಾರತದ ಜಿಡಿಪಿ ಬೆಳವಣಿಗೆ ಕುರಿತ ಧನಾತ್ಮಕ ವರದಿಗಳು ಮತ್ತು ಚಿಲ್ಲರೆ ಹಣದುಬ್ಬರವು ಇಳಿಕೆಯ ಹಾದಿಗೆ ಮರಳುತ್ತಿರುವುದು ದೇಶೀಯ ಸೂಚ್ಯಂಕಗಳ ಏರಿಕೆಗೆ ನೆರವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.