ಸಾರ್ವಜನಿಕ ಅರ್ಜಿಗಳ ವಿಲೇವಾರಿಗೆ ಮೊದಲ ಆದ್ಯತೆ: ನಿರ್ಣಯ
ಅಪಾಯಕಾರಿ ಮರ ತೆರವುಗೊಳಿಸಲು ಅರಣ್ಯ ಇಲಾಖೆಗೆ ಮನವಿ
ಪುತ್ತೂರು: ಚುನಾವಣೆ ನೀತಿ ಸಂಹಿತೆ ಸೇರಿದಂತೆ ಕಳೆದ 5 ತಿಂಗಳಿಂದ ವಿಲೇವಾರಿ ಮಾಡದೆ ಇದ್ದ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಅಭಿವೃದ್ಧಿ ಅಧಿಕಾರಿಯವರಿಗೆ ಸೂಚನೆ ನೀಡಿದ್ದು ಅಲ್ಲದೆ 10 ದಿವಸದೊಳಗೆ ಎಲ್ಲಾ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಗಡು ನೀಡಿದ ಘಟನೆ ಒಳಮೂಗ್ರು ಗ್ರಾ.ಪಂ ಸಾಮಾನ್ಯ ಸಭೆಯಲ್ಲಿ ನಡೆಯಿತು.
ಸಭೆಯು ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರ ಅಧ್ಯಕ್ಷತೆಯಲ್ಲಿ ಜೂ.18 ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ವಸತಿ ಯೋಜನೆಯಡಿ ಮನೆ ನಿರ್ಮಾಣ ಮಾಡಿ ಮನೆಗೆ ನಂಬರ್ ನೀಡುವ ಬಗ್ಗೆ ಕಳೆದ 5 ತಿಂಗಳ ಹಿಂದೆ ನೀಡಿದ ಅರ್ಜಿಗಳ ವಿಲೇವಾರಿ ಮಾಡದ ಬಗ್ಗೆ ಸದಸ್ಯ ಮಹೇಶ ರೈ ಕೇರಿ ವಿಷಯ ಪ್ರಸ್ತಾಪಿಸಿ, ಚುನಾವಣಾ ನೀತಿ ಸಂಹಿತೆ ಒಂದು ಕಡೆಯಾದರೆ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳ ನಡುವೆ ಕೆಲಸದಲ್ಲಿ ಹೊಂದಾಣಿಕೆಯ ಕೊರತೆ ಇದೆ. ಇದರಿಂದಾಗಿ ಕಳೆದ 5 ತಿಂಗಳುಗಳಿಂದ ಯಾವುದೇ ಅರ್ಜಿಗಳು ವಿಲೇವಾರಿಯಾಗಿಲ್ಲ, ಪಂಚಾಯತ್ ಬಗ್ಗೆ ಸಾರ್ವಜನಿಕರು ದೂರುವುದನ್ನು ಕೇಳುವ ಪರಿಸ್ಥಿತಿ ಬಂದಿದೆ. ಸದ್ಯಕ್ಕೆ ಗ್ರಾಮ ಸಭೆ ನಡೆಯದಿರುವುದು ನಮ್ಮ ಪುಣ್ಯ ಎಂದು ಹೇಳಿದರು.
ಈ ಬಗ್ಗೆ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಧ್ವನಿ ಗೂಡಿಸಿ, ಅರ್ಜಿಗಳ ವಿಲೇವಾರಿ ಕೂಡಲೇ ಆಗಬೇಕು ಎಷ್ಟು ದಿವಸಗಳಲ್ಲಿ ಅರ್ಜಿ ವಿಲೇವಾರಿ ಮಾಡುತ್ತಿರಿ ಎಂದು ಪಿಡಿಒ ರವರನ್ನು ಪ್ರಶ್ನಿಸಿದರು. ಕಾರ್ಯದರ್ಶಿಯವರು ಕೂಡ ತಮ್ಮ ಕೆಲಸಗಳನ್ನು ಹಂಚಿಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದರು. ಈ ಬಗ್ಗೆ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಧ್ವನಿ ಗೂಡಿಸಿ ಈ ಕೆಲಸವನ್ನು ಸಿಬ್ಬಂದಿಗಳಿಗೆ ವಹಿಸಿಕೊಟ್ಡರು ಆಗಬಹುದು ಸ್ವತಃ ಕಾರ್ಯದರ್ಶಿರವರೇ ಮಾಡುವುದಾದರೂ ಸರಿ 10 ದಿವಸ ಕಾಲಾವಕಾಶದಲ್ಲಿ ಮಾಡಬೇಕು. ಇಲ್ಲವಾದರೆ ಏನು ಕ್ರಮ ಕೈಗೊಳ್ಳಬೇಕೆಂದು ನಮಗೆ ಗೊತ್ತಿದೆ ಎಂದರು. ಪಂಚಾಯತ್ ವ್ಯವಸ್ಥೆಯಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಹೊಂದಾಣಿಕೆಯಿಂದ ಅಭಿವೃದ್ಧಿ ಕುಂಠಿತವಾಗಿದೆ. ತಕ್ಷಣ ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವಂತೆ ಸದಸ್ಯರುಗಳು ಒತ್ತಾಯಿಸಿದರು.
ಜಲಜೀವನ್ ಯೋಜನೆಯಲ್ಲಿ ಪ್ರತಿ ಮನೆಗೂ ಪೈಪು ಲೈನ್, ಮೀಟರ್ ಹಾಗೂ ನಳ್ಳಿ ಅಳವಡಿಸುವ ಕೆಲಸವನ್ನು ಸರಕಾರ ಉಚಿತವಾಗಿ ಮಾಡಿದ್ದು ಇದು ಸರಕಾರದ ಅಸ್ತಿ, ಅದರಿಂದ ಅವುಗಳನ್ನು ಹೊಡೆದು ಹಾಕಿದವರ ಮೇಲೆ ಮೊಕದಮೆ ಹೂಡಬೇಕು ಎಂದು ಸದಸ್ಯ ಮಹೇಶ್ ರೈ ಒತ್ತಾಯಿಸಿದರು ಈ ಬಗ್ಗೆ ನಿರ್ಣಯಕ್ಕೆ ಆಗ್ರಹಿಸಿದರು. ಕೊಲತ್ತಡ್ಕ ಭಾಗದಲ್ಲಿ ಮೀಟರ್ ಅಳವಡಿಸದೆ ಕೆಲವು ಮಂದಿ ನೀರು ತೆಗೆದಿರುವ ಬಗ್ಗೆ ಮಾಹಿತಿ ಬಂದಿದ್ದು ಅವರಿಗೆ ದಂಡ ವಿಧಿಸಲು ನಿರ್ಣಯ ತೆಗೆದುಕೊಳ್ಳಲಾಯಿತು.
ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರ ತೆರವು ಗೊಳಿಸುವ ಬಗ್ಗೆ ಅರಣ್ಯ ಇಲಾಖೆ ಬರೆಯಲು ನಿರ್ಣಯಿಸಲಾಯಿತು. ಅಯಾ ವಾರ್ಡ್‌ನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವ ಗ್ರಾ.ಪಂ ರಸ್ತೆ ದುರಸ್ತಿ, ಚರಂಡಿ ದುರಸ್ತಿ ಮಾಡುವ ಜವಾಬ್ದಾರಿ ಅಯಾ ವಾರ್ಡ್ ಸದಸ್ಯರಿಗೆ ವಹಿಸಲಾಯಿತು. ದಾರಿದೀಪ ದುರಸ್ತಿ ಬಗ್ಗೆ ದರಪಟ್ಟಿ ಅಹ್ವಾನ ಅರ್ಜಿ ಕರೆಯಲು ನಿರ್ಣಯಿಸಲಾಯಿತು. ಅಂಗಡಿ ಕೋಣೆ ಏಲಂ ಅನ್ನು ಕೂಡಲೇ ಮಾಡುವಂತೆ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ ಆಗ್ರಹಿಸಿದರು. ತೆರಿಗೆ ವಸೂಲಾತಿ ಬಳಿಕ ಏಲಂ ಮಾಡುವುದು ಎಂದು ತಿಳಿಸಲಾಗಿದೆ. ಎಲ್ಲಾ ಅಂಗಡಿ ತೆರಿಗೆ ಸಂಗ್ರಹವಾಗಿದೆಯಾ? ಎಂದು ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಪಿಡಿಒರವರನ್ನು ಪ್ರಶ್ನಿಸಿದರು. ಈ ಬಗ್ಗೆ ಪಿಡಿಒ ನಮಿತಾರವರು ತೆರಿಗೆ ವಸೂಲಾತಿಯಾದ ಬಗ್ಗೆ ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಸದಸ್ಯರುಗಳಾದ ಮಹೇಶ್ ರೈ ಕೇರಿ, ವಿನೋದ್ ಶೆಟ್ಟಿ ಮುಡಾಲ, ಶೀನಪ್ಪ ನಾಯ್ಕ ಬೊಳ್ಳಾಡಿ, ಸಿರಾಜುದ್ದೀನ್, ಚಿತ್ರಾ ಬಿ.ಸಿ, ಸುಂದರಿ, ಶಾರದಾ, ಲತೀಫ್ ಟೈಲರ್, ನಳಿನಾಕ್ಷಿ, ಪ್ರದೀಪ್, ನಿಮಿತ ರೈ, ವನಿತಾ, ರೇಖಾ ಉಪಸ್ಥಿತರಿದ್ದರು. ಪಿಡಿಒ ನಮಿತಾ ಎ.ಕೆ ಸ್ವಾಗತಿಸಿ, ಸಾರ್ವಜನಿಕ ಮತ್ತು ಸರ್ಕಾರಿ ಸುತ್ತೋಲೆಗಳನ್ನು ಓದಿದರು. ಸಿಬ್ಬಂದಿಗಳಾದ ಗುಲಾಬಿ, ಜಾನಕಿ, ಕೇಶವ, ಮೋಹನ್ ಸಹಕರಿಸಿದರು.