ಕಡಬ: ಸೈಂಟ್ ಜೋಕಿಮ್ಸ್ ಪದವಿ ಪೂರ್ವ ಕಾಲೇಜಿನ ರಕ್ಷಕ -ಶಿಕ್ಷಕ ಸಮಿತಿಯ ಮೊದಲ ಸಭೆಯು ಸಂಸ್ಥೆಯ ಸಭಾಂಗಣದಲ್ಲಿ ನೆರವೇರಿತು.ಅತಿಥಿ ನಿವೃತ್ತ ಪ್ರಾಂಶುಪಾಲ, ಭಾರತೀಯ ಸೇನೆ ಯ ಮಾಜಿ ಯೋಧ ಮ್ಯಾಥ್ಯೂ ಟಿ.ಜಿ. ಅವರು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಬೆಳೆಸಲು ಪೋಷಕರು ವಹಿಸಬೇಕಾದ ಕ್ರಮಗಳು ಹಾಗೂ ನಂಬಿಕೆ, ಆತ್ಮವಿಶ್ವಾಸಗಳು ವಿದ್ಯಾರ್ಥಿಗಳ ಪ್ರಗತಿಗೆ ಹೇಗೆ ಪೂರಕ ಎಂಬ ಕುರಿತು ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸಹ ಸಂಸ್ಥೆ ಸೈಂಟ್ ಆನ್ಸ್ ಶಾಲಾ ಪ್ರಾಂಶುಪಾಲ ವಂ. ಅಮಿತ್ ಪ್ರಕಾಶ್ ರೋಡ್ರಿಗಸ್ ಅವರು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆಯನ್ನು ನೀಡಿ ಅಭಿನಂದಿಸಿದರು.
ರಕ್ಷಕ- ಶಿಕ್ಷಕ ಸಮಿತಿಯ ನಿಕಟಪೂರ್ವ ಉಪಾಧ್ಯಕ್ಷ ಸತೀಶ್ ನಾಯಕ್ ಹಾಗೂ ಪ್ರಸ್ತುತ ವರ್ಷದ ಉಪಾಧ್ಯಕ್ಷ ಆಯ್ಕೆಗೊಂಡ ಬಾಲಕೃಷ್ಣ ಗೌಡ ಮತ್ತು ಉಪನ್ಯಾಸಕ ವೃಂದದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರಕ್ಷಕ- ಶಿಕ್ಷಕ ಸಮಿತಿಯ ಸಂಯೋಜಕಿ ಸುಜಾ ವಿ.ಜೆ ಕಳೆದ ಸಭೆಯ ವರದಿಯೊಂದಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪ್ರಾಂಶುಪಾಲ ಕಿರಣ್ ಕುಮಾರ್ ವಿ ಸ್ವಾಗತಿಸಿ, ಉಪನ್ಯಾಸಕಿ ಮಮತಾ ಎಂ ವಂದಿಸಿದರು. ಉಪನ್ಯಾಸಕಿ ಹರ್ಷಿತಾ ಎಂ ಕಾರ್ಯಕ್ರಮ ನಿರೂಪಿಸಿದರು.