ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ರಕ್ಷಕ – ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆ

0

ಪುತ್ತೂರು: ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 2024-25ನೇ ಸಾಲಿನ ರಕ್ಷಕ – ಶಿಕ್ಷಕ ಸಂಘದ ವಾರ್ಷಿಕ ಮಹಾಸಭೆಯು ಜೂ.22ರಂದು ಪೂರ್ವಾಹ್ನ10.00 ಗಂಟೆಗೆ ಶಾಲಾ ಸಭಾಂಗಣದಲ್ಲಿ ನಡೆಯಿತು.


ಈ ಸಭೆಯಲ್ಲಿ ಮ್ಯಾದೆ ದೇವುಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತೀ ವಂದನೀಯ ಧರ್ಮ ಗುರುಗಳಾದ ಲಾರೆನ್ಸ್ ಮಸ್ಕರೇನಸ್ ರವರು, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿಕೋಸ್ತ ರವರು, ಮುಖ್ಯ ಅತಿಥಿಗಳಾಗಿ ಪ್ರದೀಪ ಬಾಕಿಲ, ಮುಖ್ಯೋಪಾಧ್ಯಾಯರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಶಾಂತಿನಗರ ಹಾಗೂ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿಯಾದ ಭಗಿನಿ ಲೋರಾ ಪಾಯಸ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಿಕ್ಷಕ ವೃಂದದ ಪ್ರಾರ್ಥನೆಯ ಮೂಲಕ ಸಭೆಗೆ ಚಾಲನೆ ನೀಡಲಾಯಿತು. ಸಹ ಶಿಕ್ಷಕಿ ಜಾಸ್ಮಿನ್ ಗೋವಿಯಸ್ ರವರು ಆಗಮಿಸಿದ ಸರ್ವರನ್ನು ಸ್ವಾಗತಿಸಿದರು. ಸಹ ಶಿಕ್ಷಕಿ ಸರಿತಾ ಗೊನ್ಸಾಲ್ವಿಸ್ ರವರು ವಾರ್ಷಿಕ ವರದಿಯನ್ನು ವಾಚಿಸಿ, ಸಹ ಶಿಕ್ಷಕಿ ಡಯಾನಾ ನೋರೋನ್ನಾ ರವರು ಲೆಕ್ಕಪತ್ರ ಮಂಡನೆ ಮಾಡಿದರು. ತದನಂತರ ಶಾಲಾ ಸಂಸತ್ತಿನ ಪ್ರಮಾಣವಚನವನ್ನು ಶಾಲಾ ಮುಖ್ಯೋಪಾಧ್ಯಾಯನಿರವರು ನಡೆಸಿಕೊಟ್ಟರು. ಮುಖ್ಯ ಅತಿಥಿಗಳ ಭಾಷಣದಲ್ಲಿ ಶ್ರೀಯುತ ಪ್ರದೀಪ ಬಾಕಿಲ ರವರು ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಹೆತ್ತವರ ಪಾತ್ರ, ಹೆತ್ತವರ ನಡವಳಿಕೆಗಳು ಮಗುವಿನ ಮೇಲೆ ಬೀರುವ ಪರಿಣಾಮವನ್ನು, ಎಳವೆಯಲ್ಲೇ ಉತ್ತಮ ವಿಚಾರಗಳನ್ನು ಮಗುವಿನ ಮನಸ್ಸಿನಲ್ಲಿ ಹೇಗೆ ಬೆಳೆಸಬಹುದು ಇತ್ಯಾದಿ ವಿಚಾರಗಳ ಬಗ್ಗೆ ನೈಜ ಉದಾಹರಣೆಯ ಸಹಿತ ಮನಮುಟ್ಟುವಂತೆ ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯನಿರವರು ಶಾಲಾ ನಿಯಮಗಳ ಕಿರುಪರಿಚಯವನ್ನು ಹೇಳಿದರು. ನಂತರ ರಕ್ಷಕ – ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ನೂತನ ಸದಸ್ಯರ ರಚನೆಯನ್ನು ಸಹ ಶಿಕ್ಷಕಿ ದೀಪ್ತಿಯವರು ನಡೆಸಿಕೊಟ್ಟರು. ರಕ್ಷಕ – ಶಿಕ್ಷಕ ಸಂಘದ ನೂತನ ಉಪಾಧ್ಯಕ್ಷರಾಗಿ ವಿವೇಕ್ ಆಳ್ವರವರು ಹಾಗೂ ಜೊತೆ ಕಾರ್ಯದರ್ಶಿಯಾಗಿ ಸರಿತಾ ಪ್ರಮೋದ್ ರವರು ಆಯ್ಕೆಯಾದರು.


ಅಧ್ಯಕ್ಷೀಯ ಭಾಷಣದಲ್ಲಿ ಶಾಲಾ ಸಂಚಾರಕರಾದ ಅತೀ ವಂದನೀಯ ಧರ್ಮ ಗುರುಗಳಾದ ಲಾರೆನ್ಸ್ ಮಸ್ಕರೇನಸ್ ರವರು ಮಕ್ಕಳ ಜೀವನದಲ್ಲಿ ಹೆತ್ತವರ ಪಾತ್ರ ಅಪಾರವಾದದ್ದು, ಸಮಾಜದಲ್ಲಿ ಉಪಯುಕ್ತಕರವಾಗುವ ರೀತಿಯಲ್ಲಿ ಮಕ್ಕಳನ್ನು ಬೆಳೆಸಬೇಕು ಎಂದು ತಿಳಿಸುವುದರ ಜೊತೆಗೆ ರಕ್ಷಕ – ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ನೂತನ ಸದಸ್ಯರಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಕೊನೆಯ ಅಂಗವಾಗಿ ಶಾಲಾ ಶಿಕ್ಷಕ ಸದಾಶಿವ ನಾಯ್ಕ ಅವರು ಸರ್ವರನ್ನು ವಂದಿಸಿ, ರಾಷ್ಟ್ರ ಗೀತೆಯನ್ನು ಹಾಡುವುದರ ಮೂಲಕ ಸಭೆಯನ್ನು ಮುಕ್ತಾಯಗೊಳಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಸಹ ಶಿಕ್ಷಕಿ ಪ್ರಿಯಾ ಡಿಸೋಜರವರು ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here