ವಿದ್ಯಾರ್ಥಿಗಳು ಸಾಹಿತ್ಯಾಸಕ್ತಿ ಬೆಳೆಸಿಕೊಂಡ ಸಂಸ್ಕೃತಿ,ಪರಂಪರೆ ತಿಳಿಯಲು ಸಾಧ್ಯ: ಕೆ.ಸೇಸಪ್ಪ ರೈ
ರಾಮಕುಂಜ: 2023-24ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಭಾಷಾ ವಿಷಯಗಳಲ್ಲಿ ಶೇ.100 ಅಂಕ ಗಳಿಸಿದ ಕಡಬ ತಾಲೂಕಿನ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ದ.ಕ.ಜಿಲ್ಲಾ ಮತ್ತು ಕಡಬ ತಾಲೂಕು ಘಟಕದ ವತಿಯಿಂದ ಅಭಿನಂದನಾ ಕಾರ್ಯಕ್ರಮ ಜೂ.29ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕಡಬ ತಾಲೂಕ ಘಟಕದ ಅಧ್ಯಕ್ಷರಾದ ಕೆ.ಸೇಸಪ್ಪ ರೈಯವರು ಮಾತನಾಡಿ, ವಿದ್ಯಾರ್ಥಿಗಳೆಲ್ಲರು ಸಾಹಿತ್ಯಾಸಕ್ತಿ ಬೆಳೆಸಿಕೊಂಡಾಗ ನಮ್ಮ ಸಂಸ್ಕೃತಿ, ಪರಂಪರೆ ತಿಳಿದುಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಸಾಹಿತ್ಯ ಜಾಗೃತಿಯನ್ನು ಮೂಡಿಸುತ್ತಿದೆ ಎಂದರು. ಶಾಂತಿನಗರ ಸರಕಾರಿ ಹಿ.ಪ್ರಾ.ಶಾಲೆಯ ಮುಖ್ಯಗುರು ಪ್ರದೀಪ್ ಬಾಕಿಲ ಅವರು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿ, ಸಂಸ್ಕಾರಯುತ ಜೀವನ ನಡೆಸಿದಾಗ ಯಶಸ್ಸನ್ನು ಪಡೆಯಲು ಸಾಧ್ಯ. ಮಹಾನ್ ಕವಿಗಳ ಸಾಹಿತ್ಯ ಕೃತಿಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಾಗ ಇನ್ನಷ್ಟು ಸಾಧನೆ ಮಾಡಲು ಸಾಧ್ಯ ಎಂದರು. ವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕಡಬ ಹೋಬಳಿ ಘಟಕದ ಅಧ್ಯಕ್ಷ ಪದ್ಮಪ್ಪ ಗೌಡ, ಪದಾಧಿಕಾರಿಗಳಾದ ಯಶವಂತ ರೈ, ಬಾಲಚಂದ್ರ ಮುಚ್ಚಿಂತಾಯ, ಎ.ಎನ್ ಕೊಳಂಬೆ, ಶ್ರೀ ರಾಮಕುಂಜೇಶ್ವರ ವಿದ್ಯಾ ವರ್ಧಕ ಸಭಾದ ಸದಸ್ಯ ಲಿಂಗಪ್ಪ ಗೌಡ ಉಪಸ್ಥಿತರಿದ್ದರು.
2023-24ನೇ ಶೈಕ್ಷಣಿಕ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಭಾಷೆ ಕನ್ನಡ ವಿಷಯದಲ್ಲಿ ಪೂರ್ಣಾಂಕ ಪಡೆದ ಕಡಬ ತಾಲೂಕಿನ ವಿದ್ಯಾರ್ಥಿಗಳನ್ನು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕ.ಸಾ.ಪ ಪದಾಧಿಕಾರಿ ಬಾಲಚಂದ್ರ ಮುಚ್ಚಿಂತಾಯ ಸ್ವಾಗತಿಸಿದರು. ಕ.ಸಾ.ಪ ಸಂಘಟನಾ ಕಾರ್ಯದರ್ಶಿ ಕಿಶೋರ್ ಕುಮಾರ್ ಬಿ ಕಾರ್ಯಕ್ರಮ ರೂಪಿಸಿದರು. ಕಸಾಪ ಸದಸ್ಯ ಹರೀಶ್ ಆಚಾರ್ಯ ಎಂ.ವಂದಿಸಿದರು.