ನೆಲ್ಯಾಡಿ: ನಾಲ್ಕು ದಿನದ ಹಿಂದೆ ಶಿಬಾಜೆ ಗ್ರಾಮದ ಬರ್ಗುಳದಲ್ಲಿ ವಿದ್ಯುತ್ ಕಂಬದ ಮೂಲಕ ನೆಲಕ್ಕೆ ವಿದ್ಯುತ್ ಪ್ರವಹಿಸಿ ಯುವತಿ ಪ್ರತೀಕ್ಷಾ ಶೆಟ್ಟಿ ಸಾವಿಗೆ ಕಾರಣವಾದ ವಿದ್ಯುತ್ ಕಂಬವನ್ನು ಮೆಸ್ಕಾಂ ಇಲಾಖೆ ಸ್ಥಳಾಂತರ ಮಾಡಿದೆ.
ವಿದ್ಯುತ್ ಕಂಬದ ಒಂದು ತಂತಿ ತುಂಡಾಗಿ ಕಂಬಕ್ಕೆ ವಿದ್ಯುತ್ ತಂತಿ ಸ್ಪರ್ಶಿಸಿ ಕಂಬದ ಮೂಲಕ ವಿದ್ಯುತ್ ನೆಲಕ್ಕೆ ಪ್ರವಹಿಸಿದ ಪರಿಣಾಮ ನಡೆದುಕೊಂಡು ಹೋಗುತ್ತಿದ್ದ ಪ್ರತೀಕ್ಷಾ ಶೆಟ್ಟಿಯವರು ವಿದ್ಯುತ್ ಶಾಕ್‌ಗೆ ಒಳಗಾಗಿ ಮೃತಪಟ್ಟಿದ್ದರು. ಈ ವೇಳೆ ಅವರ ತಂದೆ ಗಣೇಶ್ ಶೆಟ್ಟಿಯವರೂ ವಿದ್ಯುತ್ ಶಾಕ್‌ಗೆ ಒಳಗಾಗಿ ಅಪಾಯದಿಂದ ಪಾರಾಗಿದ್ದರು. ಇದೀಗ ಈ ಘಟನೆಗೆ ಕಾರಣವಾದ ವಿದ್ಯುತ್ ಕಂಬವನ್ನು ಮೆಸ್ಕಾಂ ತೆರವುಗೊಳಿಸಿದೆ. ಧರ್ಮಸ್ಥಳ ಸಬ್ ಸ್ಟೇಷನ್‌ನಿಂದ ಶಿಶಿಲ ವಿದ್ಯುತ್ ಪರಿವರ್ತಕಗಳಿಗೆ ಸಾಗುವ ಎಚ್.ಟಿ. ಮತ್ತು ಎಲ್.ಟಿ. ಲೈನ್‌ಗಳು ಅಪಾಯಕಾರಿಯಾಗಿವೆ. ಇಲ್ಲಿ ಅಪಾಯಕಾರಿಯಾಗಿರುವ ವಿದ್ಯುತ್ ಕಂಬ, ತಂತಿಗಳಿದ್ದು ಅವುಗಳನ್ನೂ ಆದಷ್ಟು ಬೇಗ ಸ್ಥಳಾಂತರಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.