ಕಡಬ: ಕೊನೆಗೂ ಕಡಬ ಪಟ್ಟಣ ಪಂಚಾಯತ್ ದಿಟ್ಟ ಕ್ರಮ ಕೈಗೊಂಡಿದೆ. ಪೇಟೆಯಲ್ಲಿ ಅಲೆದಾಡುತ್ತಿರುವ 11 ಆಡುಗಳನ್ನು ವಶಕ್ಕೆ ಪಡೆದು ಅದರ ವಾರಸುದಾರರು ದಂಡ ಪಾವತಿಸಿ ಕೊಂಡು ಹೋಗುವವರೆಗೆ ಅದಕ್ಕೆ ಪಂಚಾಯತ್ ವತಿಯಿಂದಲೇ ಆಹಾರ, ನೀರು ಕೊಡಲಾಗುತ್ತಿದೆ. ವಶಕ್ಕೆ ಪಡೆದ ಆಡುಗಳು ಮೀನು ಮಾರುಕಟ್ಟೆ ಪ್ರಾಂಗಣದ ಕೊಠಡಿಯಲ್ಲಿ ಇದೆ.
ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಅಲೆಮಾರಿ ಆಡುಗಳು, ಜಾನುವಾರು ಅಲೆದಾಡುತ್ತಿದ್ದು ಈ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ಪಂಚಾಯತ್ ವತಿಯಿಂದ ಪತ್ರಿಕಾ ಪ್ರಕಟಣೆ, ಧ್ವನಿವರ್ಧಕದ ಮೂಲಕ ಸೂಚನೆ ನೀಡಲಾಗಿತ್ತು. ಆದರೂ ಕ್ಯಾರೆ ಎನ್ನದ ಕೆಲವರು ಆಡುಗಳನ್ನು ಹಿಂಡು ಹಿಂಡಾಗಿ ರಸ್ತೆಗೆ ಬಿಡುತ್ತಿದ್ದರು. ಇದು ಪಂಚಾಯತ್ ಗೆ ತಲೆನೋವಾಗಿ ಪರಿಣಮಿಸಿತ್ತು. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಪಂಚಾಯತ್ ನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗಿತ್ತು, ಇದೀಗ ಪಂಚಾಯತ್ ವತಿಯಿಂದ ಕೈಗೊಂಡ ದಿಟ್ಟ ಕ್ರಮ ವ್ಯಾಪಕ ಪ್ರಶಂಸೆಗೆ ಒಳಗಾಗಿದೆ. ಇದೀಗ ಆಡುಗಳನ್ನು ಬಿಟ್ಟು ಬಿಡುವಂತೆ ಆಡಿನ ಮಾಲಿಕರ ಪರವಾಗಿ ಕೆಲವರು ಒತ್ತಡ ಹೇರುತ್ತಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ.
ಸಿಬ್ಬಂದಿಗಳು ಮನೆಗೆ ಹೋಗಿ ಕೇಳಿಕೊಂಡರೂಕ್ಯಾರೆ ಅನ್ನದ ಆಡುಗಳ ಮಾಲಿಕರು!
ಕೆಲ ದಿನಗಳ ಹಿಂದೆ ಪಟ್ಟಣ ಪಂಚಾಯತ್ ಸಿಬ್ಬಂದಿಗಳು ಇದೇ 11 ಆಡುಗಳ ಮಾಲಿಕರ ಮನೆಗೆ ಹೋಗಿ ದಯವಿಟ್ಟು ರಸ್ತೆಗೆ, ಪೇಟೆಗೆ ಬಿಡಬೇಡಿ ನಮಗೆ ತೊಂದರೆ ಆಗುತ್ತಿದೆ ಎಂದು ವಿನಂತಿಸಿ ಬಂದಿದ್ದರು, ಆದರೆ ಇದನ್ನು ಕ್ಯಾರೆ ಮಾಡದ ಆಡಿನ ಮಾಲಿಕರು ಪುನಃ ಪೇಟೆಗೆ ಬಿಟ್ಟಿದ್ದಾರೆ. ಪೇಟೆಯಲ್ಲಿ ಅಲೆದಾಡುತ್ತಿದ್ದ ಆಡುಗಳನ್ನು ವಶಕ್ಕೆ ಪಡೆದ ಪಂಚಾಯತ್ ಅಧಿಕಾರಿಗಳು ದಂಡ ಪಾವತಿ ಮಾಡದೆ ಯಾವುದೇ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ ಎಂದು ಖಡಕ್ಕಾಗಿ ಹೇಳಿದ್ದು, ಇದೀಗ ಆಡಿನ ಮಾಲಿಕರು ಪಂಚಾಯತ್ ಗೆ ಅಲೆದಾಡುತ್ತಿದ್ದಾರೆ.
ದಂಡ ವಿಧಿಸುತ್ತೇವೆ-ಲೀಲಾವತಿ, ಮುಖ್ಯಾಧಿಕಾರಿ
ಈ ಬಗ್ಗೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ ಅವರು ಮಾತನಾಡಿ, ಸಾಕು ಪ್ರಾಣಿಗಳನ್ನು ಪೇಟೆಗೆ, ರಸ್ತೆಗಳಿಗೆ ಬಿಡಬೇಡಿ ಎಂದು ಈ ಮೊದಲೇ ಸಾಕಷ್ಟು ಮನವಿಗಳನ್ನು ಮಾಡಿದ್ದೇವೆ, ಆದರೂ ಕ್ಯಾರೆ ಮಾಡದೆ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಮಾಡುತ್ತಿರುವ 11 ಆಡುಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನೂ ದಂಡ ಪಾವತಿಸಿದರೆ ಮಾತ್ರ ಬಿಡುತ್ತೇವೆ, ಇಲ್ಲದಿದ್ದರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.