ಉಪ್ಪಿನಂಗಡಿ: ಇಲ್ಲಿನ ಸರಕಾರಿ ಶಾಲೆಯ ಮಧ್ಯಾಹ್ನದ ಅಕ್ಷರ ದಾಸೋಹದ ಬಿಸಿಯೂಟ ಚರಂಡಿ ಪಾಲಾಗುತ್ತಿರುವ ಬಗ್ಗೆ ಗಂಭೀರ ಆರೋಪ ವ್ಯಕ್ತವಾಗಿದ್ದು, ಚರಂಡಿಯ ತುಂಬಾ ಅನ್ನ ರಾಶಿ ಬಿದ್ದಿರುವುದು ಕಂಡು ಬಂದಿದೆ.
ಸರಕಾರಿ ಶಾಲೆಯಲ್ಲಿ ಮಕ್ಕಳ ಮಧ್ಯಾಹ್ನದ ಹಸಿವು ತಣಿಸಲು ಬಿಸಿಯೂಟ ಯೋಜನೆ ಜಾರಿಯಲ್ಲಿದ್ದು, ಕೆಲವೊಂದು ಶಾಲೆಯಲ್ಲಿ ಇದನ್ನು ಯಾವ ರೀತಿಯಲ್ಲಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ತಾಜಾ ಉದಾಹರಣೆ. ಮಕ್ಕಳು ತಿನ್ನುವ ಬಹಳಷ್ಟು ಅನ್ನ ಚರಂಡಿ ಪಾಲಾಗುತ್ತಿರುವುದು ಇಲ್ಲಿನ ನಿತ್ಯ ಕರ್ಮ ಎಂದು ವಿದ್ಯಾರ್ಥಿಗಳ ಪೋಷಕರು ದೂರಿಕೊಂಡಿದ್ದಾರೆ.
ಬೆಳಗ್ಗೆ ಶಾಲೆಯಲ್ಲಿ ಹಾಜರಿರುವ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅನ್ನ ಸಿದ್ಧ ಪಡಿಸುವುದು ಶಾಲಾ ನಿಯಮ. ಬಹುತೇಕ ಶಾಲೆಗಳಲ್ಲಿ ಅದು ಸಹಜವಾಗಿ ನಡೆಯುತ್ತಿರುತ್ತದೆ. ಆದರೆ ಇಲ್ಲಿ ಬೇಯಿಸಿದಅನ್ನವನ್ನು ಮಕ್ಕಳು ಸೇವಿಸುವುದಿಲ್ಲವೋ, ಲೆಕ್ಕಕ್ಕಿಂತ ಅಧಿಕ ಅಕ್ಕಿಯನ್ನು ಬೇಯಿಸುತ್ತಿದ್ದಾರೋ ಎನ್ನುವುದು ತಿಳಿಯದು. ಆದರೆ ಬಹುಪಾಲು ಅನ್ನ ಚರಂಡಿ ಸೇರುತ್ತದೆ ಎಂದು ಹೆಸರು ಹೇಳಲು ಇಚ್ಛಿಸದ ಪೋಷಕರೋರ್ವರು ದೂರಿಕೊಂಡಿದ್ದಾರೆ.
ಊಟ ಮಾಡಿದರೆ ಹೊಟ್ಟೆ ನೋವು:
ಚರಂಡಿಯಲ್ಲಿ ಇದ್ದ ಅನ್ನವನ್ನು ಚಿತ್ರೀಕರಿಸಿದ ಮಾಧ್ಯಮ ಪ್ರತಿನಿಧಿಗಳು ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದ ಮಕ್ಕಳಲ್ಲಿ ನೀವು ಊಟ ಮಾಡುತ್ತೀರಾ? ಹೇಗಿರುತ್ತದೆ ಅನ್ನ? ಎಂದು ವಿಚಾರಿಸಿದಾಗ ಕೆಲವೊಂದು ಮಕ್ಕಳು ನೀಡಿದ ಉತ್ತರ “ನಾನು ಊಟ ಮಾಡುವುದಿಲ್ಲ, ಊಟ ಮಾಡಿದ ಬಳಿಕ ಹೊಟ್ಟೆ ನೋವು ಆಗುತ್ತದೆ. ನಾನು ಮನೆಯಿಂದ ಬುತ್ತಿ ತರುತ್ತೇನೆ” ಎಂದು. ಹಾಗಾದರೆ ಇದೇ ಕಾರಣಕ್ಕಾಗಿ ಊಟ ಉಳಿಕೆಯಾಗಿ ಈ ರೀತಿಯಾಗಿ ಚರಂಡಿಗೆ ಎಸೆಯಲಾಗುತ್ತಿದೆಯೇ? ಎನ್ನುವುದು ಇಲ್ಲಿ ಕಾಡುವ ಯಕ್ಷ ಪ್ರಶ್ನೆಯಾಗಿದೆ.
ಶಾಲೆ ಎಂದರೆ ಸಂಸ್ಕಾರ ಕಲಿಸುವ ಕೇಂದ್ರ, ಇಲ್ಲಿಯೇ ಈ ರೀತಿಯಾಗಿ ಅನ್ನವನ್ನು ಎಸೆಯುತ್ತಿದ್ದಾರೆ ಎಂದರೆ ಇದು ವ್ಯವಸ್ಥೆಯ ದುರಂತ. ಯಾಕಾಗಿ ಈ ರೀತಿಯಾಗಿ ಅನ್ನವನ್ನು ಎಸೆಯಲಾಗುತ್ತಿದೆ ಎಂದು ಸಮಗ್ರ ತನಿಖೆ ಆಗಬೇಕು.
-ಧನಂಜಯ, ಸದಸ್ಯರು, ಉಪ್ಪಿನಂಗಡಿ ಗ್ರಾ.ಪಂ.
ಅನ್ನ ಚರಂಡಿಯಲ್ಲಿ ಎಸೆಯುತ್ತಿರುವ ಬಗ್ಗೆ ಶಾಲಾ ಮುಖ್ಯ ಶಿಕ್ಷಕ ಹನುಮಂತಯ್ಯ ಪ್ರತಿಕ್ರಿಯಿಸಿ “ಹಾಗೇನು ಅನ್ನವನ್ನು ಎಸೆಯುವುದಿಲ್ಲ, ಕೈ, ಬಟ್ಟಲು ತೊಳೆಯುವಾಗ ಅದರಲ್ಲಿದ್ದ ಅನ್ನ ನೀರಿನಲ್ಲಿ ಹೋಗಿ ಚರಂಡಿಯಲ್ಲಿ ನಿಲ್ಲುತ್ತದೆ, ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ” ತಿಳಿಸಿದ್ದಾರೆ.