ಕಲ್ಲಚಡವು-ನೆಲ್ಯಾಡಿ ಸಂಪರ್ಕ ರಸ್ತೆ ಮರು ಡಾಮರೀಕರಣ, ನೆಲ್ಯಾಡಿ ಬೈಲು ನೂತನ ಸೇತುವೆ ನಿರ್ಮಾಣಕ್ಕೆ ಶಾಸಕರಿಗೆ ಮನವಿ

0

ನೆಲ್ಯಾಡಿ: ನೆಲ್ಯಾಡಿ ಗ್ರಾಮದ ಕಲ್ಲಚಡವು-ನೆಲ್ಯಾಡಿ ಸಂಪರ್ಕ ರಸ್ತೆ ಮರು ಡಾಮರೀಕರಣ ಹಾಗೂ ಸದ್ರಿ ರಸ್ತೆಯ ನೆಲ್ಯಾಡಿ ಬೈಲು ಎಂಬಲ್ಲಿ ಹೊಸ ಸೇತುವೆಗೆ ಅನುದಾನ ಒದಗಿಸುವಂತೆ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಬಿಜೆಪಿ ಪಡುಬೆಟ್ಟು ಬೂತ್ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಗಿದೆ.


ಪಡುಬೆಟ್ಟು ಕಲ್ಲಚಡವುನಿಂದ ನೆಲ್ಯಾಡಿ ಪೇಟೆ ಸಂಪರ್ಕಿಸುವ ರಸ್ತೆಯಲ್ಲಿ ಡಾಮರು ಎದ್ದು ಹೊಂಡ ಗುಂಡಿ ನಿರ್ಮಾಣಗೊಂಡಿದೆ. ಸದ್ರಿ ರಸ್ತೆಯಲ್ಲಿ ಶಾಲಾ ಮಕ್ಕಳೂ ಸೇರಿದಂತೆ ದಿನಂಪ್ರತಿ ನೂರಾರು ಮಂದಿ ದ್ವಿಚಕ್ರ, ರಿಕ್ಷಾ,ಜೀಪುಗಳಲ್ಲಿ ಓಡಾಟ ನಡೆಸುತ್ತಾರೆ. ಆದರೆ ಸದ್ರಿ ರಸ್ತೆಯಲ್ಲಿ ಡಾಮರು ಎದ್ದು ಹೋಗಿರುವುದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಇದರಿಂದಾಗಿ ಜನ ಸುತ್ತು ಬಳಸಿ ನೆಲ್ಯಾಡಿ ಪೇಟೆಗೆ ಬರಬೇಕಾಗಿದೆ. ಈ ಹಿನ್ನೆಲೆಯಲ್ಲಿ ಕಲ್ಲಚಡವುನಿಂದ ನೆಲ್ಯಾಡಿ ಪೇಟೆ ತನಕ ಸದ್ರಿ ರಸ್ತೆ ಮರು ಡಾಮರೀಕರಣಕ್ಕೆ ಅನುದಾನ ಮಂಜೂರುಗೊಳಿಸುವಂತೆ ಶಾಸಕರಿಗೆ ಮನವಿ ಮಾಡಲಾಗಿದೆ.


ಹೊಸ ಸೇತುವೆಗೂ ಅನುದಾನ ಒದಗಿಸಿ:
ಪಡುಬೆಟ್ಟು ಕಲ್ಲಚಡವು ಮೂಲಕ ನೆಲ್ಯಾಡಿ ಪೇಟೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನೆಲ್ಯಾಡಿ ಬೈಲು ಎಂಬಲ್ಲಿರುವ ಸೇತುವೆ ಕಿರಿದಾಗಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಇಲ್ಲಿ ರಿಕ್ಷಾ, ಜೀಪು ಸಹಿತ ಲಘು ವಾಹನಗಳೂ ಮಾತ್ರ ಸಂಚರಿಸುತ್ತಿದ್ದೂ ಸದ್ರಿ ಸೇತುವೆಯೂ ಶಿಥಿಲವಾಗಿದೆ. ಸೇತುವೆಯ ಎರಡೂ ಕಡೆಯೂ ರಸ್ತೆ ಡಾಮರೀಕರಣ ಆಗಿಲ್ಲ. ಇಲ್ಲಿ ರಸ್ತೆ ಕೆಸರುಮಯಗೊಂಡಿದೆ. ಇಲ್ಲಿ ಸೇತುವೆ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಮನವಿ ಮಾಡುತ್ತಲೇ ಇದ್ದೇವೆ. ಆದ್ದರಿಂದ ಇಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆಯೂ ಶಾಸಕರಿಗೆ ಮನವಿ ಸಲ್ಲಿಸಲಾಗಿದೆ.


ಬಿಜೆಪಿ ಪಡುಬೆಟ್ಟು ಬೂತ್ ಸಮಿತಿ ಅಧ್ಯಕ್ಷ ರಮೇಶ್ ಶೆಟ್ಟಿ ಬೀದಿ, ಜಿಲ್ಲಾ ಎಸ್‌ಸಿ ಮೋರ್ಚಾದ ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ ಅಣ್ಣಿ ಎಳ್ತಿಮಾರ್, ನೆಲ್ಯಾಡಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರವಿಪ್ರಸಾದ್ ಶೆಟ್ಟಿ, ಸುಳ್ಯ ಮಂಡಲ ಉಪಾಧ್ಯಕ್ಷ ಭಾಸ್ಕರ ಗೌಡ ಇಚ್ಲಂಪಾಡಿ, ಉಮೇಶ್ ಪೂಜಾರಿ ಪೊಸೋಳಿಗೆ, ಚಂದ್ರಶೇಖರ ಶೆಟ್ಟಿ ಪಟ್ಟೆ, ಗಿರೀಶ್ ಶೆಟ್ಟಿ ಬೀದಿ ಉಪಸ್ಥಿತರಿದ್ದರು.


ಸಿಎಂಗೆ ಮನವಿ-ಶಾಸಕರ ಭರವಸೆ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕೆಲಸಗಳಿಗೆ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ. ಅನುದಾನ ಬಿಡುಗಡೆಯಾದ ಮೇಲೆ ಆದ್ಯತೆ ಮೇರೆಗೆ ರಸ್ತೆ, ಸೇತುವೆ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗುವುದು. ನೆಲ್ಯಾಡಿ ಬೈಲು ಸೇತುವೆಗೆ ಸಂಬಂಧಿಸಿದ ಅಂದಾಜು ಪಟ್ಟಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ ಅನುದಾನಕ್ಕೆ ಮನವಿ ಮಾಡುವುದಾಗಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಬಿಜೆಪಿ ಮುಖಂಡರಿಗೆ ಭರವಸೆ ನೀಡಿದ್ದಾರೆ.

LEAVE A REPLY

Please enter your comment!
Please enter your name here