ಬಡಗನ್ನೂರುಃ ಪೆರಿಗೇರಿ-ಈಶ್ವರಮಂಗಳ ಸಂಪರ್ಕ ರಸ್ತೆಯ ಪುಳಿತ್ತಡಿ ಸಮೀಪದ ಪಟ್ಲಡ್ಕ ಎಂಬಲ್ಲಿ ರಸ್ತೆಗೆ ಹೊಂದಿಕೊಂಡಿರುವ ತೆರೆದ ಕೆರೆ ತಡೆ ಬೇಲಿ ಇಲ್ಲದೆ ವಾಹನ ಸವಾರರಿಗೆ ಅಪಾಯ ತಂದೊಡ್ಡುವ ಸ್ಥಿತಿಯಲ್ಲಿದೆ.
ಬಡಗನ್ನೂರು ಗ್ರಾ.ಪಂ. ವ್ಯಾಪ್ತಿಯ ಪಡುವನ್ನೂರು ಗ್ರಾಮದ ಈ ಪರಿಸರದಲ್ಲಿ ಈಶ್ವರಮಂಗಳ ಭಾಗದಿಂದ ಎತ್ತರದಿಂದ ಇಳಿಜಾರಿನ ರಸ್ತೆಯಿದ್ದು, ರಸ್ತೆಗೆ ಹೊಂದಿಕೊಂಡಿರುವ ಅಪಾಯಕಾರಿ ತೆರೆದ ಕೆರೆ ಕಾಣಿಸುವುದೇ ಇಲ್ಲ. ವಾಹನ ಸವಾರರು ಸ್ವಲ್ಪ ಆಯ ತಪ್ಪಿಸಿದರೂ ಕೆರೆಗೆ ಬೀಳುವ ಸಾಧ್ಯತೆ ಇದೆ.
ಪಟ್ಟೆ, ಪೆರಿಗೇರಿ, ಅಂಬಟೆಮೂಲೆ ಮೂಲಕ ಈಶ್ವರಮಂಗಳ ಪೇಟೆಗೆ ಸಂಪರ್ಕಿಸುವ ರಸ್ತೆ ಇದಾಗಿದ್ದು, ದಿನಂಪ್ರತಿ ಶಾಲಾ -ಕಾಲೇಜುಗಳ ವಿದ್ಯಾರ್ಥಿಗಳ ಸಹಿತ ನೂರಾರು ಮಂದಿ ಸಂಚರಿಸುತ್ತಾರೆ. ರಸ್ತೆಯ ಕೆಳ ಭಾಗದಲ್ಲಿ ನೀರು ಹರಿಯಲು ಮೋರಿ ನಿರ್ಮಿಸಲಾಗಿದೆ. ಈ ಮೋರಿಯೂ ಶಿಥಿಲಾವಸ್ಥೆಯಲ್ಲಿದೆ. ಪಕ್ಕದಲ್ಲಿರುವ ತೆರೆದ ಕೆರೆಯಂತೂ ಇನ್ನೂ ಅಪಾಯಕಾರಿಯಾಗಿದೆ. ರಸ್ತೆ ಮತ್ತು ಬಾವಿಯ ಮಧ್ಯೆ ಯಾವುದೇ ತಡೆ ನಿರ್ಮಾಣ ಮಾಡಿಲ್ಲ. ಪೊದೆಗಳು ಬೆಳೆದಿವೆ. ಈ ರಸ್ತೆಯಲ್ಲಿ ರಾತ್ರಿಯ ಸಂಚಾರಕ್ಕೂ ಅಪಾಯಕಾರಿಯಾಗಿದೆ. ಈ ಹಿಂದೆಯೂ ಇಲ್ಲಿ ವಾಹನಗಳು ನಿಯಂತ್ರಣ ತಪ್ಪಿ ಉರುಳಿದ ಘಟನೆಗಳು ನಡೆದಿವೆ ಎನ್ನುತ್ತಾರೆ ಸ್ಥಳೀಯರು.
ತಡೆಬೇಲಿ ನಿರ್ಮಿಸಿ
ಈ ಪರಿಸರದಲ್ಲಿ ಕಿರಿದಾದ ರಸ್ತೆ ಇರುವುದು, ರಸ್ತೆ ಪಕ್ಕದಲ್ಲೇ ತೆರೆದ ಕೆರೆ ಇರುವುದು ಅತ್ಯಂತ ಅಪಾಯಕಾರಿಯಾಗಿದೆ. ಸ್ಥಳಿಯಾಡಳಿತ ತಕ್ಷಣ ಗಮನಹರಿಸಿ ಕನಿಷ್ಟ ತಡೆಬೇಲಿ ನಿರ್ಮಾಣವನ್ನಾದರೂ ಮಾಡಬೇಕು. ಶಿಥಿಲಗೊಂಡಿರುವ ಮೋರಿಯನ್ನು ಅಭಿವೃದ್ಧಿಗೊಳಿಸಬೇಕು.
ರಮೇಶ್ ನಾಯ್ಕ ಅಂಬಟೆಮೂಲೆ, ಆಟೋ ಚಾಲಕ