108 ಆರೋಗ್ಯ ಕವಚವನ್ನು ಮೇಲ್ದರ್ಜೆಗೇರಿಸಲು ಕ್ರಮ- ಉಪ್ಪಿನಂಗಡಿಯಲ್ಲಿ ಸಚಿವ ದಿನೇಶ್ ಗುಂಡೂರಾವ್ ಹೇಳಿಕೆ

0

ಉಪ್ಪಿನಂಗಡಿ: ಅನಾರೋಗ್ಯಪೀಡಿತರಿಗೆ ತ್ವರಿತ ಚಿಕಿತ್ಸೆ ಸಿಗುವಂತಾಗಲು ಸರಕಾರ ಉಚಿತ ಸೇವೆಗಾಗಿ ನೀಡಿರುವ 108 ಆಂಬುಲೆನ್ಸ್‌ನಲ್ಲಿ ಹಲವು ಲೋಪಗಳಿದ್ದು, ಅದನ್ನು ಇನ್ನಷ್ಟು ಆಧುನೀಕರಣಗೊಳಿಸಲಾಗುವುದು. ಸಂಚಾರದಲ್ಲಿರುವಾಗಲೇ ಈ ಆಂಬುಲೆನ್ಸ್‌ನಲ್ಲಿ ವೈದ್ಯರೊಂದಿಗೆ ಕಾನ್ಪರೆನ್ಸ್ ಕಾಲ್‌ನ ಮೂಲಕ ನೇರ ಸಂಪರ್ಕ ಸಾಧಿಸಿ ಚಿಕಿತ್ಸೆ ಆರಂಭ ಮಾಡುವ ಸೌಲಭ್ಯವನ್ನು ಮಾಡಲಾಗುವುದು. 108 ಆಂಬುಲೆನ್ಸ್‌ಗಳನ್ನು ಮೇಲ್ದರ್ಜೆಗೇರಿಸಲು ಹೊಸ ಟೆಂಡರ್ ಕರೆಯಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.


ಜು.6ರಂದು ರಾತ್ರಿ ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, ಕೆಲವು ಕಡೆಗಳಲ್ಲಿ 108 ಆಂಬುಲೆನ್ಸ್‌ನವರು ತಮಗೆ ಬೇಕಾದ ಆಸ್ಪತ್ರೆಗಳಿಗೆ ರೋಗಿಗಳನ್ನು ದಾಖಲು ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಆಂಬುಲೆನ್ಸ್ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವವರೆಗೆ ಅದರ ಮೇಲೆ ನಿಗಾವಿಡುವ ವ್ಯವಸ್ಥೆಯನ್ನು ಮತ್ತು ಯಾವ ಆಸ್ಪತ್ರೆಗೆ ರೋಗಿಯನ್ನು ದಾಖಲಿಸಬೇಕೆಂಬ ನಿರ್ದೇಶನವನ್ನು ನೀಡುವ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದರು.


ಈ ಹಿಂದಿನ ಸರಕಾರ ಸರಕಾರಿ ಆರೋಗ್ಯ ಕೇಂದ್ರಗಳಿಗೆ ಶೇ.30ರಷ್ಟು ಮಾತ್ರ ಔಷಧಿ ಪೂರೈಕೆ ಮಾಡುತ್ತಿತ್ತು. ಆದರೆ ನಮ್ಮ ಸರಕಾರ ಬಂದ ಬಳಿಕ ಈಗ ಸರಕಾರಿ ಆರೋಗ್ಯ ಕೇಂದ್ರಗಳಿಗೆ ಶೇ.80ರಷ್ಟು ಔಷಧಿ ಪೂರೈಕೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಶೇ.100ರಷ್ಟು ಔಷಧಿ ವಿತರಣೆಯಾಗಲಿದೆ. ಇಲ್ಲಿ ಉಚಿತವಾಗಿ ಔಷಧಿ ಸಿಗುತ್ತಿರುವಾಗ ಹೊರಗಡೆಯಿಂದ ದುಡ್ಡು ಕೊಟ್ಟು ಔಷಧಿ ಖರೀದಿಸುವ ಪ್ರಮೇಯ ಬರುವುದಿಲ್ಲ. ಆದ್ದರಿಂದ ಸರಕಾರಿ ಆರೋಗ್ಯ ಕೇಂದ್ರದ ವಠಾರದೊಳಗಿರುವ ಎಲ್ಲಾ ಮೆಡಿಕಲ್ ಶಾಪ್ ಅನ್ನು ತೆರವುಗೊಳಿಸಲಾಗುವುದು. ಆಸ್ಪತ್ರೆಯ 100 ಮೀ. ವ್ಯಾಪ್ತಿಯಲ್ಲಿ ಯಾವುದೇ ಮೆಡಿಕಲ್ ಶಾಪ್‌ಗಳಿಗೆ ಅವಕಾಶ ನೀಡುವುದಿಲ್ಲ ಎಂದ ದಿನೇಶ್ ಗುಂಡೂರಾವ್, ಉಪ್ಪಿನಂಗಡಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿ ಎಕ್ಸ್‌ರೇ ಟೆಕ್ನಿಷಿಯನ್ ಓರ್ವರನ್ನು ತಕ್ಷಣಕ್ಕೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಸೂಚಿಸಿದರು.


ಸಿಬ್ಬಂದಿ ಭರ್ತಿಗೆ ಕ್ರಮ:
ಈ ಹಿಂದಿನ ಸರಕಾರ ಯಾವುದೇ ಉದ್ಯೋಗ ನೇಮಕಾತಿಯನ್ನು ಮಾಡಿಲ್ಲ. ಆದ್ದರಿಂದ ಹುದ್ದೆಗಳು ಖಾಲಿ ಇವೆ. ಕೊರತೆ ಇರುವ ಸಿಬ್ಬಂದಿಗಳ ಭರ್ತಿಗೆ ನಮ್ಮ ಸರಕಾರ ಕ್ರಮ ಕೈಗೊಂಡಿದ್ದು, 750 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುವುದು. ಮತ್ತುಳಿದ ಹುದ್ದೆಗಳಿಗೆ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಉಪ್ಪಿನಂಗಡಿಯ ಆರೋಗ್ಯ ಕೇಂದ್ರಕ್ಕೆ ಮೇಲ್ದರ್ಜೆಗೇರಿದ ಅಪರೇಷನ್ ಥಿಯೇಟರ್ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಇಲ್ಲಿ ಅನಸ್ತೇಶಿಯಾ ವೈದ್ಯರು ಅಗತ್ಯವಾಗಿ ಬೇಕಾಗಿದ್ದು, ಗುತ್ತಿಗೆ ಆಧಾರದಲ್ಲಿ ಅವರ ನೇಮಕಾತಿಗೂ ಕ್ರಮ ಕೈಗೊಳ್ಳಲಾಗುವುದು ಎಂದರು.


7 ಆರೋಗ್ಯ ಕ್ಷೇಮ ಕೇಂದ್ರ:
ಕಡಬ ಮತ್ತು ಪುತ್ತೂರಿಗೆ 65 ಲಕ್ಷ ವೆಚ್ಚದಲ್ಲಿ 7 ಆರೋಗ್ಯ ಕ್ಷೇಮ ಕೇಂದ್ರವನ್ನು ನೀಡಲಾಗಿದೆ. ಒಂದು ಆರೋಗ್ಯ ಕ್ಷೇಮ ಕೇಂದ್ರದಲ್ಲಿ ಒಬ್ಬರು ವೈದ್ಯರು, ಓರ್ವ ಲಾಬ್ ಟೆಕ್ನೀಷಿಯನ್, ಒಬ್ಬರು ನರ್ಸ್‌ಗಳ ನೇಮಕ ಮಾಡಲಾಗುವುದು ಎಂದರು.


ಈ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್, ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮಹೋಪಾತ್ರ, ಆಡಳಿತ ವೈದ್ಯಾಧಿಕಾರಿ ಡಾ. ಕೃಷ್ಣಾನಂದ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯ ಮನೋಜ್ ಕುಮಾರ್, ದ.ಕ. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ., ಗುರುಬೆಳದಿಂಗಳು ಫೌಂಡೇಶನ್‌ನ ಪದ್ಮರಾಜ್ ಆರ್. ಪೂಜಾರಿ, ಕಾಂಗ್ರೆಸ್ ಮುಖಂಡರಾದ ಡಾ. ಬಿ. ರಘು, ನಝೀರ್ ಮಠ, ಶಬೀರ್ ಕೆಂಪಿ, ಪ್ರಹ್ಲಾದ್ ಬೆಳ್ಳಿಪ್ಪಾಡಿ, ಜಯಪ್ರಕಾಶ್ ಬದಿನಾರು ಹಾಗೂ ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಯ ಸದಸ್ಯರಾದ ಇಬ್ರಾಹೀಂ ಆಚಿ ಕೆಂಪಿ, ಫಾರೂಕ್ ಜಿಂದಗಿ, ಸಿದ್ದೀಕ್ ಕೆಂಪಿ, ಜಯಶೀಲ ಶೆಟ್ಟಿ, ಆನಂದ ಕೊಳಕ್ಕೆ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here