ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ನಗರಸಭೆ ಸದಸ್ಯರಿಂದ ಸಮಸ್ಯೆಗಳ ಸುರಿಮಳೆ
ಪುತ್ತೂರು: ನೀರಿನ ಪೈಪ್ ಅಳವಡಿಸುವ ಭರದಲ್ಲಿ ಇಂಟರ್‌ಲಾಕ್ ಎದ್ದು ಹೋಗಿದೆ. ಎದ್ದು ಹೋದ ಇಂಟರ್‌ಲಾಕ್ ದುರಸ್ತಿ ಮಾಡದೆ ವಿದ್ಯಾರ್ಥಿನಿ ಬಿದ್ದು ಹಲ್ಲು ಮುರಿತಕ್ಕೊಳಗಾಗಿದ್ದಾಳೆ. ಎಲ್ಲಾ ವಲಯಕ್ಕೆ ನೀರು ಹೋಗುತ್ತದೆ ಎಂದು ಹೇಳುತ್ತೀರಿ. ಯಾವ ವಲಯಕ್ಕೆ ಯಾವ ಟ್ಯಾಂಕ್‌ನಿಂದ ನೀರು ಸರಬರಾಜು ಆಗುತ್ತದೆಂದು ಹೇಳಿ, ನಾವು ಹೇಳಿದ ಕೆಲಸ ಯಾವುದೂ ಆಗಿಲ್ಲ. ಎಲ್ಲಾ ಮನೆಗಳಿಗೆ ಇನ್ನೂ ಕೂಡಾ ನೀರಿನ ಸಂಪರ್ಕ ಆಗಿಲ್ಲ. ಕೊಳವೆಬಾವಿ ಕೆಟ್ಟು ಹೋದರೂ ದುರಸ್ತಿ ಮಾಡಿಲ್ಲ. ಬನ್ನೂರಿನಲ್ಲಿ ತೇಪೆ ಹಾಕಿದ ಡಾಮರು ಎದ್ದು ಹೋಗಿದೆ. ಮಳೆಗಾಲದಲ್ಲೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಪರಿಸ್ಥಿತಿ ಬಂದಿದೆ. ನಗರಸಭೆ ಬಜೆಟ್‌ಗಿಂತ ಹೆಚ್ಚು ಖರ್ಚು ಜಲಸಿರಿಗೆ ಕೊಡಬೇಕಾಗಿದೆ ಎಂದು ಜಲಸಿರಿ ಕಾಮಗಾರಿಯಲ್ಲಿನ ಸಮಸ್ಯೆಗಳನ್ನು ನಗರಸಭೆ ಸದಸ್ಯರು ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕರ ಮುಂದೆ ತಿಳಿಸಿದ ಘಟನೆ ನಗರಸಭೆ ಜಲಸಿರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದಿದೆ.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಉದಯ ಶೆಟ್ಟಿಯವರು ಜಲಸಿರಿ ಕಾರ್ಯಪಾಲಕ ಅಭಿಯಂತರ ಮತ್ತು ಗುತ್ತಿಗೆದಾರರಿಗೆ ಎಲ್ಲಾ ದೂರುಗಳಿಗೆ ಮತ್ತು ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚನೆ ನೀಡಿ, ನೀರು ಬಿಡುವ ಸಮಯ ಪಾಲನೆ ಮಾಡಿ, ಕಾಮಗಾರಿಗೆ ವೇಗ ನೀಡಿ, ದೂರು ಸ್ವೀಕರಿಸಲು ವೈಜ್ಞಾನಿಕ ವಿಧಾನ ಬಳಸಿ ಎಂದು ಸೂಚಿಸಿದರು.
ಪುತ್ತೂರು ನಗರಸಭೆಗೆ 24 ಗಂಟೆ ನೀರು ಪೂರೈಸುವ 118 ಕೋಟಿ ರೂ.ವೆಚ್ಚದ ಜಲಸಿರಿ ಯೋಜನೆ ಅನುಷ್ಠಾನಗೊಂಡು ಪ್ರಾಯೋಗಿಕ ಹಂತದಲ್ಲಿದೆ. ಆದರೆ ನೂರಾರು ಸಮಸ್ಯೆಗಳು ಉದ್ಭವಿಸುತ್ತಲೇ ಇವೆ. ಈ ಕುರಿತು ಜು.10ರಂದು ನಗರಸಭೆ ಮೀಟಿಂಗ್ ಹಾಲ್‌ನಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸದಸ್ಯರಿಂದ ಹಲವಾರು ದೂರುಗಳು ಕೇಳಿ ಬಂತು. ಸದಸ್ಯ ರಮೇಶ್ ರೈ ಅವರು ಮಾತನಾಡಿ, ನೆಲ್ಲಿಕಟ್ಟೆ ಸುಧಾಕರ್ ಶೆಟ್ಟಿಯವರ ಮನೆಯ ಬಳಿ ಜಲಸಿರಿ ಪೈಪ್ ಕಾಮಗಾರಿ ಮಾಡಿಲ್ಲ. ಅಲ್ಲಿ ಬೇರೆಯವರ ಆವರಣದಿಂದ ಮನೆಯೊಂದಕ್ಕೆ ನೀರು ಕೊಡಿಸಲಾಗಿದೆ. ಈಗ ಅದನ್ನು ತೆಗೆಯುವ ಪರಿಸ್ಥಿತಿ ಎದುರಾಗಿದೆ. ನಾಗನಕಟ್ಟೆಯ ಬಳಿ ಹಾಕಿದ ಇಂಟರ್‌ಲಾಕ್ ತೆರವು ಮಾಡಿದ ಬಳಿಕ ಅದನ್ನು ಸರಿಯಾಗಿ ಜೋಡಿಸದೆ ವಿದ್ಯಾರ್ಥಿನಿಯೋರ್ವರು ಬಿದ್ದು ಹಲ್ಲು ಮುರಿದು ಹೋಗಿದೆ. ಇತ್ತ ಪುತ್ತೂರು ಸಿಟಿ ಆಸ್ಪತ್ರೆಯ ಬಳಿಯಿಂದ ಬಸ್‌ನಿಲ್ದಾಣಕ್ಕೆ ಬರುವ ಕಾಂಕ್ರೀಟ್ ರಸ್ತೆಯ ಬದಿಯಲ್ಲಿ ಇಂಟರ್‌ಲಾಕ್ ಎದ್ದು ಹೋಗಿದೆ. ಅಪಘಾತಗಳು ಹೆಚ್ಚಾಗುತ್ತಿವೆ. ಬ್ರಹ್ಮನಗರಕ್ಕೂ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ ಎಂದು ಹೇಳಿದರು.
ದೀಕ್ಷಾ ಪೈ ಅವರು ಮಾತನಾಡಿ, ವಲಯಗಳಿಗೆ ಎಲ್ಲಿಂದ ಹೇಗೆ ನೀರು ಸರಬರಾಜು ಆಗುತ್ತದೆ ಎಂಬ ಮಾಹಿತಿ ನೀಡಿ ಎಂದರು. ಉತ್ತರಿಸಿದ ಪೌರಾಯುಕ್ತರು ಈ ಕುರಿತು ವಲಯದ ಪಟ್ಟಿ ಮಾಡಲಾಗಿದೆ. ಅದನ್ನು ಪ್ರಾಯೋಗಿಕವಾಗಿ ಗುತ್ತಿಗೆದಾರರು ಮಾಡುತ್ತಿದ್ದಾರೆ. ಸದ್ಯದಲ್ಲೇ ಪಟ್ಟಿ ನೀಡಲಾಗುವುದು ಎಂದರು.
ಸುಂದರ ಪೂಜಾರಿ ಬಡಾವು ಅವರು ಮಾತನಾಡಿ, ರಾತ್ರಿ ಸಮಯದಲ್ಲಿ ನೀರು ಸರಬರಾಜು ಮಾಡಿದರೆ ಹೇಗೆ. 24 ಗಂಟೆ ನೀರು ಕೊಡಲಾಗದಿದ್ದರೂ ಒಂದು ನಿಗದಿತ ಸಮಯ ಕೊಡಿ ಎಂದರು. ಪದ್ಮನಾಭ ನಾಯ್ಕ್ ಅವರು ಮಾತನಾಡಿ ಜಲಸಿರಿ ಸಮಸ್ಯೆ ಎಲ್ಲಾ 31 ವಾರ್ಡ್‌ಗಳಲ್ಲೂ ಇದೆ ಎಂದರು. ಬಾಲಚಂದ್ರ ಅವರು ಮಾತನಾಡಿ ನಾವು ಹೇಳಿರುವುದು ಯಾವುದು ಕೂಡಾ ಜಲಸಿರಿ ವಿಭಾಗದಿಂದ ಆಗುತ್ತಿಲ್ಲ. ವಿದ್ಯಾಗೌರಿ ಅವರು ಮಾತನಾಡಿ ನನ್ನ ವಾರ್ಡ್‌ನ 52 ಮನೆಗಳಿಗೆ ಇನ್ನೂ ನೀರಿನ ಸಂಪರ್ಕ ಆಗಿಲ್ಲ ಎಂದರು. ಮೋಹಿನಿ ವಿಶ್ವನಾಥ ಗೌಡ ಅವರು ಮಾತನಾಡಿ, ನನ್ನ ವಾರ್ಡ್‌ನಲ್ಲಿ ಜಲಸಿರಿಯಿಂದ ನೀರು ಸರಬರಾಜು ಸರಿಯಾಗಿ ಆಗುತ್ತಿಲ್ಲ. ಬೋರ್‌ವೆಲ್‌ನಿಂದ ನೀರು ಕೊಡಲಾಗುತ್ತಿದೆ. ಆದರೆ ಅದು ಈಗ ಮೂರು ದಿನದಿಂದ ಕೆಟ್ಟು ಹೋಗಿದೆ. ಅದನ್ನು ಇನ್ನೂ ದುರಸ್ಥಿ ಮಾಡಿಲ್ಲ ಎಂದರು. ಪ್ರೇಮಲತಾ ನಂದಿಲ ಅವರು ಮಾತನಾಡಿ, ಮೊನ್ನೆ ಮೊನ್ನೆ ಶಾಸಕರ ಸೂಚನೆಯಂತೆ ರಸ್ತೆಯಲ್ಲಿ ಅಗೆದ ಗುಂಡಿಗಳಿಗೆ ತೇಪೆ ಹಾಕಿದ್ದಾರೆ. ಈಗ ಮತ್ತೆ ಅದೆಲ್ಲ ಎದ್ದು ಹೋಗಿದೆ ಎಂದರು.
ನಗರಸಭೆ ನಿಕಟಪೂರ್ವ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಮಾತನಾಡಿ ಜಲಸಿರಿ ಯೋಜನೆ ಬಂದಿರುವುದು ಸಂತೋಷ. ಆದರೆ 30 ವರ್ಷಗಳ ಲೆಕ್ಕಾಚಾರದಲ್ಲಿ ಬಂದ ಯೋಜನೆಯಲ್ಲಿ ಇನ್ನೂ ಇರುವ 62 ಸಾವಿರ ಜನಸಂಖ್ಯೆಗೆ ನೀರು ಸರಬರಾಜು ಆಗುತ್ತಿಲ್ಲ. ನಮ್ಮ ಬಜೆಟ್ ಆದಾಯ ಇರುವುದೇ ರೂ. 11 ಕೋಟಿ. ಆದರೆ ಪ್ರತಿ ವರ್ಷ 10 ಕೋಟಿ ರೂಪಾಯಿ ಜಲಸಿರಿಗೆ ನಗರಸಭೆ ಪಾವತಿಸಬೇಕು. ಇದನ್ನು ಸರಕಾರದಿಂದ ಭರಿಸುವಂತೆ ಆಗಬೇಕು. ಅಭಿವೃದ್ದಿ ಕಾಮಗಾರಿಗಳು ಹೇಗೆ ಮಾಡುವುದು. ಈ ವರ್ಷ ಮಳೆಗಾಲದಲ್ಲೂ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗಿದೆ. ನಗರಸಭೆ ಸದಸ್ಯರ ವಾರ್ಡ್‌ನಲ್ಲಿನ ಕಾಮಗಾರಿಗೆ ತೊಂದರೆ ಆಗಿದೆ. ಈಗಿರುವ 9 ಟ್ಯಾಂಕ್‌ಗಳಿಗೆ ಇನ್ನೂ ಕೂಡಾ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಹಿಂದೆ ನೀರಿನ ದುಡ್ಡನ್ನು ವಾರ್ಡ್‌ನ ಅಭಿವೃದ್ಧಿ ಕಾಮಗಾರಿಗೆ ಉಪಯೋಗಿಸುತ್ತಿದ್ದೆವು. ಇವತ್ತು 15ನೇ ಹಣಕಾಸಿನ ಯೋಜನೆಯಡಿಯಲ್ಲಿ ರೂ. 87 ಲಕ್ಷ ರೂಪಾಯಿಯಲ್ಲಿ ನಾವೇ ಪೈಪ್‌ಲೈನ್ ಹಾಕುತ್ತಿದ್ದೇವೆ. ಇದು 87 ಲಕ್ಷ ರೂಪಾಯಿ ಪುನಃ ನೀರಿಗೆ ಕೊಡುವ ಪರಿಸ್ಥಿತಿ ಬಂದಿದೆ. ಮುಂದೆ ನಗರಸಭೆ ಬೆಳೆಯುತ್ತದೆ. ಆಗ ಲೇಔಟ್, ಕಟ್ಟಡಗಳು ಬರುತ್ತವೆ. ಆಗ ಅವರಿಗೆ ಪೈಪ್ ಲೈನ್ ಹೇಗೆ ಕೊಡುತ್ತೀರಿ. ಇವೆಲ್ಲ ಯಕ್ಷಪ್ರಶ್ನೆಯಾಗಿ ಉಳಿಯುತ್ತದೆ. ಹಾಗಾಗಿ ಜಿಲ್ಲಾಽಕಾರಿ ಮುಖೇನ ನೀವು ಅಽಕಾರಿಗಳು ತುರ್ತು ಸಭೆ ಕರೆದು ಪರಿಹಾರ ಕಂಡುಕೊಳ್ಳಿ. ಮುಂದಿನ ದಿನ ಪರಿಹಾರ ಆದರೆ ಕೌನ್ಸಿಲ್ ಗಮನಕ್ಕೆ ತನ್ನಿ ಎಂದರು.
ಬೊಳುವಾರು ಕರ್ಮಲ ಸಮೀಪ ರಸ್ತೆ ಕೆಟ್ಟು ಹೋಗಿದೆ. ಮಳೆ ನೀರು ಹೋಗಿ ಅಲ್ಲಿ ರಸ್ತೆಯೇ ಚರಂಡಿಯಾಗಿದೆ. ಇದನ್ನು ಸರಿಪಡಿಸುವಂತೆ ಸದಸ್ಯ ಸಂತೋಷ್ ಅವರು ಪ್ರಸ್ತಾಪಿಸಿ, ಜಲಸಿರಿಯ ಕುರಿತು ವಾರ್ಡ್ ಮಟ್ಟದಲ್ಲಿ ಸಭೆ ಮಾಡಬೇಕು. ಆಗ ಜನರ ಸಮಸ್ಯೆ ಅರಿಯಲು ಸಾಧ್ಯ ಎಂದರು.
ಡಿಸಿ ಗಮನಕ್ಕೆ: ಎಲ್ಲರ ದೂರುಗಳನ್ನು ಆಲಿಸಿದ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಉದಯ ಶೆಟ್ಟಿಯವರು ನಿಮ್ಮೆಲ್ಲ ವರದಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಜಲಸಿರಿಯವರು ದೂರುಗಳಿಗೆ ತ್ವರಿತ ರೀತಿಯಲ್ಲಿ ಸ್ಪಂದಿಸುವಂತೆ ತಿಳಿಸಿದರು. ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ಕಾರ್ಯಪಾಲಕ ಅಭಿಯಂತರ ಪುರಂದರ ಸಹಿತ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
ಇನ್ನೂ 13.5 ಕೋಟಿ ರೂ. ಅನುದಾನ ಬೇಕಿದೆ..!
ಜನವರಿಯಿಂದ ಜಲಸಿರಿಯ ಪ್ರಾಯೋಗಿಕ ಅನುಷ್ಠಾನ ಆರಂಭಗೊಂಡಿದ್ದು, ಮಾರ್ಚ್‌ನಲ್ಲಿ ಮುಕ್ತಾಯಗೊಂಡು ಏಪ್ರಿಲ್‌ನಿಂದ ನೀರು ಪೂರೈಕೆ ಪೂರ್ಣ ಪ್ರಮಾಣದಲ್ಲಿ ಆರಂಭವಾಗಬೇಕಿತ್ತು. ಆದರೆ 10 ವಲಯಗಳ ಪೈಕಿ ಕೇವಲ 3 ಮಾತ್ರ ಪೂರ್ಣಗೊಂಡಿದ್ದು, ಅದು ಕೂಡ ದೂರು ಮುಕ್ತವಾಗಿಲ್ಲ. 7 ವಲಯದಲ್ಲಿ ಕಾಮಗಾರಿಯೇ ಮುಗಿದಿಲ್ಲ ಎಂದು ವಿವರಿಸಲಾಯಿತು. ಜಲಸಿರಿ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಾದೇಶ್ ಅವರು ವಸ್ತುಸ್ಥಿತಿಯನ್ನು ವಿವರಿಸುವ ಪ್ರಯತ್ನ ಮಾಡಿದರು. ಗುತ್ತಿಗೆದಾರ ಸಂಸ್ಥೆಯ ಪ್ರತಿನಿಧಿ ಪ್ರಮೋದ್ ಅವರು ಕಾಮಗಾರಿ ಪ್ರಗತಿಯ ವಿವರ ನೀಡಿದರು. ನಗರಸಭೆ ವ್ಯಾಪ್ತಿಯಲ್ಲಿ ಅತ್ಯಂತ ಹಳೆಯದಾದ 46 ಕಿ.ಮೀ. ಉದ್ದದ ಪಿವಿಸಿ ಪೈಪ್ ಲೈನ್ ಉಳಿದಿದ್ದು, ಅದನ್ನು ಬದಲಾಯಿಸದೆ ಯೋಜನೆ ಪೂರ್ಣಗೊಳ್ಳಲು ಅಸಾಧ್ಯ. ಆದರೆ ಮಂಜೂರಾದ ಯೋಜನೆಯಲ್ಲಿ ಇದು ಸೇರಿಲ್ಲ ಎಂದು ಪೌರಾಯುಕ್ತರು ಹೇಳಿದರು. ಡಿಪಿಆರ್ ಹಂತದಲ್ಲೇ ಇದನ್ನು ಸೇರಿಸದೇ ಇರುವುದಕ್ಕೆ ನಿಕಟಪೂರ್ವ ಅಧ್ಯಕ್ಷ ಜೀವಂಧರ ಜೈನ್, ಹಿರಿಯ ಸದಸ್ಯ ಬಾಲಚಂದ್ರ ಕೆಮ್ಮಿಂಜೆ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತರು, ಪಿವಿಸಿ ಪೈಪ್‌ಲೈನ್ ಬದಲಾಯಿಸಲು 13.5 ಕೋಟಿ ರೂ.ಗಳ ಎಸ್ಟಿಮೇಟ್ ತಯಾರಿಸಿ ಸರಕಾರಕ್ಕೆ ಕಳುಹಿಸಲಾಗಿದೆ. ಅನುದಾನ ಮಂಜೂರಾಗಿಲ್ಲ ಎಂದರು.