ಸವಣೂರು: ಕಡಬ ತಾಲೂಕಿನ ಸವಣೂರು-ಬಂಬಿಲ- ಅಂಕತಡ್ಕ ರಸ್ತೆಯ ನಾಡೋಳಿ ಎಂಬಲ್ಲಿ ಮಳೆಗೆ ನಿರಂತರವಾಗಿ ಧರೆ ಕುಸಿಯುತ್ತಿದ್ದು, ಆತಂಕ ಹೆಚ್ಚಿದೆ.
ನಾಡೋಳಿಯಲ್ಲಿ ನೂತನ ಸೇತುವೆ ನಿರ್ಮಾಣ ಸಮಯದಲ್ಲಿ ರಸ್ತೆ ಅಗಲೀಕರಣ ಹಾಗೂ ಸೇತುವೆಗೆ ಹೊಂದಿಕೊಂಡಂತೆ ರಸ್ತೆ ನಿರ್ಮಾಣ ಸಲುವಾಗಿ ಬೃಹತ್ ಬರೆಯನ್ನು ಅಗೆಯಲಾಗಿದ್ದು, ಈ ಬರೆ ಈಗ ಮಳೆಗಾಲದಲ್ಲಿ ದಿನೇ ದಿನೇ ಕುಸಿಯುತ್ತಿದೆ. ಬರೆಯ ಮೇಲೆ ವಿದ್ಯುತ್ ಕಂಬ ಹಾದು ಹೋಗಿದ್ದು, ಅದು ಕೂಡ ಈಗ ಕುಸಿಯುವ ಹಂತಕ್ಕೆ ತಲುಪಿದೆ.
ರಸ್ತೆ ಅಗಲೀಕರಣ ಹಾಗೂ ಸೇತುವೆ ನಿರ್ಮಾಣ ಸಂದರ್ಭದಲ್ಲಿ ಮುಂದೆ ಬರುವ ಅಪಾಯಗಳ ಕುರಿತಾಗಿ ಸ್ಥಳೀಯರು ಅಧಿಕಾರಿಗಳ ಹಾಗೂ ಗುತ್ತಿಗೆದಾರರ ಗಮನಕ್ಕೆ ತಂದರೂ ಯಾವುದೇ ಮುಂಜಾಗರೂಕತೆ ಕ್ರಮ ತೆಗೆದುಕೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಭೂಮಿ ಕಳೆದುಕೊಂಡವರಿಗೆ ಯಾವುದೇ ಪರಿಹಾರವೂ ಸಿಕ್ಕಿಲ್ಲ. ಈಗ ಉಳಿದ ಭೂಮಿಯು ಕುಸಿತವಾಗಿ ಕಳೆದುಕೊಳ್ಳುವಂತಾಗಿದೆ.