ಪುತ್ತೂರು: ಚೆನ್ನೆಕಾಯಿ ಹೆಕ್ಕುವುದು, ಅಡಿಕೆ ಹಾಳೆಯಲ್ಲಿ ಕೂತು ಎಳೆಯುವುದು, ಜನಪದ ಗೀತೆ, ಮದರಂಗಿ, ಶೋಭಾನೆ ಹಾಡು, ತೆಂಗಿನ ಕಾಯಿ ಹೊರಳಿಸುವುದು ಸಹಿತ ವಿವಿಧ ಬಗೆ ಆಟಿ ತಿನಸುಗಳನ್ನು ಮಾಡುವ ಸ್ಪರ್ಧಾ ಕಾರ್ಯಕ್ರಮದ ಮೂಲಕ ಜನಪದ ಸಂಪ್ರದಾಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ವಿಶೇಷ ಆಟಿ ಹಬ್ಬ ಕಾರ್ಯಕ್ರಮ ಪುತ್ತೂರು ಒಕ್ಕಲಿಗ ಗೌಡ ಮಹಿಳಾ ಸಂಘದ ಆಶ್ರಯದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘ, ಯುವ ಒಕ್ಕಲಿಗ ಗೌಡ ಸಂಘ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಪುತ್ತೂರು ಇದರ ಸಹಯೋಗದಲ್ಲಿ ಜು.21ರಂದು ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಆಟಿ ಹಬ್ಬ -2024 ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಚೆನ್ನಮ್ಮ ಸುರುಳಿಮೂಲೆ ತೆಂಕಿಲ ಅವರು ಕಾರ್ಯಕ್ರಮ ಉದ್ಘಾಟಿಸಿ ಚೆನ್ನೆಮಣೆ ಆಡುವ ಮೂಲಕ ವಿವಿಧ ಸ್ಪರ್ಧಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಒಕ್ಕಲಿಗ ಗೌಡ ಮಹಿಳಾ ಸಂಘದ ಅಧ್ಯಕ್ಷೆ ವಾರಿಜ ಕೆ ಗೌಡ ಅವರು ಅಧ್ಯಕ್ಷತೆ ವಹಿಸಿದ್ದರು.
ಒಕ್ಕಲಿಗ ಗೌಡ ಸೇವಾ ಸಂಘದ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಮಾಜಿ ಶಾಸಕ ಸಂಜೀವ ಮಠಂದೂರು, ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕಿ ಅಶ್ವಿನಿ ಕೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಒಕ್ಕಲಿಗ ಗೌಡ ಸೇವಾ ಸಂಘದ ಗೌರವಾಧ್ಯಕ್ಷ ಚಿದಾನಂದ ಬೈಲಾಡಿ, ಅಧ್ಯಕ್ಷ ರವಿ ಮುಂಗ್ಲಿಮನೆ, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಅಮರನಾಥ ಗೌಡ ಬಪ್ಪಳಿಗೆ, ಒಕ್ಕಲಿಗ ಸ್ವ ಸಹಾಯ ಸಂಘದ ಅಧ್ಯಕ್ಷ ಡಿ.ವಿ.ಮನೋಹರ ಸಹಿತ ಹಲವಾರು ಮಂದಿ ಗಣ್ಯರು ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಆಟಿ ಹಬ್ಬ ವಿಶೇಷ ಊಟೋಪಚಾರ ನಡೆಯಿತು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಕಷಾಯ ಜ್ಯೂಸ್, ಹಲಸು, ಕೆಸು, ಕಣಿಲೆಯ ಖಾದ್ಯ, ತಗಟೆ ಸೊಪ್ಪು, ಪಸಿಂಗರಿ ಸಹಿತ ವಿವಿಧ ಖಾದ್ಯಗಳು ತುಳು ನಾಡಿನ ಸಂಪ್ರದಾಯವನ್ನು ಮೆರುಗುಗೊಳಿಸಿತು.