ಪುತ್ತೂರು: 30 ವರ್ಷಗಳಿಗೂ ಮೇಲ್ಪಟ್ಟು ಕೃಷಿ ಬದಲಾವಣೆ ಮಾಡಲಾಗದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ರೈತರು ಬೆಳೆ ಸಮೀಕ್ಷೆ ಮಾಡುವ ಪ್ರಕ್ರಿಯೆಗೆ ವಿನಾಯಿತಿ ನೀಡುವಂತೆ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದಿಂದ ಕಂದಾಯ ಸಚಿವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರುಗಳ ಮೂಲಕ ಮನವಿ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಮಹೇಶ್ ಪುಚ್ಚಪ್ಪಾಡಿ ಅವರು ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಬೆಳೆ ಸಮೀಕ್ಷೆ ಕಾರ್ಯವನ್ನು ಕಂದಾಯ ಇಲಾಖೆಯ ಮೂಲಕ ಸರ್ಕಾರವು ರೈತರಿಂದ ಮಾಡಿಸುತ್ತಿದೆ. ಪ್ರತೀ ವರ್ಷ ಬೆಳೆ ಸಮೀಕ್ಷೆ ಪೂರ್ಣಗೊಳ್ಳದಿದ್ದಲ್ಲಿ ಬೆಳೆ ವಿಮೆ ಸೇರಿದಂತೆ ಹಲವಾರು ರೈತ ಪರವಾದ ಸರ್ಕಾರಿ ಯೋಜನೆಗಳಿಗೆ ತೊಂದರೆಯಾಗುತ್ತಿದೆ. ಅಡಿಕೆಯಂತಹ ಬೆಳೆಗಳು ಒಮ್ಮೆ ನಾಟಿ ಮಾಡಿದರೆ ಸುಮಾರು 30 ವರ್ಷಗಳಿಗೂ ಮೇಲ್ಪಟ್ಟು ಕೃಷಿ ಬದಲಾವಣೆ ಮಾಡಲಾಗುವುದಿಲ್ಲ. ಹೀಗಾಗಿ ಪ್ರತೀ ವರ್ಷ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಬೆಳೆಯುವ ಬಹುವಾರ್ಷಿಕ ಬೆಳೆಗಳಾದ ಅಡಿಕೆ, ತೆಂಗು, ಕಾಳುಮೆಣಸು, ರಬ್ಬರ್ , ಕಾಫಿ.. ಬೆಳೆಯುವ ರೈತರಿಗೆ ಪ್ರತೀ ವರ್ಷವೂ ಬೆಳೆ ನೋಂದಾವಣೆ ಅಗತ್ಯವಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಹೊಸ ಬೆಳೆ ಮಾಡುವ ರೈತರು ಮಾತ್ರ ಆ ಸಂದರ್ಭದಲ್ಲಿ ಬೆಳೆ ಸಮೀಕ್ಷೆ ಮಾಡಬೇಕಾಗಿರುತ್ತದೆ ಎಂದವರು ಮನವಿಯಲ್ಲಿ ತಿಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.