ಕಡಬ: ಕಾಡು ಪ್ರಾಣಿ ಬೇಟೆಯಾಡಿದ ಆರೋಪದಲ್ಲಿ ಬಂಧಿತ ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ ಮಧ್ಯಂತರ ಜಾಮೀನು ನೀಡಿ ಆದೇಶಿಸಿದೆ.
ಕಡಬ ತಾಲೂಕಿನ ಬಲ್ಯ ಗ್ರಾಮದ ಪಟ್ಟೆ ಎಂಬಲ್ಲಿ ಯಶೋಧರ ಗೌಡ ಎಂಬವರಿಗೆ ಸೇರಿದ ಜಾಗದ ತೆಂಗಿನ ತೋಟದಲ್ಲಿ ಕಾಡು ಪ್ರಾಣಿ ಬೇಟೆಯಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಜು.22ರಂದು ಕಾರ್ಯಾಚರಣೆ ನಡೆಸಿ ಕೊಣಾಜೆ ಗ್ರಾಮದ ಅಮ್ಮಾಜೆ ನಿವಾಸಿ ಹೇಮಂತ್(32ವ.), ಕಜಿಪಿತ್ತಲು ನಿವಾಸಿ ವಿಜಯ್(33ವ.) ಹಾಗೂ ಐತ್ತೂರು ಗ್ರಾಮದ ಬೆತ್ತೋಡಿ ನಿವಾಸಿ ಸಾಜಿ ಎ(50ವ.)ಎಂಬವರನ್ನು ಬಂಧಿಸಿ ಪುತ್ತೂರು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳಿಗೆ ಜಾಮೀನು ಮಂಜೂರುಗೊಳಿಸಿ ಆದೇಶಿಸಿದೆ.
ಸುಪ್ರೀಂಕೋರ‍್ಟ್ ಮಾರ್ಗಸೂಚಿ ಪ್ರಕಾರ 7 ವರ್ಷ ಶಿಕ್ಷೆ ವಿಧಿಸಬಹುದಾದ ಪ್ರಕರಣಗಳಿಗೆ ಸಿಆರ್‌ಪಿಸಿ 41 ಎ ಪ್ರಕಾರ ನೋಟಿಸ್ ನೀಡಿ ವಿವರಣೆ ಪಡೆದುಕೊಂಡು ಅಗತ್ಯವಿದ್ದಲ್ಲಿ ಆರೋಪಿಗಳನ್ನು ದಸ್ತಗರಿ ಮಾಡಬಹುದಾಗಿದೆ. ಆದರೆ ಈ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ಸುಪ್ರಿಂಕೋರ‍್ಟ್ ಮಾರ್ಗಸೂಚಿಯನ್ನು ಪಾಲನೆ ಮಾಡದೇ ಇರುವುದರಿಂದ ಆರೋಪಿಗಳಿಗೆ ಮಧ್ಯಂತರ ಜಾಮೀನು ನೀಡಿ ನ್ಯಾಯಾಲಯ ಆದೇಶಿಸಿದೆ. ಆರೋಪಿಗಳ ಪರ ನ್ಯಾಯವಾದಿ ಎಂ.ವೆಂಕಪ್ಪ ಗೌಡ ಸುಳ್ಯ ವಾದಿಸಿದ್ದರು. ಅರಣ್ಯ ಇಲಾಖೆ ಅಧಿಕಾರಿಗಳ ದಾಳಿ ವೇಳೆ ತಪ್ಪಿಸಿಕೊಂಡಿದ್ದ ಕೊಣಾಜೆ ನಿವಾಸಿ ಪ್ರವೀಣ(40ವ.) ಹಾಗೂ ತೋಟದ ಮಾಲೀಕ ಯಶೋಧರ ಗೌಡ(55ವ.) ಅವರ ವಿರುದ್ಧವೂ ಅರಣ್ಯ ಇಲಾಖೆ ಅಧಿಕಾರಿಗಳು ಕೇಸು ದಾಖಲಿಸಿಕೊಂಡಿದ್ದರು.