




ಯಾರೂ ಇಲ್ಲದ ಸಮಯದಲ್ಲಿ ಕ್ಯಾಷ್ ಡ್ರಾಯರ್ ಒಡೆದು ಕೃತ್ಯ
ಪ್ರಯೋಜನಕ್ಕೆ ಬಾರದ ಅಂಗಡಿಯ ಸಿಸಿ ಕ್ಯಾಮರಾ
ವಾಣಿಜ್ಯ ಸಂಕೀರ್ಣಕ್ಕೆ ಸಿಸಿ ಕ್ಯಾಮರಾನೇ ಇಲ್ಲ



ಉಪ್ಪಿನಂಗಡಿ: ಅಂಗಡಿಯಲ್ಲಿ ಯಾರೂ ಇಲ್ಲದ ಹೊತ್ತಿನಲ್ಲಿ ಅಂಗಡಿಯೊಳಗೆ ನುಗ್ಗಿದ ಕಳ್ಳನೋರ್ವ ಅಲ್ಲಿನ ಕ್ಯಾಷ್ ಡ್ರಾಯರ್ನಲ್ಲಿದ್ದ ಐದು ಲಕ್ಷ ರೂಪಾಯಿಯನ್ನು ಎಗರಿಸಿ ಪರಾರಿಯಾದ ಘಟನೆ ಹಾಡಹಗಲೇ ಇಲ್ಲಿನ ಗಾಂಧಿಪಾರ್ಕ್ ಬಳಿ ನಡೆದಿದೆ.






ಇಲ್ಲಿನ ಶ್ರೀ ರಾಮಗೋಪಾಲ್ ಕಾಮತ್ ವಾಣಿಜ್ಯ ಸಂಕೀರ್ಣದಲ್ಲಿರುವ ಅಡಿಕೆ ಮತ್ತು ಕಾಡುತ್ಪತ್ತಿ ವ್ಯಾಪಾರ ಕೇಂದ್ರವಾದ ‘ಗುಂಡಿಜೆ ಟ್ರೇಡರ್ಸ್’ನಲ್ಲಿ ಈ ಘಟನೆ ನಡೆದಿದೆ. ಅ.27ರ ಮಧ್ಯಾಹ್ನ ಸುಮಾರು 12ರ ಸುಮಾರಿಗೆ ಅಂಗಡಿಯಲ್ಲಿದ್ದ ಮಾಲಕ ಕೊಯಿಲ ಗ್ರಾಮದ ವಳಕಡಮ ನಿವಾಸಿ ವಸಂತ ಗುಂಡಿಜೆಯವರು ವಾಣಿಜ್ಯ ಸಂಕೀರ್ಣದ ಹಿಂಬದಿಯಲ್ಲಿರುವ ಶೌಚಾಲಯಕ್ಕೆ ತೆರಳಿದ್ದರು. ಈ ಸಂದರ್ಭ ಅಂಗಡಿಯ ಷಟರ್ ಓಪನೇ ಇಟ್ಟು, ಕ್ಯಾಷ್ ಡ್ರಾಯರ್ಗೆ ಮಾತ್ರ ಬೀಗ ಹಾಕಿದ್ದರು. ವಾಪಸ್ ಬರುವಾಗ ಕ್ಯಾಷ್ ಡ್ರಾಯರ್ನ ಬೀಗ ಒಡೆದು ಅದರೊಳಗಿದ್ದ ಐದು ಲಕ್ಷ ರೂ.ಗಳನ್ನು ಎಗರಿಸಿರುವುದು ಅವರ ಗಮನಕ್ಕೆ ಬಂದಿದೆ.
ಐದು ನಿಮಿಷದಲ್ಲಿ ಕೃತ್ಯ!:
ವಸಂತ ಗುಂಡಿಜೆಯವರು ಶೌಚಾಲಯಕ್ಕೆಂದು ತೆರಳಿದವರು ಸುಮಾರು ಐದು ನಿಮಿಷದಲ್ಲಿ ವಾಪಸಾಗಿದ್ದರು. ಆದರೆ ಅಷ್ಟರಲ್ಲಾಗಲೇ ಕ್ಯಾಷ್ ಡ್ರಾಯರ್ನ ಬೀಗ ಹೊಡೆದು ಕಳ್ಳನಿಗೆ ಹಣ ಎಗರಿಸಿ ಆಗಿದೆ. ಇವರ ಅಂಗಡಿಯ ಎದುರು ಭಾಗದಲ್ಲಿ ಹಾಗೂ ಪಕ್ಕದಲ್ಲಿ ಎಲ್ಲಾ ಅಂಗಡಿಗಳಿದ್ದು, ಆದರೆ ಕಳ್ಳ ಇಲ್ಲಿ ನಿರ್ಭೀತಿಯಿಂದ ತನ್ನ ಕೃತ್ಯ ನಡೆಸಿ ತೆರಳಿದ್ದಾನೆ. ಇದನ್ನು ಗಮನಿಸುವಾಗ ಕೆಲವು ದಿನಗಳಿಂದ ಇವರನ್ನು ಹಿಂಬಾಲಿಸಿ ಇವರ ಚಲನವಲನಗಳನ್ನು ಗಮನಿಸಿದ ವ್ಯಕ್ತಿಯೇ ಈ ಕೃತ್ಯ ನಡೆಸಿರಬಹುದಾದ ಅನುಮಾನವೂ ಇಲ್ಲಿ ವ್ಯಕ್ತವಾಗುತ್ತಿದೆ.
ಪ್ರಯೋಜನಕ್ಕೆ ಬಾರದ ಸಿಸಿ ಕ್ಯಾಮರಾ!:
ಇವರ ಅಂಗಡಿಯೊಳಗೆ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಆದರೆ ಅದಕ್ಕೆ ರೀಚಾರ್ಚ್ ಮಾಡಿರಲಿಲ್ಲ ಹಾಗೂ ಅದರ ಸ್ವಿಚ್ ಅನ್ನು ಕೂಡಾ ಆಫ್ ಮಾಡಲಾಗಿತ್ತಂತೆ. ಇನ್ನೊಂದೆಡೆ ಈ ವಾಣಿಜ್ಯ ಸಂಕೀರ್ಣದಲ್ಲಿ ಸುಮಾರು 10ರಷ್ಟು ಅಂಗಡಿ ಕೋಣೆಗಳಿದ್ದು, ಅವುಗಳನ್ನೆಲ್ಲಾ ಬಾಡಿಗೆಗೆ ಕೊಡಲಾಗಿದೆ. ಆದರೂ ವಾಣಿಜ್ಯ ಸಂಕೀರ್ಣದ ಮಾಲಕರೂ ತನ್ನ ವಾಣಿಜ್ಯ ಸಂಕೀರ್ಣದಲ್ಲಿ ಯಾವುದೇ ಸಿಸಿ ಕ್ಯಾಮರಾ ಅಳವಡಿಸಿರಲಿಲ್ಲ. ಇದೆಲ್ಲವೂ ಕಳ್ಳನಿಗೆ ವರದಾನವಾಗಿ ಪರಿಣಮಿಸಿದೆ. ಇಂದಿನ ಈ ಕಳ್ಳತನ ಅಂಗಡಿ ಮಾಲಕರು ಹಾಗೂ ವಾಣಿಜ್ಯ ಸಂಕೀರ್ಣದ ಮಾಲಕರ ಬೇಜಾವಬ್ದಾರಿಯ ಪರಮಾವಧಿ ಎಂಬ ಅಪಸ್ವರದ ಮಾತುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ.
ಸ್ಥಳಕ್ಕೆ ಪುತ್ತೂರು ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಅರುಣ್ ನಾಗೇಗೌಡ, ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಅವಿನಾಶ್, ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್, ಸಾರ್ವಜನಿಕರಿಂದ ತರಾಟೆ
ಕಳ್ಳತನ ತಡೆಗಟ್ಟುವ ಸಲುವಾಗಿ ಮತ್ತು ಕಳ್ಳರನ್ನು ಹಿಡಿಯಲ ಅನುಕೂಲವಾಗುವ ನಿಟ್ಟಿನಲ್ಲಿ ಅಂಗಡಿ ಮಾಲಕರು ಸಿಸಿ ಕ್ಯಾಮರಾ ಅಳವಡಿಸುವ ಬಗ್ಗೆ ಪೊಲೀಸ್ ಇಲಾಖೆಯು ಆಗಾಗ್ಗೆ ಮನವಿ ಮಾಡುತ್ತಲೇ ಬರುತ್ತಿದೆ. ಆದರೆ ಪೊಲೀಸರ ಮಾತಿಗೆ ಕೆಲವರು ಮನ್ನಣೆ ಕೊಡುತ್ತಿಲ್ಲ. ಇಲ್ಲಿಯೂ ಕೂಡಾ ಈ ವಾಣಿಜ್ಯ ಸಂಕೀರ್ಣಕ್ಕೆ ಸಿಸಿ ಕ್ಯಾಮರಾ ಅಳವಡಿಸಿರಲಿಲ್ಲ. ಈ ಬಗ್ಗೆ ವಾಣಿಜ್ಯ ಸಂಕೀರ್ಣದ ಮಾಲಕರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡರು.









