ಪುತ್ತೂರು:ಕಬಕ ಸರಕಾರಿ ಪ್ರೌಢಶಾಲೆಯಲ್ಲಿ ಪೋಕ್ಸೋ ಕಾಯ್ದೆ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಜು.25ರಂದು ಜರುಗಿತು.
ಪುತ್ತೂರಿನ ವಕೀಲೆ ಹರಿಣಾಕ್ಷಿ ಜೆ.ಶೆಟ್ಟಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪ್ರತಿಯೊಂದು ಮಗು ಸಮಾಜದಲ್ಲಿ ಯಾವುದೇ ತೊಂದರೆ ತಾಪತ್ರಯಗಳಿಲ್ಲದೆ ಬದುಕುವ ವಾತಾವರಣ ನಿರ್ಮಾಣವಾಗಬೇಕೆನ್ನುವುದು ವಿಶ್ವ ಸಂಸ್ಥೆಯ ಆಶಯವಾಗಿದ್ದು ಕೆಲವೊಂದು ಸಂದರ್ಭದಲ್ಲಿ ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಂದಿರುವ ಕಾಯ್ದೆಯೇ ಪೋಕ್ಸೋ ಕಾಯ್ದೆ.ಇದನ್ನು ಪ್ರತಿಯೊಬ್ಬರೂ ಅರಿತು ಮಕ್ಕಳ ಬಾಳು ಹಸನಾಗಿಸುವಲ್ಲಿ ಕಾರ್ಯ ಪ್ರವೃತ್ತರಾಗಿ ಸ್ವಾಸ್ಥ್ಯ ಸಮಾಜ ನಿರ್ಮಾಣವಾಗುವಲ್ಲಿ ಸಹಕಾರಿಗಳಾಗಬೇಕು ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಮುಖ್ಯ ಶಿಕ್ಷಕಿ ಸುರೇಖ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ವಿಜ್ಞಾನ ಶಿಕ್ಷಕಿ ಸುಮಿತ್ರ ಸ್ವಾಗತಿಸಿದರು.ದೈಹಿಕ ಶಿಕ್ಷಣ ಶಿಕ್ಷಕರಾದ ಕೃಷ್ಣಯ್ಯ.ಕೆ.ಧನ್ಯವಾದವಿತ್ತರು.ಕನ್ನಡ ಭಾಷಾ ಶಿಕ್ಷಕಿ ಶಾಂತಾ ಕಾರ್ಯಕ್ರಮ ನಿರೂಪಿಸಿದರು.ಹಿಂದಿ ಭಾಷಾ ಶಿಕ್ಷಕಿ ಸೌಮ್ಯ, ಸಮಾಜವಿಜ್ಞಾನ ಶಿಕ್ಷಕಿ ಸ್ವಪ್ನ ಸಹಕರಿಸಿದರು.