-ಸೈನಿಕರ ಕೆಚ್ಚೆದೆಯ ಧೈರ್ಯಕ್ಕೆ ತಲೆ ಬಾಗಲೇಬೇಕು-ಡಾ.ಶ್ಯಾಂ
-ತ್ರಿವರ್ಣ ಧ್ವಜದೊಂದಿಗೆ ವಿಜಯ ಸಾರಿದ ಸೈನಿಕರಿಗೆ ಸೆಲ್ಯೂಟ್-ಸುರೇಶ್ ಶೆಟ್ಟಿ
-ಬದುಕಿರುವ ತನಕ ಸೈನಿಕನಿಗೆ ದೇಶಸೇವೆಯದ್ದೇ ಮನಸ್ಸು-ಸುಂದರ್ ಗೌಡ
-ಸೈನಿಕನಾಗಬೇಕು ಎನ್ನುವ ಕನಸು ಹೊತ್ತವನು ನಾನು-ಗಣೇಶ್ ಶೆಟ್ಟಿ
ಪುತ್ತೂರು: ಜು.26ರಂದು ಭಾರತದಾದ್ಯಂತ ಕಾರ್ಗಿಲ್ ವಿಜಯೋತ್ಸವದ 25ನೇ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ದರ್ಬೆ ಬುಶ್ರಾ ಕಾಂಪ್ಲೆಕ್ಸ್ನಲ್ಲಿ ಕಳೆದ 28 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಪಾದರಕ್ಷೆ ಮಳಿಗೆ ನಯಾ ಚಪ್ಪಲ್ ಬಜಾರ್ ಸಂಸ್ಥೆಯ ವತಿಯಿಂದ ಈರ್ವರು ನಿವೃತ್ತ ಯೋಧರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸೈನಿಕರ ಕೆಚ್ಚೆದೆಯ ಧೈರ್ಯಕ್ಕೆ ತಲೆ ಬಾಗಲೇಬೇಕು-ಡಾ.ಶ್ಯಾಂ:
ಈರ್ವರು ಯೋಧರನ್ನು ಶಾಲು ಹೊದಿಸುವ ಮೂಲಕ ಸನ್ಮಾನಿಸಿ ಗೌರವಾರ್ಪಣೆ ಸಲ್ಲಿಸಿ ಮಾತನಾಡಿದ ರೋಟರಿ ಕ್ಲಬ್ ಪುತ್ತೂರು ಮಾಜಿ ಅಧ್ಯಕ್ಷರಾದ ಆದರ್ಶ ಆಸ್ಪತ್ರೆಯ ವೈದ್ಯ ಡಾ.ಶ್ಯಾಂರವರು, ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರು ಕಾರ್ಗಿಲ್ ಯುದ್ಧವನ್ನು ವಿಜಯಿ ದಿವಸ್ ಘೋಷಣೆ ಮಾಡಿ ಇಂದಿಗೆ ಇಪ್ಪತ್ತೈದು ವರ್ಷಗಳಾಯಿತು. ಮೈನಸ್ ಡಿಗ್ರಿಯಲ್ಲಿ ಆ ಕೊರೆವ ಚಳಿಯಲ್ಲಿ ಎದುರಾಳಿ ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸುವುದು ಅಷ್ಟೊಂದು ಸುಲಭವಲ್ಲ. ಆದರೂ ನಮ್ಮ ಸೈನಿಕರ ಕೆಚ್ಚೆದೆಯ ಧೈರ್ಯಕ್ಕೆ ನಾವು ತಲೆ ಬಾಗಲೇಬೇಕು. ನಯಾ ಚಪ್ಪಲ್ ಬಜಾರ್ ಮಾಲಕ ಎಂ.ಜಿ ರಫೀಕ್ರವರು ಕಾರ್ಗಿಲ್ ವಿಜಯೋತ್ಸವದ ಸಂದರ್ಭ ಸೈನಿಕರನ್ನು ಸನ್ಮಾನಿಸಿರುವುದು ಶ್ಲಾಘನೀಯ ಎಂದರು.
ತ್ರಿವರ್ಣ ಧ್ವಜವನ್ನು ಹಾರಿಸಿ ವಿಜಯವನ್ನು ಸಾರಿದ ಸೈನಿಕರಿಗೆ ಸೆಲ್ಯೂಟ್-ಸುರೇಶ್ ಶೆಟ್ಟಿ:
ರೋಟರಿ ಕ್ಲಬ್ ಪುತ್ತೂರು ಹಿರಿಯ ಸದಸ್ಯ ಸುರೇಶ್ ಶೆಟ್ಟಿರವರು ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ನಾಲ್ಕು ಮಹಾಯುದ್ಧ, ಮೂರು ಸಣ್ಣ ಯುದ್ಧಗಳನ್ನು ಕಂಡಿದೆ. ಕಾರ್ಗಿಲ್ ಯುದ್ಧದಲ್ಲಿ ನಮ್ಮ ಸೈನಿಕರು ಸುಮಾರು 16500 ಸಾವಿರ ಅಡಿ ಎತ್ತರದಲ್ಲಿ ಅದರಲ್ಲೂ ಕೊರೆಯುವಂತಹ ಚಳಿಯಲ್ಲಿ ಯುದ್ದ ಮಾಡಿ ಅಪಾರ ಸಾವು-ನೋವು ಸಂಭವಿಸಿದರೂ ಕೊನೆಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ವಿಜಯವನ್ನು ಸಾರಿದ್ದು ನಮ್ಮ ಸೈನಿಕರಿಗೆ ಸೆಲ್ಯೂಟ್ ಹೊಡೆಯಬೇಕಾಗಿದೆ ಎಂದರು.
ಬದುಕಿರುವ ತನಕ ಸೈನಿಕನಿಗೆ ದೇಶಸೇವೆಯದ್ದೇ ಮನಸ್ಸು-ಸುಂದರ್ ಗೌಡ:
ಸನ್ಮಾನಿತ ನಿವೃತ್ತ ಯೋಧ ಸುಂದರ್ ಗೌಡ ನರಿಮೊಗರು ಮಾತನಾಡಿ, ಸೈನಿಕ ಏನನ್ನೂ ಕೇಳುವುದಿಲ್ಲ. ಬದುಕಿರುವ ತನಕ ಸೈನಿಕನಿಗೆ ದೇಶಸೇವೆಯದ್ದೇ ಮನಸ್ಸು ಬರುವುದು. ಕಾರ್ಗಿಲ್ ಯುದ್ಧದಲ್ಲಿ ಸುಮಾರು 527 ಮಂದಿ ಹುತಾತ್ಮರಾಗಿದ್ದಾರೆ, ಸಾವಿರಾರು ಮಂದಿ ಗಾಯಗೊಂಡಿದ್ದಾರೆ. ಭಾರತದ ಭೂಭಾಗವನ್ನು ವಶಪಡಿಸಿ ಎದುರಾಳಿ ಪಾಕಿಸ್ತಾನಿ ಸೈನಿಕರನ್ನು ಹೊಡೆದೋಡಿಸಿರುವುದು ನಮ್ಮ ಯೋಧರಿಗೆ ಖುಶಿಯ ವಿಚಾರವಾಗಿದೆ. ಇತ್ತೀಚೆಗೆ ಶೀರೂರಿನಲ್ಲಿ ನಡೆದ ದುರಂತದಲ್ಲಿಯೂ ನಮ್ಮ ಸೈನಿಕರು ನೆರವಿನ ಹಸ್ತವನ್ನು ಚಾಚಿದ್ದಾರೆ ಎಂದರು.
ಸೈನಿಕನಾಗಬೇಕು ಎನ್ನುವ ಕನಸು ಹೊತ್ತವನು ನಾನು-ಗಣೇಶ್ ಶೆಟ್ಟಿ:
ಮತ್ತೋರ್ವ ಸನ್ಮಾನಿತ ನಿವೃತ್ತ ಯೋಧ ಗಣೇಶ್ ಶೆಟ್ಟಿ ಉಪ್ಪಿನಂಗಡಿ ಮಾತನಾಡಿ, ಕಾರ್ಗಿಲ್ ಯುದ್ಧದಿಂದ ಪ್ರೇರೇಪಿತನಾಗಿ ನಾನು ಸೇನೆಗೆ ಸೇರಿದವನಾಗಿದ್ದೇನೆ. ಎಲ್ಲರೂ ಡಾಕ್ಟರ್, ಇಂಜಿನಿಯರ್ ಆಗಬೇಕು ಎನ್ನು ಕನಸು ಕಾಣುವವರೇ. ಆದರೆ ಡಾಕ್ಟರ್, ಇಂಜಿನಿಯರ್ ಆಗಲು ಸಾಕಷ್ಟು ಹಣದ ಅವಶ್ಯಕತೆ ಬೇಕು. ಆದರೆ ಬಡತನದ ಹಿನ್ನೆಲೆಯಲ್ಲಿ ಬಂದಂತಹ ನನಗೆ ಸೈನಿಕನಾಗಬೇಕು ಎನ್ನುವ ಕನಸಿನೊಂದಿಗೆ ಯಾರ ಪ್ರಭಾವ ಬೀರದೆ ಸೈನಿಕನಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಸೈನಿಕ ಸಮವಸ್ತ್ರ ನೋಡಿದಾಗ ಇಂದಿಗೂ ನನಗೆ ಹೆಮ್ಮೆ ಎನಿಸುತ್ತದೆ ಎಂದರು.
ಗೌರವ:
ಈ ಸಂದರ್ಭದಲ್ಲಿ ಅಂತರ್ರಾಷ್ಟ್ರೀಯ ರೋಟರಿ ಸಂಸ್ಥೆಯ ವರದಿಗಳನ್ನು ಸಕಾಲವಾಗಿ ಸುದ್ದಿ ಪತ್ರಿಕೆಯಲ್ಲಿ ಪ್ರಕಟಿಸುತ್ತಿರುವ ಪತ್ರಕರ್ತ ಸಂತೋಷ್ ಮೊಟ್ಟೆತ್ತಡ್ಕರವರನ್ನುಗೌರವಿಸಲಾಯಿತು.
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಡಾ.ಶ್ರೀಪತಿ ರಾವ್, ಕಾರ್ಯದರ್ಶಿ ದಾಮೋದರ್, ಎ.ಜೆ ರೈ, ವಾಮನ್ ಪೈ, ಸುಜಿತ್ ಡಿ.ರೈ, ಮನೋಜ್ ಟಿ.ವಿ, ಪರಮೇಶ್ವರ್ ಗೌಡ, ಶ್ರೀಧರ್ ಗೌಡ ಕಣಜಾಲು, ದತ್ತಾತ್ರೇಯ ರಾವ್, ಪ್ರೇಮಾನಂದ ಡಿ, ಸುದರ್ಶನ್ ರಾವ್, ರವೀಂದ್ರನ್, ಎಂ.ಜಿ ರೈ, ಡಾ.ಅಶೋಕ್ ಪಡಿವಾಳ್, ಸಂಕಪ್ಪ ರೈ, ಬಾಲಕೃಷ್ಣ ಆಚಾರ್ಯ, ಗುರುರಾಜ್, ಬಾಲಕೃಷ್ಣ ಕೊಳತ್ತಾಯ, ರೋಟರ್ಯಾಕ್ಟ್ ಪುತ್ತೂರು ಅಧ್ಯಕ್ಷ ಸುಬ್ರಮಣಿ, ಮಾಜಿ ಅಧ್ಯಕ್ಷ ಗಣೇಶ್ ಕಲ್ಲರ್ಪೆ, ನಯಾ ಚಪ್ಪಲ್ ಬಜಾರ್ ಪಾಲುದಾರ ಸಿದ್ಧೀಕ್ ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಯಾ ಚಪ್ಪಲ್ ಬಜಾರ್ ಸಂಸ್ಥೆಯ ಪಾಲುದಾರ ರಫೀಕ್ ಎಂ.ಜಿ ಸ್ವಾಗತಿಸಿ, ಸಿಬ್ಬಂದಿ ಸುಮಲತಾ ವಂದಿಸಿದರು. ರೋಟರಿ ಸದಸ್ಯ ಚಿದಾನಂದ ಬೈಲಾಡಿ ಕಾರ್ಯಕ್ರಮ ನಿರೂಪಿಸಿದರು. ನಯಾ ಚಪ್ಪಲ್ ಬಜಾರ್ ಮ್ಯಾನೇಜರ್ ಪ್ರಶಾಂತ್ ಹಾಗೂ ಸಿಬ್ಬಂದಿ ಸಹಕರಿಸಿದರು.
ನಿವೃತ್ತ ಯೋಧರಿಗೆ ಗೌರವಾರ್ಪಣಾ ಸನ್ಮಾನ..
1981ರಲ್ಲಿ ಭಾರತೀಯ ಸೈನ್ಯದ ಇಂಡಿಯನ್ ಆರ್ಮ್ಡ್ ಫೋರ್ಸ್ಗೆ ಸೇರ್ಪಡೆಗೊಂಡು ವಿವಿಧ ಕಡೆಗಳಲ್ಲಿ ಸೈನಿಕ ಸೇವೆ ಸಲ್ಲಿಸಿ 2001ರಲ್ಲಿ ಹವಾಲ್ದಾರ್ ಮೇಜರ್ ಹುದ್ದೆಯಿಂದ ಸ್ವಯಂ ನಿವೃತ್ತಿಗೊಂಡಿದ್ದು ಮಾತ್ರವಲ್ಲ ರೋಟರಿ ಪುತ್ತೂರು ಸದಸ್ಯರೂ ಆಗಿರುವ ಸುಂದರ ಗೌಡ ನರಿಮೊಗರು ಹಾಗೂ 2004ರಲ್ಲಿ ಭಾರತೀಯ ಭೂ ಸೇನೆಗೆ ಸೇರ್ಪಡೆಗೊಂಡು ಬಳಿಕ ವಿವಿಧ ಕಡೆಗಳಲ್ಲಿ ಸೇವೆ ಸಲ್ಲಿಸಿ 2024ರಲ್ಲಿ ಸ್ವಯಂ ನಿವೃತ್ತಿ ಪಡೆದುಕೊಂಡಿರುವ ಗಣೇಶ್ ಶೆಟ್ಟಿ ಉಪ್ಪಿನಂಗಡಿಯವರನ್ನು ಗುರುತಿಸಿ ಸನ್ಮಾನಗೊಳಿಸುವ ಮೂಲಕ ಗೌರವಾರ್ಪಣೆ ಸಲ್ಲಿಸಲಾಯಿತು.
ಅಂಗನವಾಡಿ ಮಕ್ಕಳಿಗೆ ಚಪ್ಪಲ್ ಕೊಡುಗೆ..
ಈ ಸಂದರ್ಭದಲ್ಲಿ ನಯಾ ಚಪ್ಪಲ್ ಬಜಾರ್ ವತಿಯಿಂದ ಮಂಜಲ್ಪಡ್ಪು ಅಂಗನವಾಡಿಯ ಎಲ್ಲಾ ಮಕ್ಕಳಿಗೆ ಚಪ್ಪಲ್ ಕೊಡುಗೆಯನ್ನು ನೀಡಲಾಗಿದ್ದು ಈ ಕೊಡುಗೆಯನ್ನು ಅಂಗನವಾಡಿ ಶಿಕ್ಷಕಿ ಕುಸುಮರವರಿಗೆ ರೋಟರಿ ಪುತ್ತೂರು ಮಾಜಿ ಅಧ್ಯಕ್ಷ ಡಾ.ಶ್ಯಾಂರವರು ಹಸ್ತಾಂತರಿಸಿದರು.