ವಿವೇಕಾನಂದ ವಿದ್ಯಾಸಂಸ್ಥೆಗಳಿಂದ ಕಾರ್ಗಿಲ್ ವಿಜಯೋತ್ಸವ-ಯೋಧ ನಮನ

0

ಸುಖ ಜೀವನ, ಹಣಕ್ಕಿಂತ ದೇಶ ದೊಡ್ಡದು – ಲೆ. ಕ. ಅಶೋಕ್ ಕಿಣಿ

40 ಪೋಷಕ ಯೋಧರಿಗೆ ಸನ್ಮಾನ

ಕಾರ್ಯಕ್ರಮದಲ್ಲಿ ನಿವೃತ್ತ ಸೈನಿಕರೂ, ಹಾಲಿ ಸೈನಿಕರೂ ಸೇರಿದಂತೆ ವಿವೇಕಾನಂದ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳ ಪೋಷಕರಾಗಿರುವ 40 ಯೋಧರಿಗೆ ಸನ್ಮಾನ ನಡೆದಿರುವುದು ವಿಶೇಷ ಗಮನಸೆಳೆಯಿತು.

ಪುತ್ತೂರು: ಜನ್ಮ ನೀಡಿದ ಭೂಮಿಯನ್ನು ಸ್ವರ್ಗಕ್ಕಿಂತ ಮೇಲು ಎಂದು ಭಾವಿಸುವ ನಾವು ಸುಖದ ಜೀವನ, ಸಂಪತ್ತು ಗಳಿಸುವುದಕ್ಕಿಂತ ದೇಶ ದೊಡ್ಡದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಂತಹ ದೇಶವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಕೇವಲ ಸೈನಿಕರಲ್ಲದೇ ನಮ್ಮೆಲ್ಲರಲ್ಲಿದೆ ಎಂದು, ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರವರ ರಕ್ಷಣಾಪಡೆಯಲ್ಲಿ ಅಽಕಾರಿಯಾಗಿದ್ದ, ಕೇಂದ್ರದ ರಕ್ಷಣಾ ರಾಜ್ಯ ಸಚಿವರ ಮಾಜಿ ಭದ್ರತಾ ಸಲಹೆಗಾರ ಲೆ.ಕ. ಅಶೋಕ್ ಕಿಣಿ ಎಚ್. ಹೇಳಿದರು.

ಪುತ್ತೂರಿನ ತೆಂಕಿಲ ವಿವೇಕನಗರ ವಿವೇಕಾನಂದ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ ಯೋಧ ನಮನ ಕಾರ್ಯಕ್ರಮದಲ್ಲಿ ಅವರು ಪ್ರಧಾನ ವಕ್ತಾರರಾಗಿ ಮಾತನಾಡಿದರು.
ಕಾರ್ಗಿಲ್ ಕದನದ ವೇಳೆ ತಮ್ಮೆಲ್ಲಾ ಪ್ರಾಪಂಚಿಕ ಜೀವನವನ್ನು ಮರೆತು ನಮ್ಮ ಸೈನಿಕರು ಬಲಿದಾನವಾಗಿದ್ದಾರೆ. ಇಂದು ವಿವೇಕಾನಂದ ವಿದ್ಯಾಸಂಸ್ಥೆಗಳಿಂದ ನಡೆದಿರುವ ಈ ಕಾರ್ಯಕ್ರಮದಿಂದ ಅವರ ಆತ್ಮಕ್ಕೆ ಶಾಶ್ವತ ಶಾಂತಿ ಸಿಗಬಹುದೆಂಬ ನಂಬಿಕೆ ನನ್ನಲ್ಲಿದೆ ಎಂದ ಅವರು ದಕ್ಷಿಣ ಭಾರತದಲ್ಲಿ ಗಡಿಪ್ರದೇಶಗಳು ಇಲ್ಲದಿರುವುದರಿಂದ ನಮಗೆ ಗಡಿಭಾಗದ ಯೋಧರ ಮಹತ್ವ ತಿಳಿದಿಲ್ಲ. ಆದರೆ ಅವರನ್ನು ಸ್ಮರಿಸಿ ಗೌರವಿಸುವ ಕಾರ್ಯ ವಿವೇಕಾನಂದ ವಿದ್ಯಾಸಂಸ್ಥೆಯ ವತಿಯಿಂದ ಆಗಿರುವುದು ಹೆಮ್ಮೆ ಎನಿಸಿದೆ. ದೆಹಲಿಯಲ್ಲಿ ಕಾರ್ಗಿಲ್ ವಿಜಯೋತ್ಸವ ಆಚರಣೆ ಇದ್ದರೂ ಮಕ್ಕಳೊಡನೆ ಸಂವಾದ ನಡೆಸುವ ಅವಕಾಶ ದೊರೆತಿರುವುದರಿಂದ ಇಲ್ಲಿ ಬಂದಿದ್ದೇನೆ ಎಂದರು.

ಅಬ್ದುಲ್ ಕಲಾಂರನ್ನು ನೆನಪಿಸಿದ ಕಿಣಿ: ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂರವರ ದಾರ್ಶನಿಕತೆಯನ್ನು ನೆನಪಿಸಿಕೊಂಡ ಅಶೋಕ್ ರವರು ಅವರ ಸರಳ ಜೀವನ ನಮಗೆ ಆದರ್ಶ. ದೊಡ್ಡ ಗುರಿಯನ್ನು ಹೊಂದಿ ಅದರ ಹಿಂದೆ ಸಾಗಿ ಎಂಬ ಅವರ ಸಂದೇಶ ಸದಾ ಪ್ರಸ್ತುತ. ಲಕ್ಷ್ಮಿಗಿಂತ ಮೊದಲು ಸರಸ್ವತಿ ಬರಬೇಕೇಂಬ ಅವರ ಆಶಯವನ್ನು ಮುಂದಿನ ಜನಾಂಗವಾದ ನೀವೆಲ್ಲಾ ನೆರವೇರಿಸಿಕೊಡಬೇಕು ಎಂದರು.

ದೇಶದ ಅಭಿವೃದ್ಧಿಗೆ ತೊಡಕಾಗಿರುವ ಭ್ರಷ್ಟಾಚಾರವನ್ನು ಹೋಗಲಾಡಿಸಬೇಕಾದರೆ ಅಪ್ಪ, ಅಮ್ಮ ಮತ್ತು ಪ್ರೈಮರಿ ಸ್ಕೂಲ್ ಟೀಚರ್‌ಗೆ ಮಾತ್ರ ಸಾಧ್ಯ ಎಂದ ಕಿಣಿಯವರು, ಮಕ್ಕಳಲ್ಲಿ ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಜ್ಞಾನ್ ಎಂದು ಘೋಷಿಸಿದರು. ರಾಮನಾಮ ಜಪಿಸಲು ಕರೆ ನೀಡಿದರು.

ಸಭಾಧ್ಯಕ್ಷತೆ ವಹಿಸಿದ್ದ ಪುಣಚ ಶ್ರೀದೇವಿ ವಿದ್ಯಾಕೇಂದ್ರದ ಅಧ್ಯಕ್ಷ ಜಯಶ್ಯಾಮ ನೀರ್ಕಜೆಯವರು ಮಾತನಾಡಿ, ದೇಶ ಸೋಲಬಾರದೆಂಬ ಜಾಗೃತಿ ಸದಾ ನಮ್ಮಲ್ಲಿದ್ದರೆ ಎಂದಿಗೂ ದೇಶ ಸೋಲುವುದಿಲ್ಲ. ವೈರಿ ರಾಷ್ಟ್ರಗಳು ನಮ್ಮನ್ನು ಕೆಟ್ಟ ಸ್ಥಿತಿಯಲ್ಲಿ ನೋಡುವಂತಾಗಬಾರದು. ಅಂತಹ ಪುಣ್ಯಭೂಮಿ ಭಾರತವನ್ನು ಸದಾ ಕಾಪಾಡಿಕೊಳ್ಳಲು ನಾವೆಲ್ಲಾ ತಯಾರಾಗಬೇಕಿರಬೇಕು ಎಂದರು.
ವೇದಿಕೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಧ್ಯಕ್ಷ ರಮೇಶ್‌ಚಂದ್ರ, ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ, ನರೇಂದ್ರ ಪದವಿಪೂರ್ವ ಕಾಲೇಜಿನ ಅಧ್ಯಕ್ಷ ಶ್ರೀಕಾಂತ್ ಕೊಳತ್ತಾಯರವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿ ಪದಾಽಕಾರಿಗಳು, ಮುಖ್ಯಶಿಕ್ಷಕರು, ಉಪನ್ಯಾಸಕರುಗಳು, ವಿದ್ಯಾರ್ಥಿವೃಂದ ಪಾಲ್ಗೊಂಡರು.

ಯೋಧರಿಗೆ ಸನ್ಮಾನ: ಲೆ.ಕ. ಅಶೋಕ್ ಕಿಣಿಯವರಿಗೆ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇದೇ ವೇಳೆ 40 ಯೋಧರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಸೈನಿಕರಾದ ನಾರಾಯಣ ನಾಯ್ಕ ಅರಂಬೂರು, ಜಯಂತ ಗೌಡ ಪರನೀರು, ಮೋಹನ್ ಗೌಡ ಕೆ., ಸಾರ್ಜೆಂಟ್ ಗಣೇಶ್ ಡಿ.ಎಸ್., ಉದಯಶಂಕರ, ಭವಿಷ್, ಬಾಲಕೃಷ್ಣ, ದೇರ್ಲ ಅಮ್ಮಣ್ಣ ರೈ, ಚಂದ್ರಹಾಸ, ದಿ. ಪಿ.ಕೆ. ಜಗದೀಶ್ ರವರ ಪರವಾಗಿ ಅವರ ಪತ್ನಿ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ನಿವೃತ್ತ ಶಿಕ್ಷಕಿ ಮೋಹಿನಿ, ಜಗನ್ನಾಥ ರೈ ರವರ ಪರವಾಗಿ ಅವರ ಪತ್ನಿ ಸೀಮಾ ಜೆ. ರೈ, ಯಶೋಧರ ಶೆಟ್ಟಿ, ಡಿ. ಸುಂದರ ಪೂಜಾರಿ, ಸುಬೇದಾರ್ ಮಹೇಶ್ ಟಿ., ರಘು ಕೆ.ಸಿ., ಜಯರಾಮ್, ಕೃಷ್ಣಯ್ಯ, ಡಾ. ಪವನ್ ಕೃಷ್ಣ ಎಚ್. ಸುರೇಶ್ ಬಾಬು, ಜಯಕುಮಾರ್ ಪಿ., ಕೆ. ಸುಂದರ್, ಜಯರಾಮ ಗೌಡ ಬಿ., ಚಿಂತನ್, ಮೋನಪ್ಪ, ಮೋಹನ್ ಗೌಡ, ಬಾಲಚಂದ್ರ ಗೌಡ, ಕಿಶೋರ್ ಬಿಳಿನೆಲೆ, ಗೋಪಾಲ ಯು., ಹರಿಪ್ರಶಾಂತ್, ಭವನ್, ಕೊರಗಪ್ಪ, ಹರೀಶ್ಚಂದ್ರ, ಕಿಶೋರ್ ಮಾವಾಜಿ, ಚೆನ್ನಪ್ಪ ಪೂಜಾರಿ, ಸುಂದರ ಕೆ., ಶೇಷಪ್ಪ ಗೌಡ, ಈಶ್ವರ ನಾಯ್ಕ್, ಮೋಹನ್‌ದಾಸ್, ರವಿಚಂದ್ರ ಬಿ.ಎಸ್. ಹಾಗೂ ಲೋಕೇಂದ್ರ ಗೌಡರವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ವಿವರವನ್ನು ಶಿಕ್ಷಕರಾದ ಭುವನೇಶ್ವರಿ ಹಾಗೂ ವೆಂಕಟೇಶ್‌ಪ್ರಸಾದ್ ವಾಚಿಸಿದರು.

ಸಭಾ ಕಾರ್ಯಕ್ರಮಕ್ಕೆ ಮೊದಲು ಅತಿಥಿಗಳು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು, ಕಾರ್ಗಿಲ್ ಕದನದಲ್ಲಿ ಹುತಾತ್ಮರಾದ ವೀರ ಯೋಧರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು.
ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಡಾ. ಶಿವಪ್ರಕಾಶ್ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯಶಿಕ್ಷಕಿ ಆಶಾ ಬೆಳ್ಳಾರೆ ವಂದಿಸಿದರು.

ಸುಪ್ರಜಾ ರಾವ್ ವೈಯುಕ್ತಿಕ ಗೀತೆ ಹಾಡಿದರು. ಶಿಕ್ಷಕಿ ಶಿವಾನಿ ಗಣಪತಿ ಯೋಧನಮನ ಕುರಿತಾದ ಸ್ವರಚಿತ ಕವನ ವಾಚಿಸಿದರು. ಸನ್ಮಾನಿತ ಲೆ.ಕ. ಅಶೋಕ್ ಕಿಣಿಯವರ ಸನ್ಮಾನಪತ್ರವನ್ನು ವಿವೇಕಾನಂದ ಬಿ.ಎಡ್ ಕಾಲೇಜಿನ ಪ್ರಾಧ್ಯಾಪಕಿ ಅನುರಾಧಾ ವಾಚಿಸಿದರು.

ನರೇಂದ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರಾದ ಅಗಮ್ಯ, ಆಕಾಂಕ್ಷಿ, ಸಿಂಚನಾ, ಸಿಂಚನಾ ಕೆ.ಎಸ್., ತನ್ಮಯಿ ಸರಸ್ವತಿ ವಂದನೆ ಹಾಡಿದರು.
ಶಿಕ್ಷಕರಾದ ಗಣೇಶ್ ಏತಡ್ಕ ಮತ್ತು ಸೌಮ್ಯ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕವೃಂದ ವಿವಿಧ ರೀತಿಯಲ್ಲಿ ಸಹಕರಿಸಿದರು. ಬ್ಯಾಂಡ್ ವಾದ್ಯ, ಸ್ಕೌಟ್ ಗೈಡ್ಸ್, ಎನ್‌ಸಿಸಿ ಮಕ್ಕಳ ಪಥಸಂಚಲನದೊಂದಿಗೆ ಅತಿಥಿಗಳನ್ನು ಬರಮಾಡಿಕೊಳ್ಳಲಾಯಿತು.
ದೇಶಭಕ್ತಿ ಗಾನಸುಧೆ: ಸಭಾ ಕಾರ್ಯಕ್ರಮದ ಬಳಿಕ ಪುತ್ತೂರು ಜಗದೀಶ್ ಆಚಾರ್ಯ ಮತ್ತು ಬಳಗದವರಿಂದ ‘ದೇಶಭಕ್ತಿ ಗಾನಸುಧೆ’ ಕಾರ್ಯಕ್ರಮ ಜರಗಿತು.

ಮನೆಯವರಿಗೆ ದುಃಖವಾಗದ ರೀತಿಯಲ್ಲಿ ಮಾಡಿದ್ದೇವೆ..

ಕಾರ್ಗಿಲ್ ಕದನದ ಅಂದಿನ ಪರಿಸ್ಥಿತಿಯನ್ನು ಸಭೆಯ ಮುಂದೆ ತೆರೆದಿಟ್ಟ ಅಶೋಕ್ ಕಿಣಿಯವರು ಕದನದ ದಿನಂಪ್ರತಿ ಹುತಾತ್ಮ ಯೋಧರ ಮೃತದೇಹಗಳು ಬರುತ್ತಿದ್ದವು. ದಿನಕ್ಕೆ 40 ಮೃತದೇಹಗಳು ಬಂದದ್ದೂ ಇದೆ. ಆದರೆ ಆ ಮೃತದೇಹಗಳನ್ನು ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಸಕಲ ಗೌರವಾದರಗಳೊಂದಿಗೆ ಅವರ ಹುಟ್ಟೂರುಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಿದ್ದೇವು. ಹುತಾತ್ಮ ಯೋಧರ ಮನೆಯವರು ದುಃಖಭರಿತರಾಗಬಾರದೆಂಬ ಉದ್ದೇಶ ನಮ್ಮಲ್ಲಿತ್ತು ಎಂದರು.

LEAVE A REPLY

Please enter your comment!
Please enter your name here