ಪುತ್ತೂರು: ಉಪ್ಪಿನಂಗಡಿಯ ವೇದಶಂಕರ ನಗರದ ಶ್ರೀರಾಮ ಶಾಲೆಯ ಮಕ್ಕಳಿಗೆ ಭತ್ತ ಬೇಸಾಯದ ಅನುಭವ ನೀಡುವ ಉದ್ದೇಶದಿಂದ ಭತ್ತ ನಾಟಿ ಕಾರ್ಯಕ್ರಮ ಜು.27ರಂದು ಉಪ್ಪಿನಂಗಡಿಯ ಮುಳಿಯದಲ್ಲಿ ನಡೆಸಲಾಯಿತು. ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಜಯಪ್ರಸಾದ್ ಕಡಮ್ಮಾಜೆ ಕಾರ್ಯಕ್ರಮ ಉದ್ಘಾಟಿಸಿದರು.
ಅಮೂಲ್ಯ ಗ್ಯಾಸ್ ಏಜೆನ್ಸಿ ಮಾಲಕರಾಗಿರುವ ಮಾಜಿ ಸೈನಿಕ ಚಂದಪ್ಪ ಮೂಲ್ಯ ಮಕ್ಕಳಿಗೆ ಭತ್ತ ಬೇಸಾಯದ ಅನಿವಾರ್ಯತೆಯ ಬಗ್ಗೆ ವಿವರಿಸಿದರು. ಸುನಿಲ್ ಅಣಾವು ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲೆಯ ಸಂಚಾಲಕ ಯು. ಜಿ.ರಾಧ, ಉಪಾಧ್ಯಕ್ಷೆ ಅನುರಾಧ ಆರ್. ಶೆಟ್ಟಿ, ಸದಸ್ಯರಾದ ಗುಣಕರ ಅಗ್ನಾಡಿ, ಜಯಂತ್ ಪೊರೋಳಿ, ಪೋಷಕ ಸಂಘದ ಅಧ್ಯಕ್ಷ ಉದಯ ಅತ್ರಮಜಲು, ಮಾತೃಭಾರತಿಯ ಅಧ್ಯಕ್ಷೆ ಸಂಧ್ಯಾಪ್ರಭಾ, ಇಂದ್ರಪ್ರಸ್ಥ ವಿದ್ಯಾಲಯದ ಪ್ರಾಂಶುಪಾಲ ಎಚ್. ಕೆ.ಪ್ರಕಾಶ್, ಸುಂದರ ಶೆಟ್ಟಿ, ಪ್ರಾಥಮಿಕ ವಿಭಾಗದ ಮುಖ್ಯಗುರು ವಿಮಲ ಉಪಸ್ಥಿತರಿದ್ದರು. ದೈವ ನರ್ತಕ ಕೂಸಪ್ಪ ಮಿತ್ತಿಲ ಇಳಂತಿಲ, ಭತ್ತ ಕೃಷಿಕ ಚಿದಾನಂದ ಸಾಲ್ಯಾನ್ ಮತ್ತು ಶಾಲೆಗೆ ಭತ್ತ ಬೇಸಾಯ ಮಾಡಲು ತಮ್ಮ ಗದ್ದೆ ನೀಡಿ ಸಹಕರಿಸಿದ ಮುಳಿಯ ಮನೆಯ ಹಿರಿಯರಾದ ಕಲಾವತಿ ಹೆಗ್ಡೆರವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು. ಗದ್ದೆಗೆ ಅತಿಥಿಗಳು ಹಾಲೆರೆದು ನೇಜಿ ನೆಡುವ ಕೆಲಸಕ್ಕೆ ಚಾಲನೆ ನೀಡಿದರು. ಮಕ್ಕಳಿಗೆ ಕೆಸರುಗದ್ದೆಯ ಓಟ, ಹಗ್ಗಜಗ್ಗಾಟ, ಕಂಬಳ ಓಟ ಸ್ಪರ್ಧೆ ನಡೆಸಲಾಯಿತು. ಇಂದ್ರಪ್ರಸ್ಥ ವಿದ್ಯಾಲಯದ ಪ್ರಾಥಮಿಕ ವಿಭಾಗದ ಪುಟಾಣಿ ಮಕ್ಕಳು ಮತ್ತು ಕಾಲೇಜು ವಿಭಾಗದ ವಿದ್ಯಾರ್ಥಿಗಳು ಆಗಮಿಸಿ ಗದ್ದೆಯಲ್ಲಿ ಆಟವಾಡಿ ನೇಜಿನೆಟ್ಟು ಭತ್ತ ಬೇಸಾಯದ ಬಗ್ಗೆ ಅರಿತುಕೊಂಡರು. ಹತ್ತನೇ ತರಗತಿಯ ವಿದ್ಯಾರ್ಥಿಗಳಾದ ಅನ್ವಿ ಸ್ವಾಗತಿಸಿ, ಶಿವಾನಿ ಮತ್ತು ಭವಿಷ್ಯ ಕಾರ್ಯಕ್ರಮ ನಿರೂಪಿಸಿದರು. ಯಶ್ವಿತ ವಂದಿಸಿದರು.