ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ನ ದೊಡ್ಡ ತಪ್ಲು ಎಂಬಲ್ಲಿ ಗುಡ್ಡ ಕುಸಿತಗೊಂಡು ಮಣ್ಣು ರಸ್ತೆಗೆ ಬಿದ್ದ ಪರಿಣಾಮ ನಾಲ್ಕೈದು ವಾಹನಗಳು ಸಿಲುಕಿಗೊಂಡಿರುವ ಘಟನೆ ಜು.30ರಂದು ಮಧ್ಯಾಹ್ನದ ವೇಳೆಗೆ ನಡೆದಿದೆ. ಇದರಿಂದಾಗಿ ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್ ಆಗಿದೆ.
ಶಿರಾಡಿ ಘಾಟ್ ನ ಸಕಲೇಶಪುರ – ಮಾರ್ನಳ್ಳಿ ನಡುವಿನ ದೊಡ್ಡ ತಪ್ಲು ಎಂಬಲ್ಲಿ ಭಾರೀ ಮಳೆಯಿಂದಾಗಿ ಗುಡ್ಡ ಕುಸಿತಗೊಂಡಿದೆ. ಮಣ್ಣು ಕುಸಿದು ಹೆದ್ದಾರಿಯಲ್ಲಿ ಸಂಚಾರ ಮಾಡುತ್ತಿದ್ದ ವಾಹನದ ಮೇಲೆ ಬಿದ್ದಿದೆ. ಇನ್ನೋವಾ, ಟಿಪ್ಪರ್, ಗ್ಯಾಸ್ ಟ್ಯಾಂಕರ್, ಕಾರೊಂದರ ಮೇಲೆ ಮಣ್ಣು ಕುಸಿದು ಬಿದ್ದಿದ್ದು ಮಣ್ಣಿನಲ್ಲಿ ಸಿಲುಕಿಕೊಂಡಿವೆ. ವಾಹನದಲ್ಲಿದ್ದವರು ಅಪಾಯದಿಂದ ಪಾರು ಗೊಂಡಿದ್ದು ವಾಹನ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಶಿರಾಡಿ ಘಾಟ್ ನಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.