ತೋಡಿಗಿಳಿದು ಶಾಲೆಗೋಗುವ ವಿದ್ಯಾರ್ಥಿಗಳು…!?-ಕರ್ನೂರು ಚಾರ್ಪಟೆಯಲ್ಲೊಂದು ಅಪಾಯಕಾರಿ ಕಾಲುದಾರಿ

0

@ ಸಿಶೇ ಕಜೆಮಾರ್


ಪುತ್ತೂರು: ತುಂಬಿ ಹರಿಯುವ ತೋಡು, ಅರ್ಧಂಬರ್ಧ ಜರಿದು ಹೋಗಿರುವ ಕಾಲು ದಾರಿ, ತೋಡಿಗಿಳಿದು ಪ್ರತಿ ನಿತ್ಯ ಶಾಲೆಗೋಗುವ ಪುಟಾಣಿ ಮಕ್ಕಳು….ಸ್ವಲ್ಪ ಎಚ್ಚರ ತಪ್ಪಿದರೂ ಇಲ್ಲಿ ಮಕ್ಕಳ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ ಹಾಗಂತ ಮಕ್ಕಳಿಗೆ ಶಾಲೆಗೆ ಹೋಗಲು ಈ ಕಾಲುದಾರಿ ಅನಿವಾರ್ಯವಾಗಿದೆ. ಇಂತಹ ಒಂದು ಭಯಾನಕ ಕಾಲುದಾರಿ ಇರುವುದು ನೆಟ್ಟಣಿಗೆ ಮುಡ್ನೂರು ಗ್ರಾಪಂ ವ್ಯಾಪ್ತಿಯ ಕರ್ನೂರಿನ ಚಾರ್ಪಟೆ ಎಂಬಲ್ಲಿ. ಕರ್ನೂರು-ಪಾದೆ-ಚಾರ್ಪಟೆ ಮೂಲಕ ಹಿತ್ಲುಮೂಲೆಗೆ ಸಂಪರ್ಕ ಕಲ್ಪಿಸುವ ಅನಾದಿ ಕಾಲದ ಕಾಲುದಾರಿ ಇದಾಗಿದೆ.


ಹಲವು ವರ್ಷಗಳ ಹಿಂದಿನ ಕಾಲುದಾರಿ
ಕರ್ನೂರುನಿಂದ ಪಾದೆ ಚಾರ್ಪಟೆ ಮೂಲಕ ಹಿತ್ಲುಮೂಲೆ ಪ್ರದೇಶಗಳಿಗೆ ಹೋಗುವ ಕಾಲುದಾರಿ ಇದಾಗಿದೆ.ಕಳೆದ ಹಲವು ವರ್ಷಗಳಿಂದ ಜನರು ಈ ಕಾಲುದಾರಿಯ ಮೂಲಕವೇ ನಡೆದುಕೊಂಡು ಹೋಗುತ್ತಿದ್ದಾರೆ. ಖಾಸಗಿ ವ್ಯಕ್ತಿಗಳ ಜಮೀನಿನ ಬದಿಯಿಂದ ಈ ಕಾಲುದಾರಿ ಹಾದು ಹೋಗಿದ್ದು ಕಾಲುದಾರಿಯ ಪಕ್ಕದಲ್ಲೇ ತೋಡು ಇದೆ. ಇತ್ತೀಚಿನ ದಿನಗಳಲ್ಲಿ ಹಿತ್ಲುಮೂಲೆ ಭಾಗಕ್ಕೆ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ಆದರೆ ಇದು ಸುತ್ತುಬಳಸಿ ಹೋಗಬೇಕಾಗಿದೆ. ಜನರಿಗೆ ಬಹಳ ಸುಲಭವಾಗಿ ಕರ್ನೂರು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಕಾಲುದಾರಿ ಇದಾಗಿದೆ.


ತೋಡಿಗಿಳಿದು ಹೋಗುವ ವಿದ್ಯಾರ್ಥಿಗಳು
ಹಿತ್ಲುಮೂಲೆ, ಪಾದೆ, ಚಾರ್ಪಟೆ ಭಾಗದಲ್ಲಿ ಹಲವು ಮನೆಗಳಿದ್ದು ಈ ಭಾಗದಿಂದ 15 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸ್ಥಳೀಯ ಕರ್ನೂರು ಶಾಲೆ ಸೇರಿದಂತೆ ಪುತ್ತೂರಿನ ಶಾಲಾ, ಕಾಲೇಜಿಗಳಿಗೆ ಹೋಗುತ್ತಿದ್ದಾರೆ. ಈ ವಿದ್ಯಾರ್ಥಿಗಳು ಇದೇ ಕಾಲುದಾರಿಯ ಮೂಲಕ ನಡೆದುಕೊಂಡು ಬಂದು ಕರ್ನೂರು ಸೇರುತ್ತಾರೆ. ಇದೀಗ ತೋಡಿಗೆ ಇದ್ದ ಪಾಲ ಮುರಿದು ಹೋಗಿರುವುದರಿಂದ ತೋಡಿಗೆ ಇಳಿದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತೋಡಿನಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವುದರಿಂದ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.


ತೋಡಿಗೆ ಪಾಲ ಮತ್ತು ತಡೆಗೋಡೆಯ ಅವಶ್ಯಕತೆ ಇದೆ
ಶೀಘ್ರವಾಗಿ ತೋಡಿಗೆ ಪಾಲದ ಅವಶ್ಯಕತೆ ಇದೆ. ಈ ಹಿಂದೆ ಸ್ಥಳೀಯರೇ ಸೇರಿಕೊಂಡು ಪಾಲ ನಿರ್ಮಾಣ ಮಾಡುತ್ತಿದ್ದರು ಆದರೆ ಈ ವರ್ಷ ಪಾಲ ಹಾಕಲು ಯಾರೂ ಮುಂದೆ ಬಂದಿಲ್ಲ. ಪಾಲ ಹಾಕಲು ಬಹಳ ಖರ್ಚು ತಗಲುವುದರಿಂದ ಸ್ಥಳೀಯರು ಮುಂದೆ ಬರುತ್ತಿಲ್ಲ ಈ ಬಗ್ಗೆ ಪಂಚಾಯತ್ ಗಮನ ಹರಿಸಬೇಕು ಎನ್ನುವುದು ಸ್ಥಳೀಯ ಮನವಿಯಾಗಿದೆ. ಇದಲ್ಲದೆ ತೋಡಿನ ಬದಿಗೆ ತಡೆಗೋಡೆಯ ಅವಶ್ಯಕತೆ ಕೂಡ ಇದೆ.

ಖಾಸಗಿ ವ್ಯಕ್ತಿಗಳ ಜಮೀನಿನ ಮಧ್ಯದಲ್ಲಿ ಈ ಕಾಲುದಾರಿ ಹಾದು ಹೋಗುತ್ತಿದೆ. ಇಲ್ಲಿಗೆ ಪಂಚಾಯತ್‌ನಿಂದ ಈಗಾಗಲೇ 50 ಸಾವಿರ ರೂ.ಅನುದಾನ ಇಟ್ಟಿದ್ದೇವೆ ಹಾಗೇ ತೋಡಿಗೆ ಕಾಲುಸಂಕ ನಿರ್ಮಾಣಕ್ಕೆ ಅನುದಾನ ಕೊಡುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಕೂಡ ಮಾಡಿದ್ದೇವೆ. ಸಮಸ್ಯೆಯ ಬಗ್ಗೆ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
-ಶ್ರೀರಾಮ್ ಪಕ್ಕಳ, ಸದಸ್ಯರು ನೆಟ್ಟಣಿಗೆ ಮುಡ್ನೂರು ಗ್ರಾಪಂ


ಹಲವು ವರ್ಷಗಳಿಂದ ಚಾಲ್ತಿ ಇರುವ ಕಾಲುದಾರಿ ಇದಾಗಿದೆ. ಪ್ರಸ್ತುತ ತೋಡಿಗೆ ಪಾಲ ಇಲ್ಲದೇ ಇರುವುದರಿಂದ ಬಹಳಷ್ಟು ಸಮಸ್ಯೆಯಾಗಿದೆ. ಕಳೆದ ವರ್ಷ ನಾವೇ ಕೆಲವು ಮಂದಿ ಸೇರಿಕೊಂಡು ಪಾಲ ಮಾಡಿದ್ದೇವೆ. ಪ್ರತಿನಿತ್ಯ ಮಕ್ಕಳು ಇಲ್ಲಿ ತೋಡಿಗೆ ಇಳಿದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಜೀವಕ್ಕೆ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಾಗಿದೆ.
-ಸತೀಶ್ ರೈ ಕರ್ನೂರು, ಸ್ಥಳೀಯರು

LEAVE A REPLY

Please enter your comment!
Please enter your name here