ಉಪ್ಪಿನಂಗಡಿ: ದ.ಕ. ಜಿಲ್ಲೆಯ ಜೀವನದಿಗಳಲ್ಲೊಂದಾದ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದೆ. ಕುಮಾರಧಾರ ನದಿಯು ಮೈದುಂಬಿ ಹರಿಯುತ್ತಿದ್ದರೂ, ನೀರಿನ ಹರಿಯುವಿಕೆ ಶಾಂತವಾಗಿಯೇ ಇರುವುದರಿಂದ ಉಪ್ಪಿನಂಗಡಿಯ ಸಂಗಮ ಕ್ಷೇತ್ರದಲ್ಲಿ ನೇತ್ರಾವತಿ ನದಿಯ ಸರಾಗ ಹರಿಯುವಿಕೆಗೆ ತಡೆಯೊಡ್ಡುವಲ್ಲಿ ವಿಫಲವಾಗಿದೆ.
ಆದುದ್ದರಿಂದ ಈ ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದೆ. ಜೊತೆಯಲ್ಲಿ ಇದೇ ರೀತಿ ಮಳೆ ಮತ್ತು ನೀರಿನ ಹರಿವು ಮುಂದುವರಿದರೆ ರಾತ್ರಿ ವೇಳೆ ಸಂಗಮ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಮಂಗಳವಾರ ನಸುಕಿನ ಜಾವ 4 ಗಂಟೆಯ ಬಳಿಕ ನದಿ ನೀರಿನಲ್ಲಿ ಏರಿಕೆಯಾಗಿದ್ದು, ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ಬಳಿಯ ಸ್ನಾನಘಟ್ಟದಲ್ಲಿ ನೇತ್ರಾವತಿ ನದಿಗಿಳಿಯಲು ಇರುವ 39 ಮೆಟ್ಟಿಲುಗಳಲ್ಲಿ 4 ಮೆಟ್ಟಿಲುಗಳಷ್ಟೇ ಕಾಣಿಸಿಕೊಂಡಿತ್ತು. ಬೆಳಗ್ಗೆ 6 ಗಂಟೆಗೆ ನದಿ ನೀರಿನಲ್ಲಿ ಇಳಿಕೆಯಾಗಿದ್ದು, 6 ಮೆಟ್ಟಿಲು ಕಾಣುತ್ತಿತ್ತು. ಆದರೆ ಬೆಳಿಗ್ಗೆ 7.30ರಿಂದ ನದಿ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು, ಈಗ ಇಲ್ಲಿನ ಸಂಪೂರ್ಣ ಮೆಟ್ಟಿಲುಗಳು ಮುಳುಗಿ ನೇತ್ರಾವತಿ ನದಿಯ ನೀರು ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಎದುರು ಇರುವ ಶಾಂತಾ ಹೊಟೇಲ್ ತನಕ ತಲುಪಿದೆ.
ಹಲವು ಮನೆಗಳು ಜಲಾವೃತ: ಹಳೆಗೇಟು ಬಳಿಯ ಐತ ಮುಗೇರ ಎಂಬವರ ಮನೆಯು ನೇತ್ರಾವತಿ ನದಿ ನೀರಿನಿಂದ ಜಲಾವೃತಗೊಂಡಿದ್ದು, ಕಟ್ಟೆಯಿರುವ ಬಾವಿಯನ್ನು ಕೂಡಾ ನದಿ ನೀರು ಕಾಣದಂತೆ ಮಾಡಿದೆ. ಹಳೆಗೇಟು ಬಳಿ ನೇತ್ರಾವತಿ ನದಿಗೆ ಸಂಪರ್ಕ ಕಲ್ಪಿಸುವ ತೋಡಿನ ನೀರಿಗೆ ನದಿ ನೀರು ತಡೆಯಾಗಿದ್ದಲ್ಲದೇ, ತೋಡಿನಲ್ಲಿ ನದಿ ನೀರು ಹಾದು ಬಂದಿದ್ದರಿಂದ ಹಳೆಗೇಟು ರಾಷ್ಟ್ರೀಯ ಹೆದ್ದಾರಿಯ ಬದಿಯಿರುವ ಹಡೀಲು ಗದ್ದೆಗಳು ಸಂಪೂರ್ಣ ನೀರಿನಿಂದಾವೃತವಾಗಿ ಸಾಗರದಂತೆ ಕಾಣುತ್ತಿವೆ. ಇನ್ನೊಂದೆಡೆ ಹಳೆಗೇಟಿನಲ್ಲಿ ವಸತಿ ಸಂಕೀರ್ಣ, ಮನೆಗಳು ಜಲಾವೃತವಾಗಿದ್ದು, ಇಲ್ಲಿನ ಸುಮಾರು 12 ಮನೆ ಮಂದಿ ಬೇರೆಡೆ ಸ್ಥಳಾಂತರಗೊಂಡಿದ್ದಾರೆ. ಮಠ ಹಿರ್ತಡ್ಕದಲ್ಲಿ ನೇತ್ರಾವತಿ ನದಿ ತಟದ 4-5 ಮನೆಗಳು ನದಿ ನೀರಿನಲ್ಲಿ ಮುಳುಗಡೆಯಾಗುವ ಭೀತಿಯಲ್ಲಿದ್ದು, ಮನೆಯ ಸಾಮಾನು – ಸರಂಜಾಮುಗಳನ್ನು ಬೇರೆಡೆ ಸಾಗಿಸಿ ಸ್ಥಳಾಂತರದ ಸಿದ್ಧತೆಯಲ್ಲಿದ್ದಾರೆ.
ರಾಷ್ಟ್ರೀಯ ಹೆದ್ದಾರಿಗೆ ನೀರು: ಇಲ್ಲಿನ ಪಂಜಳ ಎಂಬಲ್ಲಿ ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ನೀರು ನುಗ್ಗಿದ್ದು, ಇಲ್ಲಿ ಪೊಲೀಸರು, ಸ್ಥಳೀಯರು ಸ್ಥಳದಲ್ಲಿದ್ದು, ವಾಹನಗಳನ್ನು ಒಂದಾದ ನಂತರ ಒಂದರಂತೆ ದಾಟಿಸುತ್ತಿದ್ದಾರೆ. ಇದರಿಂದಾಗಿ ಇಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿ ಟ್ರಾಫಿಕ್ ಜಾಮ್ ಕಂಡು ಬಂದಿದೆ. ಸಹಜವಾಗಿಯೇ ಉಭಯ ನದಿಗಳ ಪಾತ್ರದಲ್ಲಿರುವ ತಗ್ಗು ಪ್ರದೇಶಗಳು, ಕೃಷಿ ತೋಟಗಳು ಮುಳುಗಡೆಯಾಗಿವೆ.
ಬಂಡೆ ಕುಸಿತದ ಭೀತಿ: ಪಂಜಳದ ರಾಷ್ಟ್ರೀಯ ಹೆದ್ದಾರಿ ಬಳಿಯ ಪೆಟ್ರೋಲ್ ಪಂಪ್‌ವೊಂದರ ಸಮೀಪ ಹೆದ್ದಾರಿ ಚತುಷ್ಪಥ ಕಾಮಗಾರಿಗಾಗಿ ಗುಡ್ಡವನ್ನು ಅಗೆದಿದ್ದು, ಇದು ಮಳೆಗೆ ಇನ್ನಷ್ಟು ಜರಿಯುತ್ತಿದೆ. ಈ ಗುಡ್ಡದ ನಡುವಲ್ಲಿ ಎರಡು ಬೃಹತ್ ಬಂಡೆಕಲ್ಲುಗಳಿದ್ದು, ಅದರಡಿಯ ಮಣ್ಣು ಮಳೆಗೆ ಕರಗುತ್ತಿರುವುದರಿಂದ ಅದು ಕುಸಿದು ಬೀಳುವ ಆತಂಕ ಎದುರಾಗಿದೆ.
ಸ್ಪಂದಿಸದ ಪಂಚಾಯತ್, ಜನರ ಆಕ್ರೋಶ: ಹಳೆಗೇಟು ಬಳಿ ಸುಮಾರು 12ರಷ್ಟು ಮನೆಗಳು ಜಲಾವೃತಗೊಂಡು, ಅವರನ್ನು ಅಲ್ಲಿಂದ ಸ್ಥಳಾಂತರಿಸಿದರೂ ಸ್ಥಳಕ್ಕೆ ಗ್ರಾ.ಪಂ. ಪಿಡಿಒ ಆಗಲೀ, ಅಧ್ಯಕ್ಷರು- ಉಪಾಧ್ಯಕ್ಷರಾಗಲಿ ಭೇಟಿ ನೀಡಿಲ್ಲ. ಇವರ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ಸ್ಥಳೀಯರು ಉಪ್ಪಿನಂಗಡಿ ಗ್ರಾ.ಪಂ. ವಿರುದ್ಧ ತೀವೃ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವಾಹ ಭೀತಿ ಎದುರಾದಾಗ ಹಲವು ವರ್ಷಗಳಿಂದ ಈ ಪ್ರದೇಶ ಜಲಾವೃತಗೊಳ್ಳುತ್ತಿದ್ದು, ಇದಕ್ಕೆ ಈವರೆಗೆ ಪರಿಹಾರ ಸಿಕ್ಕಿಲ್ಲ. ಇಲ್ಲಿ ಚರಂಡಿ ವ್ಯವಸ್ಥೆಯನ್ನೂ ಗ್ರಾ.ಪಂ. ಸಮರ್ಪಕವಾಗಿ ಮಾಡಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿ ಬಂದಿದೆ.
ಕಂದಾಯ ಇಲಾಖಾಧಿಕಾರಿಗಳ ಭೇಟಿ: ಇಂದು ಬೆಳಗ್ಗೆಯಿಂದಲೇ ಪುತ್ತೂರು ತಹಶೀಲ್ದಾರ್ ಸೇರಿದಂತೆ ಕಂದಾಯ ಇಲಾಖಾಧಿಕಾರಿಗಳ ತಂಡ ಜಲಾವೃತ ಪ್ರದೇಶಗಳಿಗೆ ಭೇಟಿ, ನದಿ ಪಾತ್ರದ ಪ್ರದೇಶಗಳ ಪರಿಶೀಲನೆಯಲ್ಲಿದ್ದು, ಪ್ರಾಕೃತಿಕ ವಿಕೋಪಗಳು ಸಂಭವಿಸಿದರೆ ಕಾಳಜಿ ಕೇಂದ್ರದ ವ್ಯವಸ್ಥೆಯೊಂದಿಗೆ, ಪ್ರವಾಹವನ್ನೆದುರಿಸಲು ಸನ್ನದ್ಧವಾಗಿದೆ. ಆದರೆ ಜಲಾವೃತಗೊಂಡ ಮನೆಯವರು ಅವರ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿರುವುದರಿಂದ ಈವರೆಗೆ ಕಾಳಜಿ ಕೇಂದ್ರಕ್ಕೆ ಯಾರೂ ಕೂಡಾ ಶಿಫ್ಟ್ ಆಗಿಲ್ಲ. ಕಂದಾಯ ಇಲಾಖಾಧಿಕಾರಿಗಳ ತಂಡದೊಂದಿಗೆ ಉಪ್ಪಿನಂಗಡಿ ಪೊಲೀಸರು, ಪುತ್ತೂರು ಸಂಚಾರ ಠಾಣೆಯ ಪೊಲೀಸರು ಕೂಡಾ ಸ್ಥಳದಲ್ಲಿದ್ದು, ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ. ಮಾಜಿ ಶಾಸಕ ಸಂಜೀವ ಮಠಂದೂರು ಕೂಡಾ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪ್ರವಾಹ ರಕ್ಷಣಾ ತಂಡ ಸನ್ನದ್ಧ ಸ್ಥಿತಿಯಲ್ಲಿ: ನದಿಗಳ ನೀರು ಏರಿಕೆಯಾಗುತ್ತಲೇ ಇರುವುದರಿಂದ ಹೋಂ ಗಾರ್ಡ್‌ಗಳನ್ನೊಳಗೊಂಡ ಪ್ರವಾಹ ರಕ್ಷಣಾ ತಂಡ ಸನ್ನದ್ಧವಾಗಿದ್ದು, ಸಂಗಮ ಕ್ಷೇತ್ರದ ಬಳಿ ಪರಿಸ್ಥಿತಿ ನಿಯಂತ್ರಿಸುತ್ತಿದ್ದಾರೆ. ಅಗತ್ಯ ಬಂದರೆ ತಕ್ಷಣಕ್ಕೆ ಬೇರೆ ಕಡೆ ಹೋಗಲು ಕೂಡಾ ಇವರು ತಯಾರಾಗಿ ನಿಂತಿದ್ದು, ರಬ್ಬರ್ ಬೋಟನ್ನು ಪಿಕ್ ಅಪ್ ವಾಹನದಲ್ಲಿ ಈಗಾಗಲೇ ಲೋಡ್ ಮಾಡಿಟ್ಟುಕೊಂಡಿದ್ದಾರೆ.
ತಂಡೋಪತಂಡವಾಗಿ ಆಗಮಿಸುವ ಜನ: ಉಪ್ಪಿನಂಗಡಿಯಲ್ಲಿ ಈಗ ಸಂಗಮವಾಗಬಹುದು ಎಂಬ ಸುದ್ದಿಗಳನ್ನು ಕೇಳಿ ದೇವಾಲಯದ ಬಳಿ ತಂಡೋಪತಂಡವಾಗಿ ಜನರು ಆಗಮಿಸುತ್ತಿದ್ದು, ಇಲ್ಲಿ ಸೆಲ್ಫಿಯ ಸಂಭ್ರಮ ಮನೆ ಮಾಡಿದೆ. ಇವರನ್ನು ನಿಯಂತ್ರಿಸುವುದೂ ಕಷ್ಟಕರವಾಗಿದೆ. ದೇವಾಲಯ ಬಳಿ ವಾಹನಗಳ ಸುಗಮ ಸಂಚಾರಕ್ಕೂ ಅಡಚಣೆಯಾಗಿದ್ದು, ರಸ್ತೆಯ ಇಕ್ಕೆಲಗಳಲ್ಲಿ ವಾಹನಗಳನ್ನು ನಿಲ್ಲಿಸಿರುವುದು ಕಂಡು ಬಂದಿದೆ.
ಸಂಘ- ಸಂಸ್ಥೆಗಳ ಸಾಥ್: ಹೆದ್ದಾರಿಗೆ ನೀರು ನುಗ್ಗಿದಾಗ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಹಾಗೂ ಜಲಾವೃತಗೊಂಡ ಮನೆಗಳ ಸಾಮಾನು ಸರಂಜಾಮುಗಳ ಸ್ಥಳಾಂತರಕ್ಕೆ ಸಾರ್ವಜನಿಕರು, ಎಸ್ಸೆಸ್ಸೆಫ್, ಎಸ್ಕೆಎಸ್ಸೆಸ್ಸೆಫ್, ಎಸ್ಕೆಎಸ್ಸೆಸ್ಸೆಫ್ ವಿಖಾಯ ಸಂಘಟನೆಗಳ ಸದಸ್ಯರು ಸಾಥ್ ನೀಡಿದ್ದಾರೆ. ಎಸ್ಕೆಎಸ್ಸೆಸ್ಸೆಫ್ ವಿಖಾಯ ಸಂಘಟನೆಯವರು ನೆರೆ ಪರಿಸ್ಥಿತಿ ಎದುರಾದಾಗ ಜನರ ರಕ್ಷಣೆಗೆ ಬೇಕಾದ ಅಗತ್ಯ ಸಾಮಗ್ರಿ, ಬೋಟ್ ಹಾಗೂ ಈಜುಗಾರರ ತಂಡದೊಂದಿಗೆ ಕೂಟೇಲು ಬಳಿಯ ರಾಯಲ್ ಕಾಂಪ್ಲೆಕ್ಸ್ ಬಳಿ ಬೀಡು ಬಿಟ್ಟಿದ್ದಾರೆ.