ಪುಣಚ: ಜು.30 ರಂದು ಸುರಿದ ಕುಂಭ್ರದ್ರೋಣ ಮಳೆಯಿಂದಾಗಿ ಮನೆಯ ಪಕ್ಕದ ಗುಡ್ಡ ಕುಸಿತಗೊಂಡು ಮನೆ ಮಂದಿ ಅಪಾಯದಿಂದ ಪಾರಾದ ಘಟನೆ ಪುಣಚ ಗ್ರಾಮದ ಬಾಳೆಕುಮೇರಿ ಎಂಬಲ್ಲಿ ನಡೆದಿದೆ.
ಪುಣಚದ ಅಂಚೆ ಬಟವಾಡೆದಾರ ಬಾಳೆಕುಮೇರಿ ನಿವಾಸಿ ತೀರ್ಥಾನಂದ ಗೌಡರವರ ಮನೆ ಪಕ್ಕದಲ್ಲಿರುವ ಗುಡ್ಡ ಕುಸಿತ ಉಂಟಾಗಿದ್ದು ಗುಡ್ಡ ಜರಿದು ಮನೆಯ ಅಂಗಳದ ತನಕ ಬಂದು ನಿಂತಿದೆ. ಮನೆಯ ಅಂಗಳದ ತುಳಸಿ ಕಟ್ಟೆ ಸಹಿತ ಮಣ್ಣಲ್ಲಿ ಹೂತು ಹೋಗಿದ್ದು ಮನೆ ಅಪಾಯದ ಅಂಚಿನಲ್ಲಿದೆ. ಗುಡ್ಡದಲ್ಲಿ ಹಾಕಿದ್ದ ಅಡಿಕೆ ಮರಗಳು ಸಂಪೂರ್ಣ ನೆಲಸಮವಾಗಿವೆ. ಇದಲ್ಲದೆ ಮನೆಯ ಇನ್ನೊಂದು ಬದಿಯ ಗುಡ್ಡದಲ್ಲೂ ಬಿರುಕು ಕಾಣಿಸಿಕೊಂಡಿದ್ದು ಮನೆ ಅಪಾಯದ ಸ್ಥಿತಿಯಲ್ಲಿರುವುದರಿಂದ ಮನೆ ಮಂದಿ ಅಲ್ಲಿಂದ ಸ್ಥಳಾಂತರಗೊಂಡಿದ್ದಾರೆ.
ಘಟನೆ ನಡೆಯುತ್ತಿದ್ದಂತೆ ಊರವರು ಹಾಗೂ ಅಧಿಕಾರಿ ವರ್ಗದವರು ಸ್ಥಳಕ್ಕೆ ಧಾವಿಸಿದ್ದಾರೆ. ಅಲ್ಲೇ ಪಕ್ಕದಲ್ಲಿರುವ ದಿ.ಕೃಷ್ಣ ನಾಯ್ಕ ಬಾಳೆಕುಮೇರಿಯವರ ತನ್ನ ಖಾಲಿ ಮನೆಯೊಂದನ್ನು ತೀರ್ಥಾನಂದ ಗೌಡರವರ ಕುಟುಂಬಕ್ಕೆ ಬಿಟ್ಟು ಕೊಟ್ಟಿದ್ದು ಇದೀಗ ಆ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಮನೆ ಅಂಗಳದಲ್ಲಿ ವಾಹನಗಳನ್ನು ನಿಲ್ಲಿಸಲಾಗಿತ್ತು, ಊರವರ ಸಹಕಾರದೊಂದಿಗೆ ಮನೆ ಸಾಮಾಗ್ರಿಗಳನ್ನು ಹಾಗೂ ವಾಹನವನ್ನು ಅಲ್ಲಿಂದ ತೆರವು ಮಾಡುವ ಮೂಲ ಭಾರೀ ಅನಾಹುತ ತಪ್ಪಿದಂತಾಗಿದೆ. ಘಟನಾ ಸ್ಥಳಕ್ಕೆ ಪುಣಚ ಗ್ರಾಮ ಪಂಚಾಯತು ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿ, ವಿಟ್ಲ ಪೋಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.