ಬಲ್ನಾಡು ಪ್ರಾ.ಕೃ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡರ ಬೀಳ್ಕೊಡುಗೆ ಕಾರ್ಯಕ್ರಮ

0

ಪುತ್ತೂರು;ಬಲ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಸೀತಾರಾಮ ಗೌಡ ಕೆಯವರ ಬೀಳ್ಕೊಡುಗೆ ಸಮಾರಂಭವು ಜು.31ರಂದು ಸಂಘದ ನೂತನ ಸಭಾಂಗಣದಲ್ಲಿ ನಡೆಯಿತು.


ನಿವೃತ್ತರನ್ನು ಸನ್ಮಾನಿಸಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಮಾತನಾಡಿ, ಸೀತಾರಾಮ ಗೌಡರವರು 10 ವರ್ಷಗಳ ಕಾಲ ಕಾರ್ಯನಿರ್ವಹಣಾಧಿಕಾರಿ ಸೇರಿದಂತೆ ಒಟ್ಟು ಸುಧೀರ್ಘ 41 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ. ಇವರ ಅವಧಿಯಲ್ಲಿಯೇ ಸಂಘದ ಶಾಖೆ ಹಾಗೂ ಕೇಂದ್ರ ಕಚೇರಿ ಕಟ್ಟಡಗಳಿಗೆ ಜಾಗ ಖರೀದಿಸಿ ನೂತನ ಕಟ್ಟದ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದ್ದು ಸೀತಾರಾಮ ಗೌಡರವರು ಅದೃಷ್ಠವಂತರಾಗಿದ್ದಾರೆ. ಅವರ ಅಧಿಕಾರ ಕೊನೆಯ ಅವಧಿಯಲ್ಲಿ ಕೇಂದ್ರ ಕಚೇರಿಗೆ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದು ಹೆಚ್ಚು ಕಾಲ ನೂತನ ಕಟ್ಟಡದಲ್ಲಿ ಕರ್ತವ್ಯ ನಿರ್ವಹಿಸುವ ಅವಕಾಶ ಅವರಿಗೆ ದೊರೆತಿಲ್ಲ. ಕಟ್ಟಡ ನಿರ್ಮಾಣದಲ್ಲಿಯೂ ಅವರು ಪ್ರಮುಖ ಪಾತ್ರವಹಿಸಿದ್ದು ಸೀತಾರಾಮ ಗೌಡರವರ ಸೇವೆ ಅಮೂಲ್ಯ ಹಾಗೂ ಅನನ್ಯವಾದುದು. ಸಾಕಷ್ಟು ಅನುಭವಿಯಾಗಿರುವ ತಮ್ಮ ಅನುಭವವನ್ನು ಸಿಬಂದಿಗಳಿಗೆ ಧಾರೆ ಎರೆಯಬೇಕು ಎಂದರು.


ಸಂಘದ ನಿರ್ದೇಶಕ ಎ.ಎಂ ಪ್ರವೀಣಚಂದ್ರ ಆಳ್ವ ಮಾತನಾಡಿ,ಸುಧೀರ್ಘ 41 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸುವ ಮೂಲಕ ಸೀತಾರಾಮ ಗೌಡರಿಗೆ ಬಹುದೊಡ್ಡ ಯೋಗ ದೊರೆತಿದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸದಸ್ಯರು ಹಾಗೂ ಗ್ರಾಮಸ್ಥರಿಗೆ ಉತ್ತಮ ಸೇವೆ ನೀಡಿದ್ದಾರೆ. ಅವರ ಅವಧಿಯಲ್ಲಿಯೇ ಶಾಖೆ ಹಾಗೂ ಕೇಂದ್ರ ಕಚೇರಿಗೆ ನೂತನ ಕಟ್ಟಡಗಳು ನಿರ್ಮಾಣಗೊಂಡಿದೆ. ಸಂಘವು ನಷ್ಟದಲ್ಲಿರುವ ಸಂದರ್ಭದಲ್ಲಿ ನಾನು ಅಧ್ಯಕ್ಷನಾಗಿ ಸಂಘವನ್ನು ಮುನ್ನಡೆಸಿ ಸದಸ್ಯರಿಗೆ ಡಿವಿಡೆಂಡ್ ನೀಡುವುದರ ಜೊತೆಗೆ ಎ ಶ್ರೇಣಿ ಮುನ್ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಂಘದ ಸಾಲದ ಹೊರೆ ಇಳಿಸಿ ಸಾಲದಿಂದ ಮುಕ್ತವಾಗಿ ಲಾಭದಲ್ಲಿ ಮುನ್ನಡೆಸಲಾಗುವುದು. ಸದಸ್ಯರು ಡಿವಿಡೆಂಡ್ ನೀಡಲಾಗುವುದು. ಇದಕ್ಕೆಲ್ಲ ಸದಸ್ಯರ ಸಹಕಾರ ಅಗತ್ಯ ಎಂದರು.


ಸನ್ಮಾನ ಸ್ವೀಕರಿಸಿದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸೀತಾರಾಮ ಗೌಡ ಮಾತನಾಡಿ, 1983ರಲ್ಲಿ ಸಂಘಕ್ಕೆ ನೇಮಕಗೊಂಡು 41 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ್ದೇನೆ. ತನ್ನ ಅವಧಿಯಲ್ಲಿ ಆಡಳಿತ ಮಂಡಳಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಉತ್ತಮ ಸಲಹೆ, ಸೂಚನೆಗಳೊಂದಿಗೆ ಪ್ರೋತ್ಸಾಹ ನೀಡಿದ್ದಾರೆ. ಅವರಿಗೆಲ್ಲಾ ನಾನು ಆಭಾರಿಯಾಗಿದ್ದೇನೆ. ಜೊತೆಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರು, ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ವಲಯ ಮೇಲ್ವಿಚಾರಕ ವಸಂತ ಹಾಗೂ ನಮ್ಮ ಸಂಘದ ಸಿಬಂದಿಗಳು ಉತ್ತಮ ಸಹಕಾರ ನೀಡಿದ್ದು ಅವರಿಗೆಲ್ಲಾ ನಾನು ಚಿರಋಣಿಯಾಗಿದ್ದೇನೆ ಎಂದರು.


ಸಂಘದ ಅಧ್ಯಕ್ಷ ಸತೀಶ್ ಗೌಡ ಒಳಗುಡ್ಡೆ ಸನ್ಮಾನ ಪತ್ರ ಓದಿದರು. ಉಪಾಧ್ಯಕ್ಷ ಅಬ್ದುಲ್ ಹಕೀಂ, ನಿರ್ದೇಶಕರಾದ ಪ್ರಕಾಶ್ಚಂದ್ರ ಆಳ್ವ, ಅಂಬ್ರೋಸ್ ಡಿ ಸೋಜ, ನವೀನ ಕರ್ಕೇರಾ, ಸುರೇಶ್ ಯನ್, ಪ್ರಮೋದ್ ಬಿ. ಸೀತಾರಾಮ ಗೌಡ ಬಿ.ಕೆ. ವಿನಯ, ವಲಯ ಮೇಲ್ವಿಚಾರಕ ವಸಂತ ಯಸ್., ಬಲ್ನಾಡು ಗ್ರಾ.ಪಂ ಅಧ್ಯಕ್ಷ ಪರಮೇಶ್ವರಿ ಬಿ.ಆರ್., ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಲಕೃಷ್ಣ ರೈ ಕೆಳಗಿನಮನೆ, ಪಿಎಲ್‌ಡಿ ಬ್ಯಾಂಕ್‌ನ ನಿರ್ದೇಶಕ ಸುಜಾತ ರೈ, ನಿವೃತ್ತ ಸೇಲ್ಸ್‌ಮೆನ್ ವೆಂಕಟಕೃಷ್ಣ, ಸಿಬಂದಿಗಳಾದ ಶುಭ, ಪುಷ್ಪಾ, ಕೀರ್ತನ್, ಬಿಂದಿಯಾ ಹಾಗೂ ವಿನೋದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿರ್ದೇಶಕ ಚಂದಪ್ಪ ಪೂಜಾರಿ ಕಾಡ್ಲ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here