ರಾಮಕುಂಜ: ಜು.19ರಂದು ನಿಧನರಾದ ರಾಮಕುಂಜ ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ, ರಾಮಕುಂಜ ಗ್ರಾಮದ ನೀರಾಜೆ ನವೋದಯ ಫಾರ್ಮ್ ನಿವಾಸಿ ಯಂ.ವಾಸಪ್ಪ ಬಂಗ ಅವರಿಗೆ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆ ಜು.31ರಂದು ಕೊಯಿಲ ಗೋಕುಲನಗರದಲ್ಲಿರುವ ಸಂಘದ ಸಭಾಭವನದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ಮುರಳೀಕೃಷ್ಣ ಬಡಿಲ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ 1 ನಿಮಿಷ ಮೌನ ಪ್ರಾರ್ಥನೆ, ನುಡಿನಮನ ಸಲ್ಲಿಸಲಾಯಿತು. ವಾಸಪ್ಪ ಬಂಗ ಅವರು 1980ರಿಂದ 1990ರ ತನಕ ನಿರ್ದೇಶಕರಾಗಿ, 1990ರಿಂದ 1996ರ ತನಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಂಘದ ಏಳಿಗೆಗೆ ತಮ್ಮ ಅಪೂರ್ವ ಸೇವೆ ಸಲ್ಲಿಸಿದ್ದರು. ಉತ್ತಮ ಸಮಾಜ ಚಿಂತಕರು, ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು. 1966ರಲ್ಲಿ ಪ್ರಾರಂಭವಾದ ಸಂಘ 1976ರಲ್ಲಿ ಮುಚ್ಚಿಹೋಗಿತ್ತು. ಈ ಸಂಘವನ್ನು 1981-82ರಲ್ಲಿ ಪುನರುಜ್ಜೀವನಗೊಳಿಸುವಲ್ಲಿ ಊರಿನ ಹಲವು ಮಹನೀಯರೊಂದಿಗೆ ಕೈ ಜೋಡಿಸಿದ್ದರು. ಅವರ ಸ್ತುತ್ಯರ್ಹ ಸೇವೆಯನ್ನು ನೆನಪಿಸಿ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಸಂಘದ ನಿರ್ದೇಶಕರಾದ ರತ್ನಾವತಿ ಎಸ್.ಗೌಡ, ಸುಬ್ರಹ್ಮಣ್ಯ ಭಟ್, ರವಿಪ್ರಸನ್ನ ಸಿ.ಕೆ., ಬಾಲಕೃಷ್ಣ ಗೌಡ ಬೇಂಗದಪಡ್ಪು, ಪ್ರಕಾಶ್ ಕೆ.ಆರ್.ಕೆಮ್ಮಾರ, ಸುರೇಶ್ ನಾಕ್ ಕೊಯಿಲ, ಸಂಘದ ಮಾಜಿ ಅಧ್ಯಕ್ಷರಾದ ಪಿ.ಉದಯ ಕಶ್ಯಪ್ ಕೊಯಿಲ, ಕೆ.ಶಿವರಾಮ ಭಟ್ ಕಂಪ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಧರ್ಮಪಾಲ ರಾವ್, ಪ್ರಮುಖರಾದ ಲಕ್ಷ್ಮೀ ನಾರಾಯಣ ರಾವ್, ಕರುಣಾಕರ ಚೌಟ, ಯೋಗೀಶ್ ಟೈಲರ್, ಯೋಗೀಶ್ ಎ., ಬಾಲಕೃಷ್ಣ ಭಟ್, ಚಂದ್ರಶೇಖರ ಬರೆಂಪಾಡಿ, ಮೃತರ ಪುತ್ರ ಪುಷ್ಪರಾಜ ಬಂಗ ಬಿ.ಎನ್., ಅಳಿಯ ಬಾಲಚಂದ್ರ ಮತ್ತಿತರರು ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಚಿತ್ತರಂಜನ್ ರಾವ್ ಬದೆಂಜ ಹಾಗೂ ಸಿಬ್ಬಂದಿಗಳು ಕಾರ್ಯಕ್ರಮ ನಿರ್ವಹಿಸಿದರು.